ADVERTISEMENT

WPL ಕಿರೀಟಕ್ಕಾಗಿ 'ಆಪ್ತ ಗೆಳತಿಯರ' ಪೈಪೋಟಿ: ಇಂದು ಫೈನಲ್

ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು; ಎರಡನೇ ಪ್ರಶಸ್ತಿ ಮೇಲೆ ಸ್ಮೃತಿ ಪಡೆ ಕಣ್ಣು

ಪಿಟಿಐ
Published 4 ಫೆಬ್ರುವರಿ 2026, 19:46 IST
Last Updated 4 ಫೆಬ್ರುವರಿ 2026, 19:46 IST
<div class="paragraphs"><p>ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಜೆಮಿಮಾ ರಾಡ್ರಿಗಸ್ ಮತ್ತು ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಅವರು ಟಿ20 ಟ್ರೋಫಿಯೊಂದಿಗೆ</p></div>

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಜೆಮಿಮಾ ರಾಡ್ರಿಗಸ್ ಮತ್ತು ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಅವರು ಟಿ20 ಟ್ರೋಫಿಯೊಂದಿಗೆ

   

  –ಪಿಟಿಐ ಚಿತ್ರ

ವಡೋದರ: ಭಾರತ ಮಹಿಳಾ ತಂಡದಲ್ಲಿ ಜೊತೆಗೂಡಿ ಆಡುವ  ಇಬ್ಬರು ಗೆಳತಿಯರು ಗುರುವಾರ ಕೊತಂಬಿ ಕ್ರೀಡಾಂಗಣದಲ್ಲಿ ನಡೆಯುವ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿಯಲಿದ್ದಾರೆ. 

ADVERTISEMENT

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಜಿಮಿಮಾ ರಾಡ್ರಿಗಸ್ ಅವರೇ ‘ಗೆಳತಿಯರು’.  ಸ್ಮೃತಿ ಬಳಗವು ಎರಡನೇ ಬಾರಿ ಡಬ್ಲ್ಯುಪಿಎಲ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅದೇ ಡೆಲ್ಲಿ ತಂಡವು ಸತತ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದೆ. ಈ ಸಲ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. 

ಸ್ಮೃತಿ ನಾಯಕತ್ವದಲ್ಲಿಯೇ ಆರ್‌ಸಿಬಿ ತಂಡವು ಎರಡು ವರ್ಷಗಳ ಹಿಂದೆ ಚಾಂಪಿಯನ್ ಆಗಿತ್ತು. ಈ ಸಲ ಲೀಗ್ ಹಂತದ ಆರಂಭಿಕ ಐದು ಪಂದ್ಯಗಳಲ್ಲಿಯೂ ಸತತ ಜಯ ಸಾಧಿಸಿತು. ಡಬ್ಲ್ಯುಪಿಎಲ್‌ನಲ್ಲಿ ಈ ರೀತಿಯ ದಾಖಲೆ ಮಾಡಿದ ಮೊದಲ ತಂಡವಾಯಿತು.  ತಂಡದ ಎಲ್ಲರೂ ತಮ್ಮ ಸಾಮರ್ಥ್ಯ ಮೆರೆದಿದ್ದಾರೆ. ಸಂಘಟಿತ ಹೋರಾಟದ ಮೂಲಕ ತಂಡದ ಗೆಲುವಿನ ಓಟಕ್ಕೆ ಕಾರಣರಾಗಿದ್ದಾರೆ. ಎರಡು ಪಂದ್ಯಗಳನ್ನು ಸೋತಾಗ ಮತ್ತೆ ಪುಟಿದೆದ್ದು ತಂಡವನ್ನು ನೇರ ಫೈನಲ್‌ಗೆ ಕೊಂಡೊಯ್ದ ರೀತಿಯೂ ಅಮೋಘವಾದದ್ದು. 

ಸ್ಮೃತಿ (290 ರನ್), ಜಾರ್ಜಿಯಾ ವೊಲ್, ಗೌತಮಿ ನಾಯಕ, ಗ್ರೇಸ್ ಹ್ಯಾರಿಸ್, ರಿಚಾ ಘೋಷ್ ಹಾಗೂ  ಆಲ್‌ರೌಂಡರ್ ನದೀನ್ ಡಿ ಕ್ಲರ್ಕ್‌ (15 ವಿಕೆಟ್) ಅವರು ಅಮೋಘ ಫಾರ್ಮ್‌ನಲ್ಲಿದ್ದಾರೆ. ಕನ್ನಡದ ಹುಡುಗಿ ಶ್ರೇಯಾಂಕಾ ಪಾಟೀಲ (11 ವಿಕೆಟ್) ಅವರೂ ಈ ಟೂರ್ನಿಗೂ ಮುನ್ನ ಗಾಯದಿಂದಾಗಿ ಸುದೀರ್ಘ ಸಮಯದವರೆಗೆ ಕ್ರಿಕೆಟ್ ಕಣಕ್ಕಿಳಿದಿರಲಿಲ್ಲ. ಆದರೆ ಮರಳಿ ಬಂದ ನಂತರ ಅವರ ಆಟ ಪರಿಪಕ್ವಗೊಂಡಿದೆ. ಈ ಟೂರ್ನಿಯಲ್ಲಿ ಅವರು ಐದು ವಿಕೆಟ್ ಗೊಂಚಲು ಕೂಡ ಗಳಿಸಿದ್ದಾರೆ. ಅಲ್ಲದೇ ಮಹತ್ವದ ಜೊತೆಯಾಟಗಳನ್ನು ಮುರಿಯುವ ಕೌಶಲವನ್ನು ತೋರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಲಾರೆನ್ ಬೆಲ್ ತಮ್ಮ ಬೌಲಿಂಗ್‌ ಮೂಲಕ ಉತ್ತಮ  ಆರಂಭ ನೀಡುತ್ತಿದ್ದಾರೆ. ಇದರಿಂದಾಗಿ ತಂಡವು ಬಲಾಢ್ಯವಾಗಿ ಕಾಣುತ್ತಿದೆ.

ಇನ್ನೊಂದೆಡೆ ಎಲಿಮಿನೇಟರ್ ಪಂದ್ಯದಲ್ಲಿ ಜಿಮಿಮಾ ಅವರು ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಡೆಲ್ಲಿ ತಂಡದ ಜಯಕ್ಕೆ ಕಾರಣರಾಗಿದ್ದರು. ಲಿಝೆಲ್ ಲೀ, ಶಫಾಲಿ ವರ್ಮಾ, ಲಾರಾ ವೊಲ್ವಾರ್ಟ್ ಅವರು ತಂಡದ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. 

ಶಿನೆಲಿ ಹೆನ್ರಿ, ನಂದನಿ ಶರ್ಮಾ, ಶ್ರೀಚರಣಿ ಮತ್ತು ಮಿನು ಮಣಿ ಅವರು ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಾಗಿದ್ದಾರೆ. ಕಳೆದ ಮೂರು ವರ್ಷಗಳಲ್ಲಿಯೂ ರನ್ನರ್ಸ್ ಅಪ್ ಆಗಿದ್ದ ತಂಡವು ಈ ಬಾರಿ ಟ್ರೋಫಿಗೆ ಮುತ್ತಿಡುವ ಛಲದಲ್ಲಿದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.