ADVERTISEMENT

ಸ್ಥಾನಕ್ಕಿಲ್ಲ ಕುತ್ತು; ಕಾದಿದೆ ಕಾಲ್ಚಳಕದ ಗಮ್ಮತ್ತು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಇಂದು ಬಿಎಫ್‌ಸಿ–ಎಟಿಕೆ ಹಣಾಹಣಿ

ವಿಕ್ರಂ ಕಾಂತಿಕೆರೆ
Published 21 ಫೆಬ್ರುವರಿ 2020, 20:29 IST
Last Updated 21 ಫೆಬ್ರುವರಿ 2020, 20:29 IST
ನೀಲಿ ಪೆರ್ಡೊಮೊ ಮೇಲೆ ಬಿಎಫ್‌ಸಿ ತಂಡ ಭರವಸೆ ಇರಿಸಿಕೊಂಡಿದೆ –ಪ್ರಜಾವಾಣಿ ಚಿತ್ರ
ನೀಲಿ ಪೆರ್ಡೊಮೊ ಮೇಲೆ ಬಿಎಫ್‌ಸಿ ತಂಡ ಭರವಸೆ ಇರಿಸಿಕೊಂಡಿದೆ –ಪ್ರಜಾವಾಣಿ ಚಿತ್ರ   
""

ಬೆಂಗಳೂರು: ಪ್ಲೇ ಆಫ್ ಹಂತದಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತು ಎಟಿಕೆ ನಡುವಿನ ಕದನದ ಕುತೂಹಲ ಗರಿಗೆದರಿದೆ. ಕಂಠೀರವ ಕ್ರೀಡಾಂಗಣದಲ್ಲಿಶನಿವಾರ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಈ ಹಣಾಹಣಿ ಉಭಯ ತಂಡಗಳಿಗೆ ಲೀಗ್ ಹಂತದ ಕೊನೆಯ ಪಂದ್ಯ.

ತಲಾ 17 ಪಂದ್ಯಗಳನ್ನು ಆಡಿರುವ ಎಟಿಕೆ ಮತ್ತು ಬಿಎಫ್‌ಸಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಈ ಪಂದ್ಯದ ಫಲಿತಾಂಶದಿಂದ ಪ್ಲೇ ಆಫ್ ಹಂತದ ಸ್ಥಾನಗಳಲ್ಲಿ ಏರುಪೇರು ಆಗದು. ಗೆಲುವಿನೊಂದಿಗೆ ಲೀಗ್ ವ್ಯವಹಾರ ಮುಗಿಸಲು ತಂಡಗಳು ಪ್ರಯತ್ನಿಸಲಿವೆ. ಕೋಲ್ಕತ್ತದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಎಟಿಕೆಗೆ ಮಣಿದಿದ್ದ (0–1) ಬಿಎಫ್‌ಸಿ ತವರಿನ ಪ್ರೇಕ್ಷಕರ ಮುಂದೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕೆ ಇಳಿಯಲಿದೆ. ಇದೇ ಕ್ರೀಡಾಂಗಣದಲ್ಲಿ 26ರಂದು ನಡೆಯಲಿರುವ ಎಎಫ್‌ಸಿ ಕಪ್‌ನ ಪ್ಲೇ ಆಫ್ ಹಂತದ ಮಹತ್ವದ ಪಂದ್ಯಕ್ಕೆ ಸಜ್ಜಾಗುವುದಕ್ಕೂ ಆತಿಥೇಯರಿಗೆ ಇದು ಉತ್ತಮ ಅವಕಾಶ.

ಹಾಲಿ ಚಾಂಪಿಯನ್ ಬಿಎಫ್‌ಸಿ ಈ ಬಾರಿ ಲೀಗ್‌ನಲ್ಲಿ ಏಳು ಬೀಳುಗಳೊಂದಿಗೆ ಪ್ಲೇ ಆಫ್ ಹಂತ ಪ್ರವೇಶಿಸಿದೆ. ತಂಡದ ಪರವಾಗಿ ನಾಯಕ ಸುನಿಲ್ ಚೆಟ್ರಿ ಹೊರತುಪಡಿಸಿ ಬೇರೆ ಯಾರಿಗೂ ನಿರೀಕ್ಷಿತ ಪ್ರದರ್ಶನ ನೀಡಲು ಆಗಲಿಲ್ಲ. ಸ್ನಾಯು ಸೆಳೆತಕ್ಕೆ ಒಳಗಾಗಿರುವ ಚೆಟ್ರಿ ಹಿಂದಿನ ಎರಡು ಪಂದ್ಯಗಳಲ್ಲಿ (ಚೆನ್ನೈಯಿನ್ ಎಫ್‌ಸಿ, ಕೇರಳ ಬ್ಲಾಸ್ಟರ್ಸ್‌) ಕಣಕ್ಕೆ ಇಳಿದಿರಲಿಲ್ಲ.

ADVERTISEMENT

ಎಎಫ್‌ಸಿ ಕಪ್‌ನ ಮೊದಲ ಪಂದ್ಯದಲ್ಲಿ ಆಡಿದ್ದರೂ ನಂತರ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದ ಅವರು ಈಗ ಫಿಟ್ ಆಗಿದ್ದಾರೆ. ಎಟಿಕೆ ಎದುರಿನ ಪಂದ್ಯದ ಮೂರು ದಿನಗಳ ನಂತರ ಎಎಫ್‌ಸಿ ಕಪ್ ಪ್ಲೇ ಆಫ್‌ನ ಎರಡನೇ ಲೆಗ್ ಪಂದ್ಯ ಇರುವುದರಿಂದ ಚೆಟ್ರಿ ಇಲ್ಲಿ ‘ಅಭ್ಯಾಸ’ಕ್ಕೆ ಇಳಿಯುವರೇ ಎಂಬುದು ಕುತೂಹಲದ ಅಂಶ. ಅಮಾನತುಗೊಂಡಿದ್ದ ಜುವಾನನ್ ವಾಪಸಾಗಿದ್ದಾರೆ. ಆಲ್ಬರ್ಟ್ ಸೆರಾನ್ ಶನಿವಾರದ ಪಂದ್ಯಕ್ಕೆ ಲಭ್ಯರಿಲ್ಲ.

ರಾಯ್ ಕೃಷ್ಣ ಮೇಲೆ ಕಣ್ಣು: ಐಎಸ್‌ಎಲ್ ಆರನೇ ಆವೃತ್ತಿಯ ಮಿಂಚಿನ ಆಟಗಾರ ರಾಯ್ ಕೃಷ್ಣ ಉದ್ಯಾನ ನಗರಿಯಲ್ಲಿ ಗಮನ ಸೆಳೆಯಲಿದ್ದಾರೆ. ಎಂಥ ಸವಾಲನ್ನೂ ಮೆಟ್ಟಿ ನಿಂತು ಚೆಂಡನ್ನು ಗುರಿ ಸೇರಿಸುವ ಚಾಕಚಕತ್ಯ ಆಟಗಾರ ರಾಯ್ ಈ ಬಾರಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ (14 ಗೋಲು) ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಅವರನ್ನು ನಿಯಂತ್ರಿಸಲು ಬಿಎಫ್‌ಸಿಯ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಯಶಸ್ವಿಯಾಗುವರೇ ಎಂಬ ಕುತೂಹಲವೂ ಫುಟ್‌ಬಾಲ್ ಪ್ರಿಯರಲ್ಲಿದೆ. ಅನಾಸ್ ಎಡತೋಡಿಕ ಗಾಯಗೊಂಡಿದ್ದು ಜೇವಿಯರ್ ಹೆರ್ನಾಂಡೆಸ್ ಅಮಾನತುಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.