ADVERTISEMENT

ಇಂಡಿಯನ್ ಸೂಪರ್ ಲೀಗ್: ಬಿಎಫ್‌ಸಿಗೆ ಲಯಕ್ಕೆ ಮರಳುವ ಬಯಕೆ

ನೆರಿಜಸ್ ವಲ್ಸ್‌ಕಿಸ್‌, ಸುನಿಲ್ ಚೆಟ್ರಿ ಮೇಲೆ ಕಣ್ಣು

ಪಿಟಿಐ
Published 27 ಡಿಸೆಂಬರ್ 2020, 18:50 IST
Last Updated 27 ಡಿಸೆಂಬರ್ 2020, 18:50 IST
ಅಭ್ಯಾಸಕ್ಕೂ ಮೊದಲು ವಾರ್ಮ್ ಅಪ್ ಮಾಡಿಕೊಂಡ ಬಿಎಫ್‌ಸಿ ಆಟಗಾರರು –ಐಎಸ್‌ಎಲ್‌ ಮೀಡಿಯಾ ಚಿತ್ರ
ಅಭ್ಯಾಸಕ್ಕೂ ಮೊದಲು ವಾರ್ಮ್ ಅಪ್ ಮಾಡಿಕೊಂಡ ಬಿಎಫ್‌ಸಿ ಆಟಗಾರರು –ಐಎಸ್‌ಎಲ್‌ ಮೀಡಿಯಾ ಚಿತ್ರ   

ಫತೋರ್ಡ: ಸತತ ಆರು ‍ಪಂದ್ಯಗಳಲ್ಲಿ ಸೋಲರಿಯದೆ ಮುನ್ನುಗ್ಗಿದರೂ ಏಳನೇ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತೆ ಜಯದ ಲಯಕ್ಕೆ ಮರಳುವ ಭರವಸೆಯಲ್ಲಿದೆ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಬಿಎಫ್‌ಸಿ ತಂಡ ಜೆಮ್ಶೆಡ್‌ಪುರ ಎಫ್‌ಸಿಯನ್ನು ಎದುರಿಸಲಿದೆ. ಎರಡೂ ತಂಡಗಳು ಏಳನೇ ಆವೃತ್ತಿಯಲ್ಲಿ ಈ ವರೆಗೆ ಉತ್ತಮ ಸಾಮರ್ಥ್ಯ ಮೆರೆದಿರುವ ಕಾರಣ ಈ ಹಣಾಹಣಿ ರೋಚಕವಾಗುವ ನಿರೀಕ್ಷೆ ಇದೆ.

ಈ ಬಾರಿ ಬಹುತೇಕ ಎಲ್ಲ ಪಂದ್ಯಗಳಲ್ಲೂ ಬಿಎಫ್‌ಸಿ ದ್ವಿತೀಯಾರ್ಧದಲ್ಲಿ ಗೋಲು ಗಳಿಸಿದೆ. ಇಲ್ಲಿಯ ವರೆಗೆ ಒಟ್ಟು 11 ಬಾರಿ ಚೆಂಡನ್ನು ಗುರಿಮುಟ್ಟಿಸಿರುವ ತಂಡ ಅತಿ ಹೆಚ್ಚು ಗೋಲು ಗಳಿಸಿದ ತಂಡದೊಂದಿಗೆ (ಮುಂಬೈ ಸಿಟಿ ಎಫ್‌ಸಿ) ಜಂಟಿ ಅಗ್ರಸ್ಥಾನದಲ್ಲಿದೆ. ತಂಡ ಬಿಟ್ಟುಕೊಟ್ಟಿರುವ ಗೋಲುಗಳ ಸಂಖ್ಯೆ ಕೇವಲ ಎಂಟು. ಅತ್ತ ಜೆಮ್ಶೆಡ್‌ಪುರ ತಂಡದ ಅಂಕಿಅಂಶಗಳ ಮೇಲೆ ಕಣ್ಣಾಡಿಸಿದರೆ, ಈ ಬಾರಿ ದ್ವಿತೀಯಾರ್ಧದಲ್ಲಿ ಹೆಚ್ಚು ಗೋಲು ಬಿಟ್ಟುಕೊಟ್ಟ ತಂಡಗಳ ಪಟ್ಟಿಯಲ್ಲಿ ಅದು ಮೊದಲ ಸ್ಥಾನದಲ್ಲಿದೆ. ಹೀಗಾಗಿ ಬೆಂಗಳೂರು ತಂಡ ಸೋಮವಾರ ಸುಲಭವಾಗಿ ಗೋಲು ಗಳಿಸುವ ನಿರೀಕ್ಷೆಯಲ್ಲಿದೆ.

ಜೆಮ್ಶೆಡ್‌ಪುರ ತಂಡ ಈ ಶೇಕಡಾ 66 ಗೋಲುಗಳನ್ನು ದ್ವಿತೀಯಾರ್ಧದಲ್ಲಿ ಬಿಟ್ಟುಕೊಟ್ಟಿದ್ದು ಕೇರಳ ಬ್ಲಾಸ್ಟರ್ಸ್ ಮತ್ತು ಎಸ್‌ಸಿ ಇಸ್ಟ್ ಬೆಂಗಾಲ್ ತಂಡಗಳು ಮಾತ್ರ ದ್ವಿತೀಯಾರ್ಧದಲ್ಲಿ ಇದಕ್ಕಿಂತ ಹೆಚ್ಚು ಗೋಲುಗಳನ್ನು ಬಿಟ್ಟುಕೊಟ್ಟಿವೆ. ತಂಡ ಈ ವರೆಗೆ ಒಂಬತ್ತು ಗೋಲುಗಳನ್ನು ಮಣಿದಿದೆ. ಈ ಪೈಕಿ ನಾಲ್ಕನ್ನು ಎದುರಾಳಿಗಳು ಕೊನೆಯ 15 ನಿಮಿಷಗಳಲ್ಲಿ ಗಳಿಸಿದ್ದಾರೆ. ಈ ದೌರ್ಬಲ್ಯದ ಲಾಭ ಪಡೆಯಲು ಬೆಂಗಳೂರು ಪ್ರಯತ್ನಿಸುವುದರಲ್ಲಿ ಸಂದೇಹ ಇಲ್ಲ.

ADVERTISEMENT

ಆರು ಪಂದ್ಯಗಳಲ್ಲಿ ತಲಾ ಮೂರು ಜಯ ಮತ್ತು ಮೂರು ಡ್ರಾ ಸಾಧಿಸಿದ್ದ ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ಗೆ 0–1 ಅಂತರದಲ್ಲಿ ಮಣಿದಿತ್ತು. ಜೆಮ್ಶೆಡ್‌ಪುರ ತಂಡ ಹಿಂದಿನ ಪಂದ್ಯದಲ್ಲಿ ಎಫ್‌ಸಿ ಗೋವಾ ವಿರುದ್ಧ ಕೊನೆಯ ಕ್ಷಣದ ವರೆಗೂ ಕಾದಾಡಿತ್ತು. ಆದರೆ ಇಂಜುರಿ ಅವಧಿಯಲ್ಲಿ ಗೋಲು ಗಳಿಸಿದ ಇಗರ್ ಆಂಗುಲೊ ಅವರು ಜೆಮ್ಶೆಡ್‌ಪುರಕ್ಕೆ ಜಯ ನಿರಾಕರಿಸಿದ್ದರು.

ಹಿಂದಿನ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದ ಮೇಲೆದ್ದು ಬರಲು ಆ ತಂಡ ಪ್ರಯತ್ನಿಸಲಿದೆ. ಆದ್ದರಿಂದ ಎಚ್ಚರಿಕೆಯಿಂದ ಆಡಬೇಕು ಎಂಬುದನ್ನು ಬಿಎಫ್‌ಸಿ ಕೋಚ್ ಕಾರ್ಲಸ್‌ ಕ್ವದ್ರತ್‌ ಒಪ್ಪಿಕೊಂಡಿದ್ದಾರೆ. ‘ಜೆಮ್ಶೆಡ್‌ಪುರ ನಿಜವಾಗಿಯೂ ಈ ಬಾರಿ ಉತ್ತಮ ಆಟ ಆಡುತ್ತಿದೆ. ಆ ತಂಡವನ್ನು ನಿಯಂತ್ರಿಸುವುದು ಅಷ್ಟೊಂದು ಸುಲಭವಲ್ಲ. ಆ ತಂಡದಲ್ಲಿ ಆಡುತ್ತಿರುವ ವಿದೇಶಿ ಆಟಗಾರರು ಪಾಸಿಂಗ್‌ನಲ್ಲಿ ಪಂದ್ಯದಿಂದ ಪಂದ್ಯಕ್ಕೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿರುವುದನ್ನು ಗಮನಿಸಿದ್ದೇನೆ. ಇದಕ್ಕೆ ತಕ್ಕ ಪ್ರತಿತಂತ್ರ ಹೂಡಿ ನಾಳೆ ಕಣಕ್ಕೆ ಇಳಿಯಲಿದ್ದೇವೆ’ ಎಂದು ಕ್ವದ್ರತ್ ಹೇಳಿದರು.

ಬಿಎಫ್‌ಸಿಗೆ ಆಕ್ರಮಣ ವಿಭಾಗದಲ್ಲಿ ಯಾವ ಸಮಸ್ಯೆಯೂ ಇಲ್ಲ. ನಾಯಕ ಸುನಿಲ್ ಚೆಟ್ರಿ ನೇತೃತ್ವದ ಫಾರ್ವರ್ಡ್ ಆಟಗಾರರನ್ನು ಕಟ್ಟಿಹಾಕುವುದು ಸುಲಭವಲ್ಲ. ಆದರೆ ರಕ್ಷಣಾ ವಿಭಾಗ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ.ಜೆಮ್ಶೆಡ್‌ಪುರದ ನೆರಿಜಸ್ ವಲ್ಸ್‌ಕಿಸ್‌ ಅವರನ್ನು ನಿಯಂತ್ರಿಸುವ ಜವಾಬ್ದಾರಿ ಬೆಂಗಳೂರು ಡಿಫೆಂಡರ್‌ಗಳ ಮೇಲೆ ಇದೆ. ಅವರು ಇಲ್ಲಿಯ ವರಗೆ ಆರು ಗೋಲುಗಳನ್ನು ಗಳಿಸಿದ್ದಾರೆ. ನೆರಿಜಸ್‌ಗೆ ಐತರ್ ಮನ್ರೊಯ್ ಉತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತಿದ್ದಾರೆ. ಆದರೆ ಲಿಥುವೇನಿಯಾದ ಈ ಆಟಗಾರ ಐಎಸ್‌ಎಲ್‌ನಲ್ಲಿ ಬಿಎಫ್‌ಸಿ ವಿರುದ್ದ ಒಂದು ಗೋಲು ಕೂಡ ಗಳಿಸಲಿಲ್ಲ ಎಂಬುದು ಗಮನಾರ್ಹ.

‘ಈ ಪಂದ್ಯ ಎರಡೂ ತಂಡಗಳಿಗೆ ಅಗ್ನಿಪರೀಕ್ಷೆ ಆಗಲಿದೆ. ಬಿಎಫ್‌ಸಿ ಅತ್ಯುತ್ತಮ ಆಟಗಾರರನ್ನು ಹೊಂದಿರುವ ತಂಡವಾಗಿದ್ದು ತಂತ್ರಶಾಲಿ ಕೋಚ್ ಕೂಡ ಆ ತಂಡದಲ್ಲಿದ್ದಾರೆ. ಆ ತಂಡದ ವಿರುದ್ಧ ಆಡಿ ಗೆಲ್ಲಲು ನಮ್ಮ ಆಟಗಾರರು ಕಾತರರಾಗಿದ್ದಾರೆ’ ಎಂದುಜೆಮ್ಶೆಡ್‌ಪುರ ಕೋಚ್ ಒವೆನ್ ಕೊಯ್ಲೆ ಅಭಿಪ್ರಾಯಪಟ್ಟರು.

ಕೇರಳ ಬ್ಲಾಸ್ಟರ್ಸ್ ಜಯಭೇರಿ
ಬ್ಯಾಂಬೊಲಿಮ್:
ಅಬ್ದುಲ್ ನೆಡಿಯೊದತ್ ಮತ್ತು ಜೋರ್ಡಾನ್ ಮರೆ ಕಾಲ್ಚಳದ ಬಲದಿಂದ ಕೇರಳ ಬ್ಲಾಸ್ಟರ್ಸ್‌ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.

ಜಿಎಂಸಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಕೇರಳ ತಂಡವು 2–0ಯಿಂದ ಹೈದರಾಬಾದ್ ಎಫ್‌ಸಿ ವಿರುದ್ಧ ಜಯಿಸಿತು.

29ನೇ ನಿಮಿಷದಲ್ಲಿ ಅಬ್ದುಲ್ ಮತ್ತು 68 ನೇ ನಿಮಿಷದಲ್ಲಿ ಜೋರ್ಡಾನ್ ಗೋಲು ಗಳಿಸಿದರು. ಇಡೀ ಪಂದ್ಯದಲ್ಲಿ ಕೇರಳ ದ ಆಟಗರರು ಪಾರಮ್ಯ ಮೆರೆರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.