ADVERTISEMENT

ಧೋನಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ: ಯಜುವೇಂದ್ರ ಚಾಹಲ್‌

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 11:27 IST
Last Updated 28 ಜನವರಿ 2020, 11:27 IST
ಪಂದ್ಯವೊಂದರ ವೇಳೆ ಯಜುವೇಂದ್ರ ಚಾಹಲ್‌ ಮತ್ತು ಮಹೇಂದ್ರ ಸಿಂಗ್‌ ಧೋನಿ
ಪಂದ್ಯವೊಂದರ ವೇಳೆ ಯಜುವೇಂದ್ರ ಚಾಹಲ್‌ ಮತ್ತು ಮಹೇಂದ್ರ ಸಿಂಗ್‌ ಧೋನಿ   

ಹ್ಯಾಮಿಲ್ಟನ್‌ (ನ್ಯೂಜಿಲೆಂಡ್): ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಹೇಳಿಕೊಂಡಿದ್ದಾರೆ.

ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡಆಕ್ಲೆಂಡ್‌ನಿಂದ ಹ್ಯಾಮಿಲ್ಟನ್‌ಗೆ ತೆರಳುವ ವೇಳೆ, ಬಿಸಿಸಿಐನ ‘ಚಾಹಲ್‌ ಟಿವಿ’ಯಲ್ಲಿ ಚಾಹಲ್‌ ಈ ರೀತಿ ಹೇಳಿದ್ದಾರೆ.

ತಂಡದ ಬಸ್‌ನಲ್ಲಿ ಮೊದಲುಜಸ್‌ಪ್ರೀತ್‌ ಬೂಮ್ರಾ, ರಿಷಭ್‌ ಪಂತ್‌, ಮೊಹಮದ್‌ ಶಮಿ, ಕೆ.ಎಲ್‌. ರಾಹುಲ್‌, ಕುಲದೀಪ್‌ ಯಾದವ್‌ ಅವರೊಂದಿಗೆ ತಮಾಷೆಯ ಮಾತುಕತೆ ನಡೆಸಿದ ಅವರು ಬಳಿಕ ಬಸ್‌ನ ಹಿಂಬದಿಯ ಬಲತುದಿಯ ಸೀಟ್‌ ಬಳಿಗೆ ತೆರಳಿ ಧೋನಿ ಅವರನ್ನು ನೆನಪಿಸಿಕೊಂಡಿದ್ದಾರೆ.

ADVERTISEMENT

‘ಇದು ದಿಗ್ಗಜ ಆಟಗಾರ ಎಂಎಸ್‌ ಧೋನಿ ಕೂರುತ್ತಿದ್ದ ಸೀಟ್‌. ಈಗ ಇಲ್ಲಿ ಯಾರೊಬ್ಬರೂ ಕೂರುವುದಿಲ್ಲ. ನಾವು ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ’ ಎಂದಿದ್ದಾರೆ.

2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿರುವ ಧೋನಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಿಂದ ಅವರನ್ನು ಕೈಬಿಟ್ಟ ಮೇಲಂತೂ ಧೋನಿ ಕ್ರಿಕೆಟ್‌ ಬದುಕು ಬಹುತೇಕ ಮುಗಿದಂತೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದಾಗ್ಯೂ ಸ್ವತಃ ಧೋನಿ ನಿವೃತ್ತಿಯ ಬಗ್ಗೆ ಪ್ರತಿಕ್ರಿಯೆ ನೀಡದಿರುವುದರಿಂದ ಈ ವಿಚಾರದಲ್ಲಿ ಯಾವುದೇ ಸ್ಪಷ್ಟತೆಯಿಲ್ಲ.ಜನವರಿ 16ರಂದು ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ್ದಬಿಸಿಸಿಐ ಧೋನಿ ಹೆಸರನ್ನು ಕೈಬಿಟ್ಟಿತ್ತು.

ಇದೇ ವರ್ಷ ನಡೆಯಲಿರುವ ಐಪಿಎಲ್‌ನಲ್ಲಿ ಆಡಲಿದ್ದಾರೆ. ಟೂರ್ನಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಐಸಿಸಿ ಟಿ20 ವಿಶ್ವಕಪ್‌ ಆಯ್ಕೆಗೆ ಪರಿಗಣಿಸಲಾಗುವುದು ಎಂದುತಂಡದ ಮುಖ್ಯಕೋಚ್ ರವಿಶಾಸ್ತ್ರಿ ತಿಳಿಸಿದ್ದರು.

ಸದ್ಯನ್ಯೂಜಿಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದ್ದು, ಮೂರನೇ ಪಂದ್ಯ ನಾಳೆ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ. ಈ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿ ವಿರಾಟ್‌ ಕೊಹ್ಲಿ ಪಡೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.