(ಎಡದಿಂದ) ಜೋಕಿಮ್ ಅಲೆಕ್ಸಾಂಡರ್, ನೌಷದ್ ಮೂಸಾ, ಎನ್.ಎ. ಹ್ಯಾರಿಸ್, ಕಲ್ಯಾಣ್ ಚೌಬೆ, ಖಾಲಿದ್ ಜಮೀಲ್, ಕ್ರಿಸ್ಪಿನ್ ಚೆಟ್ರಿ ಹಾಗೂ ಎಂ. ಸತ್ಯನಾರಾಯಣ್
ಬೆಂಗಳೂರು: ಕೆಲ ಮಾರ್ಪಾಡುಗಳೊಂದಿಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್)ನ ಕರಡು ನಿಯಮಾವಳಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮೋದನೆ ನೀಡಿರುವ ಬೆನ್ನಲ್ಲೇ, ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಆಯೋಜಿಸಲು ಬದ್ಧವಿರುವುದಾಗಿ ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಹೇಳಿದ್ದಾರೆ.
ಐಎಸ್‌ಎಲ್ ಅನಿಶ್ಚಿತತೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘2026 ಮೇ 31ರ ಒಳಗೆ ಲೀಗ್ ಮುಗಿಯಲೇಬೇಕು. ಹಾಗಾಗಿ, ಅದಕ್ಕೆ ತಕ್ಕಂತೆ ಟೂರ್ನಿ ಆಯೋಜಿಸಲು ದೃಢ ನಿರ್ಧಾರದಿಂದ ಹಾಗೂ ಕೇಂದ್ರೀಕೃತವಾಗಿ ಕೆಲಸ ಮಾಡುತ್ತಿದ್ದೇವೆ. ಐಎಸ್‌ಎಲ್ ಬಿಕ್ಕಟ್ಟಿನ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಎದುರು ನೋಡುತ್ತಿದ್ದೇವೆ’ ಎಂದು ಹೇಳಿದರು.
‘ಏಷ್ಯನ್ ಟೂರ್ನಿಗಳಲ್ಲಿ ಆಡಲು ಐಎಸ್‌ಎಲ್ ಟೂರ್ನಿಯಲ್ಲಿ ತಂಡಗಳು ಕನಿಷ್ಠ 24 ಪಂದ್ಯ ಆಡಬೇಕು. ಹಾಗಾಗಿ, ಹೊಸ ಸ್ವರೂಪದಲ್ಲಿ ಟೂರ್ನಿ ಆಯೋಜಿಸುವ ಬಗ್ಗೆ ಹಾಗೂ ಪ್ರಾಯೋಜಕರನ್ನು ಹುಡುಕುವ ಬಗ್ಗೆ ಕಾರ್ಯೋನ್ಮುಖರಾಗಿದ್ದೇವೆ’ ಎಂದು ಅವರು ಹೇಳಿದರು.
ಕಾಫಾ ನೇಷನ್ಸ್ ಕಪ್ ಟೂರ್ನಿಯಲ್ಲಿ ಭಾರತ ತಂಡ ಕಂಚು ಗೆದ್ದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಮುಖ್ಯ ಕೋಚ್ ಖಾಲಿದ್ ಜಮೀಲ್ ಅವರು ಆಟಗಾರರ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಅವರು ತಂಡಕ್ಕೆ ಮರಳಿರುವುದು ಬಲ ಹೆಚ್ಚಿಸಿದೆ ಎಂದರು.
‘ಸಿಂಗಪುರ ಎದುರಿನ ಎಎಫ್‌ಸಿ ಏಷ್ಯಾ ಕಪ್ ಕ್ವಾಲಿಫೈಯರ್ಸ್ ಪಂದ್ಯಗಳನ್ನು ಗೆಲ್ಲುವುದಷ್ಟೇ ನಮ್ಮ ಮುಂದಿರುವ ಗುರಿ. ಅದಕ್ಕಾಗಿ ಶನಿವಾರದಿಂದ (ಸೆಪ್ಟೆಂಬರ್ 20) ತರಬೇತಿ ಶಿಬಿರವನ್ನು ಆರಂಭಿಸುತ್ತಿದ್ದೇವೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸಂದೇಶ್ ಜಿಂಗನ್ ಅವರು ಎರಡೂ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ’ ಎಂದು ಜಮೀಲ್ ಹೇಳಿದರು.
ಸುನಿಲ್ ಚೆಟ್ರಿ ಅವರು ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ್ದರು. ಅದಕ್ಕಾಗಿಯೇ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಯಿತು. ಯಾರು ಚೆನ್ನಾಗಿ ಆಡುತ್ತಾರೋ ಅವರಿಗೆ ಅವಕಾಶ ನೀಡಲಾಗುವುದು ಎಂದರು.
ಎಎಫ್‌ಸಿ ಮಹಿಳಾ ಏಷ್ಯಾ ಕಪ್‌ಗೆ ಭಾರತದ ವನಿತೆಯರು ಅರ್ಹತೆ ಗಿಟ್ಟಿಸಿಕೊಂಡಿರುವ ಬಗ್ಗೆ ಮಾತನಾಡಿದ ಮಹಿಳಾ ತಂಡದ ಮುಖ್ಯ ಕೋಚ್ ಕ್ರಿಸ್ಪಿನ್ ಚೆಟ್ರಿ, ‘ಅಕ್ಟೋಬರ್ ತಿಂಗಳ ನಂತರ ಪ್ರತಿ ತಿಂಗಳು 15 ದಿನಗಳ ತರಬೇತಿ ಶಿಬಿರ ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಜೊತೆಗೆ, ವಿವಿಧ ರಾಷ್ಟ್ರಗಳೊಂದಿಗೆ ‘ಸ್ನೇಹಪರ’ ಪಂದ್ಯಗಳನ್ನೂ ಆಡಲಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.