ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್
ಪಿಟಿಐ ಚಿತ್ರಗಳು
ಮುಂಬೈ: ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವು ಇಂದು ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಹಾಗೂ ಮುಂಬೈ ಇಂಡಿಯನ್ಸ್ (ಎಂಐ) ಹೋರಾಟಕ್ಕೆ ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.
ಸತತ ಮೂರನೇ ಆವೃತ್ತಿಯಲ್ಲೂ ಗುಂಪು ಹಂತದ ಟೇಬಲ್ ಟಾಪರ್ ಆಗಿ, ನೇರವಾಗಿ ಫೈನಲ್ ಟಿಕೆಟ್ ಗಿಟ್ಟಿಸಿರುವ ಡೆಲ್ಲಿ, ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಮುಂಬೈ, ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಅಗ್ರ ಐವರ ಪಟ್ಟಿಯಲ್ಲಿ ಉಭಯ ತಂಡಗಳ ಇಬ್ಬಿಬ್ಬರು ಸ್ಥಾನ ಪಡೆದಿದ್ದಾರೆ. ಅಮೋಘ ಫಾರ್ಮ್‌ನಲ್ಲಿರುವ ನ್ಯಾಟ್ ಶಿವರ್ ಬ್ರಂಟ್ (493 ರನ್, 9 ವಿಕೆಟ್), ಹೇಯ್ಲಿ ಮ್ಯಾಥ್ಯೂಸ್ (304 ರನ್, 17 ವಿಕೆಟ್) ಮುಂಬೈ ಪಡೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಶಕ್ತಿಯಾಗಿದ್ದಾರೆ.
ಶೆಫಾಲಿ ವರ್ಮಾ ಹಾಗೂ ನಾಯಕಿ ಮೆಗ್ ಲ್ಯಾನಿಂಗ್ ಡೆಲ್ಲಿ ಬ್ಯಾಟಿಂಗ್‌ಗೆ ಆಧಾರವಾಗಿದ್ದಾರೆ. ಶಿಖಾ ಪಾಂಡೆ ಮತ್ತು ಜೆಸ್ ಜಾನ್ಸನ್ ಬೌಲಿಂಗ್‌ಗೆ ಬಲ ತುಂಬಬಲ್ಲರು.
ಉಭಯ ತಂಡಗಳ ಬಲಾಬಲ
ಎರಡೂ ತಂಡಗಳು ಡಬ್ಲ್ಯುಪಿಎಲ್‌ನಲ್ಲಿ ಈವರೆಗೆ 7 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಡೆಲ್ಲಿ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಮುಂಬೈ ಮೂರು ಬಾರಿ ಗೆದ್ದಿದೆ.
ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲಿ ಮುಂಬೈಗೆ ಮಣಿದಿದ್ದ ಡೆಲ್ಲಿ, ಗುಂಪು ಹಂತದಲ್ಲಿ ಸಮಬಲ (1–1) ಸಾಧಿಸಿತ್ತು. 2024ರ ಗುಂಪು ಹಂತದಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯ ಗೆದ್ದಿದ್ದವು. ಈ ಬಾರಿ ಎರಡೂ ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಸಾಧಿಸಿದೆ.
ಟಾಪ್ ಪರ್ಫಾರ್ಮರ್ಸ್
ಮುಂಬೈ: ನ್ಯಾಟ್ ಶಿವರ್ ಬ್ರಂಟ್ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿದ್ದಾರೆ. ಅವರು ಆಡಿರುವ 9 ಇನಿಂಗ್ಸ್‌ಗಳಲ್ಲಿ 5 ಅರ್ಧಸತಕ ಸಹಿತ 493 ರನ್ ಗಳಿಸಿದ್ದಾರೆ. ಅವರಿಗೆ ಉತ್ತಮ ಸಹಕಾರ ನೀಡುತ್ತಿರುವ ಹೀಲಿ ಮ್ಯಾಥ್ಯೂಸ್, (304 ರನ್) ತಮ್ಮ ತಂಡದ ಗೆಲುವಿಗೆ ಕೈ ಜೋಡಿಸಿದ್ದಾರೆ. ಹರ್ಮನ್‌ಪ್ರೀತ್ ಕೌರ್ (236 ರನ್) ಸಹ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವುದು ಈ ತಂಡಕ್ಕೆ ನೆರವಾಗಲಿದೆ.
ಬೌಲಿಂಗ್‌ನಲ್ಲೂ ಪರಾಕ್ರಮ ಮೆರೆದಿರುವ ಮ್ಯಾಥ್ಯೂಸ್, ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಅವರು 9 ಇನಿಂಗ್ಸ್‌ಗಳಲ್ಲಿ 15.88ರ ಸರಾಸರಿಲ್ಲಿ 17 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಅಮೇಲಿಯಾ ಕೆರ್ (16 ವಿಕೆಟ್), ನ್ಯಾಟ್ ಶಿವರ್ ಬ್ರಂಟ್ (9 ವಿಕೆಟ್) ಸಹ ಟೂರ್ನಿಯುದ್ದಕ್ಕೂ ಉತ್ತಮ ಬೌಲಂಗ್ ಮಾಡಿದ್ದಾರೆ.
ಡೆಲ್ಲಿ: ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಮತ್ತು ನಾಯಕಿ ಮೆಗ್ ಲ್ಯಾನಿಂಗ್, ತಂಡದ ಪರ ಗರಿಷ್ಠ ರನ್ ಕಲೆಹಾಕಿದ ಬ್ಯಾಟರ್‌ಗಳು. ಶೆಫಾಲಿ 300 ರನ್ ಗಳಿಸಿದ್ದರೆ, ಲ್ಯಾನಿಂಗ್ 263 ರನ್ ಬಾರಿಸಿದ್ದಾರೆ.
ತಲಾ 11 ವಿಕೆಟ್ ಪಡೆದಿರುವ ಶಿಖಾ ಪಾಂಡೆ ಹಾಗೂ ಜೆಸ್ ಜಾನ್ಸನ್ ಡೆಲ್ಲಿ ಪಡೆಯ ಬೌಲಿಂಗ್ ಶಕ್ತಿಯಾಗಿದ್ದಾರೆ.
ಡೆಲ್ಲಿ ಫೈನಲ್ ಹಾದಿ
ಮೊದಲ ಪಂದ್ಯ: 2 ವಿಕೆಟ್ ಜಯ vs ಮುಂಬೈ ಇಂಡಿಯನ್ಸ್
ಎರಡನೇ ಪಂದ್ಯ: 8 ರನ್ ಸೋಲು vs ರಾಯಲ್ ಚಾಂಲೆಂಜರ್ಸ್ ಬೆಂಗಳೂರು
ಮೂರನೇ ಪಂದ್ಯ: 7 ವಿಕೆಟ್ ಜಯ vs ಯುಪಿ ವಾರಿಯರ್ಸ್
ನಾಲ್ಕನೇ ಪಂದ್ಯ: 33 ರನ್ ಸೋಲು vs ಯುಪಿ ವಾರಿಯರ್ಸ್
ಐದನೇ ಪಂದ್ಯ: 6 ವಿಕೆಟ್ ಜಯ vs ಗುಜರಾತ್ ಜೈಂಟ್ಸ್
ಆರನೇ ಪಂದ್ಯ: 9 ವಿಕೆಟ್ ಜಯ vs ಮುಂಬೈ ಇಂಡಿಯನ್ಸ್
ಏಳನೇ ಪಂದ್ಯ: 9 ವಿಕೆಟ್ ಜಯ vs ರಾಯಲ್ ಚಾಂಲೆಂಜರ್ಸ್ ಬೆಂಗಳೂರು
ಎಂಟನೇ ಪಂದ್ಯ: 5 ವಿಕೆಟ್ ಸೋಲು vs ಗುಜರಾತ್ ಜೈಂಟ್ಸ್
ಮುಂಬೈ ಫೈನಲ್ ಹಾದಿ
ಮೊದಲ ಪಂದ್ಯ: 2 ವಿಕೆಟ್ ಸೋಲು vs ಡೆಲ್ಲಿ ಕ್ಯಾಪಿಟಲ್ಸ್
ಎರಡನೇ ಪಂದ್ಯ: 5 ವಿಕೆಟ್ ಜಯ vs ಗುಜರಾತ್ ಜೈಂಟ್ಸ್
ಮೂರನೇ ಪಂದ್ಯ: 4 ವಿಕೆಟ್ ಜಯ vs ರಾಯಲ್ ಚಾಂಲೆಂಜರ್ಸ್ ಬೆಂಗಳೂರು
ನಾಲ್ಕನೇ ಪಂದ್ಯ: 8 ವಿಕೆಟ್ ಜಯ vs ಯುಪಿ ವಾರಿಯರ್ಸ್
ಐದನೇ ಪಂದ್ಯ: 9 ವಿಕೆಟ್ ಸೋಲು vs ಡೆಲ್ಲಿ ಕ್ಯಾಪಿಟಲ್ಸ್
ಆರನೇ ಪಂದ್ಯ: 6 ವಿಕೆಟ್ ಜಯ vs ಯುಪಿ ವಾರಿಯರ್ಸ್
ಏಳನೇ ಪಂದ್ಯ: 9 ರನ್ ಜಯ vs ಗುಜರಾತ್ ಜೈಂಟ್ಸ್
ಎಂಟನೇ ಪಂದ್ಯ: 11 ರನ್ ಸೋಲು vs ರಾಯಲ್ ಚಾಂಲೆಂಜರ್ಸ್ ಬೆಂಗಳೂರು
ಎಲಿಮಿನೇಟರ್ ಪಂದ್ಯ: 47 ರನ್ ಜಯ vs ಗುಜರಾತ್ ಜೈಂಟ್ಸ್
ಡಬ್ಲ್ಯುಪಿಎಲ್‌ನಲ್ಲಿ ಡಿಸಿ ಸಾಧನೆ
2023: ರನ್ನರ್ಸ್ ಅಪ್
2024: ರನ್ನರ್ಸ್ ಅಪ್
ಡಬ್ಲ್ಯುಪಿಎಲ್‌ನಲ್ಲಿ ಎಂಐ ಸಾಧನೆ
2023: ಚಾಂಪಿಯನ್
2024: ಎಲಿಮಿನೇಟರ್ ಪಂದ್ಯದಲ್ಲಿ ಸೋಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.