ADVERTISEMENT

ಫುಟ್‌ಬಾಲ್‌ | ಎಟಿಕೆ–ಬಾಗನ್‌ ವಿಲೀನ

ಪಿಟಿಐ
Published 11 ಜುಲೈ 2020, 2:39 IST
Last Updated 11 ಜುಲೈ 2020, 2:39 IST
ಎಟಿಕೆ ಮೋಹನ್‌ ಬಾಗನ್‌ ಎಫ್‌ಸಿ ತಂಡದ ಲಾಂಛನ –ಟ್ವಿಟರ್‌ ಚಿತ್ರ 
ಎಟಿಕೆ ಮೋಹನ್‌ ಬಾಗನ್‌ ಎಫ್‌ಸಿ ತಂಡದ ಲಾಂಛನ –ಟ್ವಿಟರ್‌ ಚಿತ್ರ    

ಕೋಲ್ಕತ್ತ:ಏಷ್ಯಾದ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾಗಿರುವ ಮೋಹನ್‌ ಬಾಗನ್‌ ಹಾಗೂ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ದಾಖಲೆಯ ಮೂರು ಪ್ರಶಸ್ತಿ ಗೆದ್ದಿರುವ ಎಟಿಕೆ ಕ್ಲಬ್‌ಗಳು ಶುಕ್ರವಾರ ಅಧಿಕೃತವಾಗಿ ವಿಲೀನಗೊಂಡವು.

30 ನಿಮಿಷಗಳ ಕಾಲ ನಡೆದ ವರ್ಚ್ಯುವಲ್‌ ಸಭೆಯಲ್ಲಿ ಉಭಯ ಕ್ಲಬ್‌ಗಳ ವಿಲೀನಕ್ಕೆ ಅಂಕಿತ ಹಾಕಲಾಯಿತು. ಕ್ಲಬ್‌ಗೆ ಎಟಿಕೆ ಮೋಹನ್‌ ಬಾಗನ್‌ ಎಫ್‌ಸಿ ಎಂದು ನಾಮಕರಣ ಮಾಡಲಾಗಿದ್ದು ಮುಂದಿನ ಆವೃತ್ತಿಯ ಐಎಸ್‌ಎಲ್‌ನಲ್ಲಿ ಇದೇ ಹೆಸರಿನಡಿ ತಂಡವು ಕಣಕ್ಕಿಳಿಯಲಿದೆ.

ಇನ್ನು ಮುಂದೆ ತಂಡದ ಆಟಗಾರರುಬಾಗನ್‌ ತಂಡವು ಈ ಹಿಂದೆ ಬಳಸುತ್ತಿದ್ದ ಹಸಿರು ಮತ್ತು ಕಡುಕೆಂಪು ಮಿಶ್ರಿತ ಬಣ್ಣದ ಪೋಷಾಕನ್ನೇ ಧರಿಸಿ ಆಡಲಿದ್ದಾರೆ. ಬಾಗನ್‌ ತಂಡ ಈ ಹಿಂದೆ ಹೊಂದಿದ್ದ ‘ಸೇಲಿಂಗ್‌ ದೋಣಿ’ಯ ಲಾಂಛನವನ್ನೇ ಮುಂದುವರಿಸಲು ಸಭೆಯಲ್ಲಿ ಭಾಗವಹಿಸಿದ್ದ ನಿರ್ದೇಶಕರು ತೀರ್ಮಾನಿಸಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದಲ್ಲಿ ವಿಶ್ವಶ್ರೇಷ್ಠ ಫುಟ್‌ಬಾಲ್‌ ಅಕಾಡೆಮಿ ಸ್ಥಾಪಿಸಲೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಕಾಡೆಮಿಯ ಮೈದಾನದಲ್ಲೇ ಎಟಿಕೆ ಬಾಗನ್‌ ತಂಡದ ಐಎಸ್‌ಎಲ್‌ ಮತ್ತು ಎಎಫ್‌ಸಿ ಪಂದ್ಯಗಳನ್ನು ಆಯೋಜಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ.

‘ಬಾಲ್ಯದಿಂದಲೂ ಬಾಗನ್‌ ತಂಡದ ಆಟವನ್ನು ನೋಡುತ್ತಾ ಬೆಳೆದಿದ್ದೇನೆ. ಆ ಕ್ಲಬ್‌ ಬಗ್ಗೆ ನನಗೆ ವಿಶೇಷ ಒಲವಿದೆ. ಹೀಗಾಗಿ ಕ್ಲಬ್‌ ಈ ಹಿಂದೆ ಬಳಸುತ್ತಿದ್ದ ಜೆರ್ಸಿಯನ್ನೇ ಉಳಿಸಿಕೊಂಡಿದ್ದೇವೆ. ಎಟಿಕೆ ಮೋಹನ್‌ ಬಾಗನ್‌ ಎಫ್‌ಸಿ, ವಿಶ್ವಶ್ರೇಷ್ಠ ತಂಡವಾಗಿ ರೂಪುಗೊಳ್ಳಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ’ ಎಂದು ಕ್ಲಬ್‌ನ ಮಾಲೀಕ ಸಂಜೀವ್‌ ಗೋಯೆಂಕಾ ತಿಳಿಸಿದ್ದಾರೆ.

‘ಎಟಿಕೆ ಮತ್ತು ಬಾಗನ್‌ ಕ್ಲಬ್‌ಗಳು ವಿಲೀನವಾಗಿರುವುದು ಸ್ವಾಗತಾರ್ಹ ಕ್ರಮ. ಈ ತಂಡವು ಮುಂದೆ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಲಿದೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

ಸೌರವ್‌ ಅವರು ಎಟಿಕೆ ತಂಡದ ಸಹ ಮಾಲೀಕರಾಗಿದ್ದಾರೆ.

‘ಎರಡು ಬಲಿಷ್ಠ ಕ್ಲಬ್‌ಗಳು ಈಗ ಒಂದಾಗಿವೆ. ಭಾರತದ ಫುಟ್‌ಬಾಲ್‌ ಬೆಳವಣಿಗೆಯ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆಯಾಗಿದೆ’ ಎಂದು ಐಎಸ್‌ಎಲ್‌ ಸಂಸ್ಥಾಪಕಿ ನೀತಾ ಅಂಬಾನಿ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.