ಫುಟ್‌ಬಾಲ್
ದೋಹಾ: ಚೀನಾ ತಂಡವು, ಮುಂದಿನ ವರ್ಷ ನಿಗದಿಯಾಗಿರುವ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ಉಜ್ಬೇಕಿಸ್ತಾನ ಮತ್ತು ಜೋರ್ಡಾನ್ ತಂಡಗಳು ಇದೇ ಮೊದಲ ಬಾರಿ ಅರ್ಹತೆ ಪಡೆದಿವೆ.
ಉತ್ತರ ಅಮೆರಿಕದಲ್ಲಿ (ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಆತಿಥ್ಯದಲ್ಲಿ) ಮುಂದಿನ ವರ್ಷ ವಿಶ್ವಕಪ್ ನಿಗದಿಯಾಗಿದ್ದು, ಇದೇ ಮೊದಲ ಬಾರಿ 48 ತಂಡಗಳು ಪಾಲ್ಗೊಳ್ಳುತ್ತಿವೆ. ಏಷ್ಯಾ ಖಂಡದಿಂದ ಪಾಲ್ಗೊಳ್ಳುವ ತಂಡಗಳ ಕೋಟಾ ಸಂಖ್ಯೆ ಹೆಚ್ಚಿಸಿದ ಲಾಭ ಈ ತಂಡಗಳಿಗೆ ಸಿಗುತ್ತಿವೆ.
ಏಷ್ಯಾದ ಫುಟ್‌ಬಾಲ್ ಶಕ್ತಿಯಾದ ದಕ್ಷಿಣ ಕೊರಿಯಾ ಗುರುವಾರ ರಾತ್ರಿ ನಡೆದ ‘ಬಿ’ ಗುಂಪಿನ ಅಂತಿಮ ಅರ್ಹತಾ ಪಂದ್ಯದಲ್ಲಿ 2–0 ಗೋಲುಗಳಿಂದ ಇರಾನ್ ತಂಡವನ್ನು ಸೋಲಿಸುವ ಮೂಲಕ ಸತತ 11ನೇ ಬಾರಿ ವಿಶ್ವಕಪ್ ಫೈನಲ್ ಸುತ್ತಿಗೆ ಅರ್ಹತೆ ಪಡೆಯಿತು.
ಆಸ್ಟ್ರೇಲಿಯಾ ತಂಡವು, ಈಗಾಗಲೇ ಅರ್ಹತೆ ಪಡೆದಿರುವ ಜಪಾನ್ ತಂಡವನ್ನು 1–0 ಗೋಲಿನಿಂದ ಸೋಲಿಸಿತು. ಚೀನಾ 0–1 ಗೋಲಿನಿಂದ ಇಂಡೊನೇಷ್ಯಾಕ್ಕೆ ಸೋತಿದ್ದು ದುಬಾರಿಯಾಯಿತು.
ಯುಎಇ ವಿರುದ್ಧ 0–0 ಡ್ರಾ ಫಲಿತಾಂಶವು ಉಜ್ಬೇಕಿಸ್ತಾನಕ್ಕೆ ‘ಎ’ ಗುಂಪಿನಿಂದ ಇರಾನ್ ನಂತರ ಎರಡನೇ ತಂಡವಾಗಿ ಅರ್ಹತೆ ಪಡೆಯಲು ನೆರವಾಯಿತು.
‘ಬಿ’ ಗುಂಪಿನಿಂದ ದಕ್ಷಿಣ ಕೊರಿಯಾ ಮತ್ತು ಜೋರ್ಡಾನ್ ವಿಶ್ವಕಪ್‌ಗೆ ಅರ್ಹತೆ ಪಡೆದವು. ಅಲಿ ಒಲ್ವಾನ್ ಅವರ ಮೂರು ಗೋಲುಗಳ ನೆರವಿನಿಂದ ಜೋರ್ಡಾನ್ 3–0 ಗೋಲುಗಳಿಂದ ಒಮಾನ್ ತಂಡದ ಮೇಲೆ ಜಯಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.