
ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಟ್ರೋಫಿ
ಕೃಪೆ: WPL Official Website
ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ನಾಲ್ಕನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪಂದ್ಯಗಳು ಜನವರಿ 9ರಿಂದ ಫೆಬ್ರುವರಿ 5ರವರೆಗೆ ನವಿ ಮುಂಬೈ ಮತ್ತು ವಡೋದರಲ್ಲಿ ನಡೆಯಲಿವೆ.
ಸಾಮಾನ್ಯವಾಗಿ ಫೆಬ್ರುವರಿ – ಮಾರ್ಚ್ ಅವಧಿಯಲ್ಲಿ ಆಯೋಜನೆಗೊಳ್ಳುತ್ತಿದ್ದ ಡಬ್ಲ್ಯುಪಿಎಲ್, ಈ ವರ್ಷ ಸ್ವಲ್ಪ ಬೇಗನೆ ಆರಂಭವಾಗುತ್ತಿದೆ. ಫೆಬ್ರುವರಿ 7ರಂದು ಪುರುಷರ ಟಿ20 ವಿಶ್ವಕಪ್ ಟೂರ್ನಿ ಶುರುವಾಗುವ ಕಾರಣ, ಈ ಕ್ರಮ ಅನುಸರಿಸಲಾಗಿದೆ.
ಡಬ್ಲ್ಯುಪಿಎಲ್–2026ರ ಆವೃತ್ತಿಗೂ ಮುನ್ನ ಇಂದು ನವದೆಹಲಿಯಲ್ಲಿ ಮೆಗಾ ಹರಾಜು ನಡೆಯುತ್ತಿದೆ. ಈ ವೇಳೆ ಮಾತನಾಡಿರುವ ಲೀಗ್‌ನ ಮುಖ್ಯಸ್ಥ ಜಯೇಶ್ ಜಾರ್ಜ್, 'ಡಬ್ಲ್ಯುಪಿಎಲ್‌ನ ಮುಂದಿನ ಆವೃತ್ತಿಯು ನವಿ ಮುಂಬೈ ಹಾಗೂ ವಡೋದರದಲ್ಲಿ ನಡೆಯಲಿವೆ. ವಡೋದರದಲ್ಲಿ ಫೈನಲ್ ಆಯೋಜನೆಗೊಳ್ಳಲಿದೆ' ಎಂದು ಪ್ರಕಟಿಸಿದ್ದಾರೆ.
ಟೂರ್ನಿಯ ಉದ್ಘಾಟನಾ ಪಂದ್ಯ ಸೇರಿದಂತೆ ಮೊದಲಾರ್ಧದ ಹಣಾಹಣಿಗಳು ನವಿ ಮುಂಬೈನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿವೆ. ಭಾರತ ಮಹಿಳೆಯರ ತಂಡ ಇತ್ತೀಚೆಗೆ ಮುಕ್ತಾಯವಾದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದದ್ದು ಇಲ್ಲಿವೆ.
ದ್ವಿತೀಯಾರ್ಧದ ಪಂದ್ಯಗಳಿಗೆ ವೇದಿಕೆಯಾಗಲಿರುವ ವಡೋದರದ ಬರೋಡ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ಫೆಬ್ರುವರಿ 5ರಂದು ಫೈನಲ್‌ಗೂ ಸಾಕ್ಷಿಯಾಗಲಿದೆ.
ಲೀಗ್‌ನ ಮೂರು ಆವೃತ್ತಿಗಳ ಪೈಕಿ ಎರಡು ಬಾರಿ ಚಾಂಪಿಯನ್ ಎನಿಸಿರುವ ಮುಂಬೈ ಇಂಡಿಯನ್ಸ್, ಮೂರೂ ಸಲ ರನ್ನರ್ಸ್ ಅಪ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್, ಒಮ್ಮೆ ಟ್ರೋಫಿ ಮುಡಿಗೇರಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿರೀಕ್ಷಿತ ಪ್ರದರ್ಶನ ನೀಡಲು ಹೆಣಗಾಡುತ್ತಿರುವ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ.
ಹಿಂದಿನ ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದವರು
2023: ಮುಂಬೈ ಇಂಡಿಯನ್ಸ್
2024: ರಾಯಲ್ ಚಾಲೆಂಜರ್ಸ್ ಬೆಂಗಳೂರು
2025: ಮುಂಬೈ ಇಂಡಿಯನ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.