ADVERTISEMENT

ಅನಿಶ್ಚಿತವಾದ ಐಎಸ್‌ಎಲ್‌ ಭವಿಷ್ಯ: ನಿರಾಶೆಯ ಮಡುವಿಗೆ ಆಟಗಾರರು

ಪಿಟಿಐ
Published 11 ನವೆಂಬರ್ 2025, 18:20 IST
Last Updated 11 ನವೆಂಬರ್ 2025, 18:20 IST

ನವದೆಹಲಿ: ಅನಿಶ್ಚಿತ ಸ್ಥಿತಿಯಲ್ಲಿರುವ ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌)  ಆರಂಭಿಸಬೇಕೆಂದು ಫುಟ್‌ಬಾಲ್‌ ಆಡಳಿತವನ್ನು ಕೋರಿರುವ ಹಿರಿಯ ಆಟಗಾರರು, ‘ತಮ್ಮ ಸಿಟ್ಟು ಮತ್ತು ಹತಾಶೆ’ ಈಗ ನಿರಾಶೆಯ ಕೂಪವಾಗಿ ಪರಿವರ್ತನೆಯಾಗಿದೆ ಎಂದು ಹೇಳಿದ್ದಾರೆ.

ಹೊಸ ವಾಣಿಜ್ಯ ಹಕ್ಕು ಪಡೆಯಲು ಬಿಡ್‌ನಲ್ಲಿ ಯಾರೂ ಮುಂದೆ ಬಂದಿಲ್ಲ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಹೋದ ವಾರ ತಿಳಿಸಿತ್ತು. ಅದರ ಬೆನ್ನಲ್ಲೇ ಆಟಗಾರರಿಂದ ಮನವಿ ಬಂದಿದೆ.

‘ಈಗಾಗಲೇ ವಿಳಂಬವಾಗಿದೆ. ತರಬೇತುದಾರು, ಅಭಿಮಾನಿಗಳು, ಸಿಬ್ಬಂದಿ, ಆಟಗಾರರು ಏನೂ ತೋಚದೇ ನಿಶ್ಚಲರಾಗಿದ್ದಾರೆ. ಈ ಲೀಗ್‌ನಲ್ಲಿ ಆಡಲು ನಾವು ತುಂಬಾ ಶ್ರಮ ಹಾಕಿದ್ದೆವು. ತ್ಯಾಗವನ್ನೂ ಮಾಡಿದ್ದೆವು’ ಎಂದು ಭಾರತ ತಂಡದ ಡಿಫೆಂಡರ್‌ ಸಂದೇಶ್‌ ಜಿಂಗಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಬೇಸರ ತೋಡಿಕೊಂಡಿದ್ದಾರೆ.

ADVERTISEMENT

‘ಭಾರತದ ಫುಟ್‌ಬಾಲ್ ವ್ಯವಸ್ಥೆ ಅಯೋಮಯ ಸ್ಥಿತಿಯಲ್ಲಿದೆ. ಕನಸುಗಳು ಕಮರುತ್ತಿವೆ. ಮುಂದೇನು ಎಂಬ ಪ್ರಶ್ನೆ ಮೂಡಿದೆ. ಫುಟ್‌ಬಾಲ್‌ ಕ್ಷೇತ್ರ ಬಿಕ್ಕಟ್ಟಿನಿಂದ ಬಸವಳಿದಿದೆ. ಫೆಡರೇಷನ್ ಆಡಳಿತವು ಈಗಲೇ ಕಾಯ್ಮೋನ್ಮುಖವಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಭಾರತ ತಂಡದ ಅನುಭವಿ ಆಟಗಾರರಾದ ಸುನಿಲ್ ಚೆಟ್ರಿ ಮತ್ತು ಗುರುಪ್ರೀತ್ ಸಿಂಗ್ ಸಂಧು ಅವರು ಈ ಮೊದಲು ಇಂಥದ್ದೇ ಕಾಳಜಿ ವ್ಯಕ್ತಪಡಿಸಿದ್ದರು.

‘ನಮ್ಮ ಸಿಟ್ಟು, ಸೆಡವು ಈಗ ಹತಾಶೆಯಾಗಿ ಪರಿವರ್ತನೆಯಾಗಿದೆ. ಏನೇ ಆಗಲಿ ಆಟವಾಡಬೇಕು ಎಂದು ಹಾತೊರೆಯುವ ಸ್ಥಿತಿಯಲ್ಲಿದ್ದೇವೆ. ಅಭಿಮಾನಿಗಳು ನಮ್ಮ ಪಾಲಿಗೆ ಎಲ್ಲವೂ’ ಎಂದು ಹೇಳಿಕೆಯಲ್ಲಿ  ಜಿಂಗಾನ್ ತಿಳಿಸಿದ್ದಾರೆ.

ಐಎಸ್‌ಎಲ್‌ ಬಿಕ್ಕಟ್ಟು ಮುಂದುವರಿದ ಕಾರಣ ಮೋಹನ್‌ ಬಾಗನ್ ಕ್ಲಬ್ ಈಗಾಗಲೇ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಇತರ ಕೆಲವು ಕ್ಲಬ್‌ಗಳೂ ಸಂಕಷ್ಟದಲ್ಲಿವೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ (ನಿವೃತ್ತ) ನಾಗೇಶ್ವರ ರಾವ್‌ ಅವರ ನೇತೃತ್ವದ ಎಐಎಫ್‌ಎಫ್‌ ಬಿಡ್‌ ಮೌಲ್ಯಮಾಪನ ಸಮಿತಿಯು ಬಿಡ್‌ ಗೊಂದಲದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಿದೆ. ಕೋರ್ಟ್‌ ಕಣ್ಗಾವಲಿನಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ.

ಐಎಸ್‌ಎಲ್‌ಗೆ ಈಗ ಪರಿಷ್ಕೃತ ಚೌಕಟ್ಟಿನೊಡನೆ ಹೊಸ ವಾಣಿಜ್ಯ ಪಾಲುದಾರರನ್ನು  ಕಂಡುಕೊಳ್ಳಬೇಕಾದ ಸವಾಲು ಎಐಎಫ್‌ಎಫ್‌ ಮುಂದಿದೆ. 2014ರಲ್ಲಿ ಮೊದಲ ಬಾರಿ ಐಎಸ್‌ಎಲ್‌ ಆಯೋಜನೆಗೊಂಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.