ADVERTISEMENT

ಚೆನ್ನೈಯಿನ್ ಎಫ್‌ಸಿ ಕೋಚ್ ಜಾನ್‌ ಗ್ರೆಗರಿ ತಲೆದಂಡ?

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:30 IST
Last Updated 11 ನವೆಂಬರ್ 2019, 19:30 IST
ಜಾನ್ ಗ್ರೆಗರಿ
ಜಾನ್ ಗ್ರೆಗರಿ   

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್‌ ಟೂರ್ನಿಯ 6ನೇ ಆವೃತ್ತಿಯಲ್ಲಿ ನೀರಸ ಪ್ರದರ್ಶನ ನೀಡಿರುವ ಚೆನ್ನೈಯಿನ್‌ ಎಫ್‌ಸಿ ತಂಡದ ಕೋಚ್ ಜಾನ್ ಗ್ರೆಗರಿ ರಾಜೀನಾಮೆಗೆ ಸಜ್ಜಾಗಿದ್ದಾರೆ.

ಈ ವರೆಗೆ ಆಡಿರುವ 4 ಪಂದ್ಯಗಳಲ್ಲಿ ಒಂದು ಗೋಲು ಕೂಡ ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಭಾನುವಾರ ನಡೆದಿದ್ದ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಎದುರಿನ ಪಂದ್ಯದಲ್ಲಿ ತಂಡ 0–3 ಗೋಲುಗಳಿಂದ ಸೋತಿತ್ತು. ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಜಾನ್‌ ಗ್ರೆಗರಿ ರಾಜೀನಾಮೆಯ ಸೂಚನೆ ನೀಡಿದರು.

ಬೆಂಗಳೂರಿನಲ್ಲಿ ನಡೆದಿದ್ದ 2017–18ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಚೆನ್ನೈಯಿನ್ ತಂಡ ಬಿಎಫ್‌ಸಿಯನ್ನು 3–2ರಿಂದ ಮಣಿಸಿ ಪ್ರಶಸ್ತಿ ಗೆದ್ದಿತ್ತು. ಆಗ ಜಾನ್‌ ಗ್ರೆಗರಿ ತಂಡದ ಮುಖ್ಯ ಕೋಚ್‌ ಆಗಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ತಂಡ ಕೇವಲ 2 ಪಂದ್ಯಗಳಲ್ಲಿ ಗೆದ್ದು 3ರಲ್ಲಿ ಡ್ರಾ ಮಾಡಿಕೊಂಡಿತ್ತು. 13 ಸೋಲಿನೊಂದಿಗೆ 9 ಪಾಯಿಂಟ್ ಗಳಿಸಿ ಪಟ್ಟಿಯ ಕೊನೆಯ ಸ್ಥಾನದಲ್ಲಿ ಉಳಿದಿತ್ತು.

ADVERTISEMENT

ಈ ಬಾರಿ ಚೇತರಿಸಿಕೊಳ್ಳಲು ನಡೆಸಿದ ಪ್ರಯತ್ನಗಳಿಗೆ ಆರಂಭದಲ್ಲೇ ಪೆಟ್ಟು ಬಿದ್ದಿದೆ. 4 ಪಂದ್ಯಗಳಲ್ಲಿ 1 ಡ್ರಾ ಮಾಡಿಕೊಂಡಿರುವ ತಂಡ 3 ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯ ಕೊನೆಯಲ್ಲಿದೆ. 7 ಗೋಲುಗಳನ್ನು ಬಿಟ್ಟುಕೊಟ್ಟಿರುವ ತಂಡಕ್ಕೆ ಒಮ್ಮೆಯೂ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ.

‘ತಂಡದ ಮಾಲೀಕರು ಒಳ್ಳೆಯವರು. ಆದರೆ ತಂಡದ ಪ್ರದರ್ಶನ ಹೀಗೆಯೇ ಮುಂದುವರಿಯುವುದು ಸರಿಯಲ್ಲ. ಆದ್ದರಿಂದ ಮಾಲೀಕರೊಂದಿಗೆ ಮಾತನಾಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದು ಜಾನ್ ಹೇಳಿದರು.

‘ತಂಡಕ್ಕೆ ಲೀಗ್ ಹಂತದಲ್ಲಿ ಇನ್ನೂ 14 ಪಂದ್ಯಗಳು ಇವೆ. ಈಗಿನ ಪರಿಸ್ಥಿತಿಯಲ್ಲಿ ಹೆಚ್ಚು ಪಾಯಿಂಟ್ ಕಲೆ ಹಾಕಲು ಸಾಧ್ಯ ಎಂದು ನನಗೆ ಅನಿಸುತ್ತಿಲ್ಲ. ಎರಡು ವರ್ಷಗಳಿಂದ ತಂಡದ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದೇನೆ. ಇದು ಸುಲಭದ ಕೆಲಸವಲ್ಲ. ಆದರೆ ಈಗ ನಿರ್ಣಾಯಕ ಘಟ್ಟ ಸಮೀಪಿಸಿದ್ದು ಬೇರೆ ಯಾರಾದರೂ ಕೋಚಿಂಗ್ ಹೊಣೆ ಹೊತ್ತುಕೊಳ್ಳಬೇಕಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.