ADVERTISEMENT

ಕೇನ್ ವಿಲಿಯಮ್ಸನ್ ಮತ್ತೊಂದು ಶತಕ

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ರಾಸ್ ಟೇಲರ್

ಪಿಟಿಐ
Published 22 ಜೂನ್ 2019, 19:57 IST
Last Updated 22 ಜೂನ್ 2019, 19:57 IST
ಕೇನ್ ವಿಲಿಯಮ್ಸನ್ ಬ್ಯಾಟಿಂಗ್‌ ವೈಖರಿ –ಎಎಫ್‌ಪಿ ಚಿತ್ರ
ಕೇನ್ ವಿಲಿಯಮ್ಸನ್ ಬ್ಯಾಟಿಂಗ್‌ ವೈಖರಿ –ಎಎಫ್‌ಪಿ ಚಿತ್ರ    

ಮ್ಯಾಂಚೆಸ್ಟರ್: ಕೇನ್ ವಿಲಿಯಮ್ಸನ್ ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಶತಕ ಹೊಡೆದರು. ಇದರಿಂದಾಗಿ ನ್ಯೂಜಿಲೆಂಡ್ ತಂಡವು ವೆಸ್ಟ್ ಇಂಡೀಸ್‌ ಎದುರು ಹೋರಾಟದ ಮೊತ್ತ ಗಳಿಸಿತು.

ಎಮಿರೇಟ್ಸ್ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿ ಶೆಲ್ಡನ್ ಕಾಟ್ರೆಲ್ ಮೊದಲ ಓವರ್‌ನಲ್ಲಿ ಕಿವೀಸ್‌ ಬಳಗಕ್ಕೆ ಆಘಾತ ನೀಡಿದರು. ಅದೊಂದೇ ಓವರ್‌ನಲ್ಲಿ ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ ಅವರ ವಿಕೆಟ್ ಕಬಳಿಸಿದರು. ಇಬ್ಬರೂ ಸೊನ್ನೆ ಸುತ್ತಿದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಕೇನ್ ವಿಲಿಯಮ್ಸನ್ (148; 154ಎಸೆತ, 15ಬೌಂಡರಿ, 1ಸಿಕ್ಸರ್ ) ಮತ್ತು ರಾಸ್ ಟೇಲರ್ (69; 95ಎಸೆತ, 7ಬೌಂಡರಿ) ಮೂರನೇ ವಿಕೆಟ್‌ಗೆ 160 ರನ್‌ ಸೇರಿಸಿದರು.

ADVERTISEMENT

ಅದರಿಂದಾಗಿ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 291 ರನ್ ಗಳಿಸಿತು.

ಕೇನ್ ವಿಲಿಯಮ್ಸನ್ ಅವರು ನಾಲ್ಕು ದಿನಗಳ ಹಿಂದೆ ಬಾಂಗ್ಲಾದೇಶದ ವಿರುದ್ಧವೂ ಶತಕ ಬಾರಿಸಿ ತಮ್ಮ ತಂಡವನ್ನು ಗೆಲ್ಲಿಸಿದ್ದರು. ಇಲ್ಲಿ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಕ್ರೀಸ್‌ಗೆ ಬಂದ ಅವರು ತಾಳ್ಮೆಯ ಆಟವಾಡಿದರು. ಹೋದ ಪಂದ್ಯದಲ್ಲಿ ವೈಫಲ್ಯ ಅನುಭಿಸಿದ್ದ ಟೇಲರ್ ಕೂಡ ಉತ್ತಮವಾಗಿ ಆಡಿದರು.

ಈ ಜೋಡಿಯು ವಿಂಡೀಸ್ ತಂಡದ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತಿತು. 35ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಸಾಂದರ್ಭಿಕ ಸ್ಪಿನ್ನರ್ ಕ್ರಿಸ್ ಗೇಲ್ ಅವರು ಈ ಜೊತೆಯಾಟವನ್ನು ಮುರಿದರು. ಗೇಲ್ ಎಸೆತವನ್ನು ಹೊಡೆಯಲು ಯತ್ನಿಸಿದ ಟೇಲರ್ ಅವರು ಜೇಸನ್ ಹೋಲ್ಡರ್‌ಗೆ ಕ್ಯಾಚ್ ಕೊಟ್ಟರು.

ಅದರ ನಂತರವೂ ಕೇನ್ಆಟ ಮುಂದುವರಿಯಿತು. ಆದರೆ ಅವರಿಗೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಸಮರ್ಥ ಬೆಂಬಲ ದೊರೆಯಲಿಲ್ಲ. ಆದರೂ ಅವರು ತಂಡದ ಮೊತ್ತ ಹೆಚ್ಚಿಸಿದರು. ಜೇಮ್ಸ್ ನಿಶಾಮ್ (28) ಮತ್ತು ಕಾಲಿನ್ ಡಿ ಗ್ರ್ಯಾಂಡ್ ಹೋಮ್ (16) ಕೊನೆಯ ಹಂತದ ಓವರ್‌ಗಳಲ್ಲಿ ಮಹತ್ವದ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 291(ಕೇನ್ ವಿಲಿಯಮ್ಸನ್ 148, ರಾಸ್ ಟೇಲರ್ 69, ಟಾಮ್ ಲಥಾಮ್ 12, ಜೇಮ್ಸ್‌ ನಿಶಾಮ್ 28, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 16, ಮಿಷೆಲ್ ಸ್ಯಾಂಟನರ್ 10, ಶೆಲ್ಡನ್ ಕಾಟ್ರೆಲ್ 56ಕ್ಕೆ4, ಕಾರ್ಲೊಸ್ ಬ್ರಾಥ್‌ವೇಟ್ 58ಕ್ಕೆ2, ಕ್ರಿಸ್ ಗೇಲ್ 8ಕ್ಕೆ1) ವಿವರ ಅಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.