ADVERTISEMENT

ಫುಟ್‌ಬಾಲ್‌: ಅಗೊರ್ಕ್‌ ಎಫ್‌ಸಿ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 16:07 IST
Last Updated 30 ಡಿಸೆಂಬರ್ 2025, 16:07 IST
   

ಬೆಂಗಳೂರು: ಚೇತನ್‌ ಭದ್ರಾಪುರ ಅವರ ಉಡುಗೊರೆ ಗೋಲು ಹಾಗೂ ಸುದರ್ಶನ್‌ ವಿ.ಎಲ್. ಗಳಿಸಿದ ಗೋಲಿನ ನೆರವಿನಿಂದ ಅಗೊರ್ಕ್‌ ಎಫ್‌ಸಿ ತಂಡವು ಬಿಡಿಎಫ್‌ಎ ‘ಎ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ 2–1ರಿಂದ ಬ್ಲಿಟ್ಝ್‌ ಎಫ್‌ಸಿ ತಂಡವನ್ನು ಮಣಿಸಿತು. 

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬ್ಲಿಟ್ಝ್‌ ತಂಡದ ಚೇತನ್‌ ಅವರು 14ನೇ ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಗೋಲಿನ ಉಡುಗೊರೆ ನೀಡಿದರು. ಬಳಿಕ, ಸುದರ್ಶನ್‌ (53ನೇ ನಿ.) ಅವರು ಗೋಲು ಗಳಿಸಿ ಮುನ್ನಡೆಯನ್ನು 2–0ಗೆ ಹಿಗ್ಗಿಸಿದರು. ಬ್ಲಿಟ್ಝ್‌ ತಂಡದ ಅಥರ್ವ ಅಪೂರ್ವ ಶುಕ್ಲಾ ಅವರು (85ನೇ ನಿ.) ಕೊನೆಯ ಕ್ವಾರ್ಟರ್‌ನಲ್ಲಿ ಗೋಲು ಗಳಿಸಿ, ಸೋಲಿನ ಅಂತರವನ್ನು ತಗ್ಗಿಸಿದರು.

ಇನ್ನೊಂದು ಪಂದ್ಯದಲ್ಲಿ ರಿಯಲ್‌ ಚಿಕ್ಕಮಗಳೂರು ಎಫ್‌ಸಿ ಹಾಗೂ ರೂಟ್ಸ್‌ ಎಫ್‌ಸಿ ತಂಡಗಳು 1–1 ಡ್ರಾ ಸಾಧಿಸಿದವು. ರೂಟ್ಸ್‌ ತಂಡದ ಟಿ.ಹವೊಕಿಪ್‌ 27ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರೆ, ಚಿಕ್ಕಮಗಳೂರು ತಂಡದ ದಿಲೀಪ್‌ ಗೌಡ ಎಚ್‌.ಸಿ. 28ನೇ ನಿಮಿಷದಲ್ಲಿ ಗೋಲು ಹೊಡೆದು ಸಮಬಲ ಸಾಧಿಸಿದರು.

ADVERTISEMENT

ಎಫ್‌ಸಿ ಡೆಕ್ಕನ್‌ ಹಾಗೂ ಜವಾಹರ್‌ ಯೂನಿಯನ್‌ ಎಫ್‌ಸಿ ನಡುವಣ ಪಂದ್ಯವು 2–2 ಡ್ರಾ ಆಯಿತು. ಡೆಕ್ಕನ್‌ ತಂಡದ ಎಲ್‌.ಟಿ.ಲೋಲಿ (22ನೇ ಹಾಗೂ 90+6ನೇ ನಿ.) ಹಾಗೂ ಜವಾಹರ್ ತಂಡದ ಲಾಲ್ಮಿನ್‌ಲಿಯಾನ್‌ (50ನೇ ಹಾಗೂ 68ನೇ ನಿ.) ತಲಾ ಎರಡು ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.