ADVERTISEMENT

ದೇವರ ನಾಡಿನಲ್ಲಿ ಬಿಎಫ್‌ಸಿಗೆ ಜಯಮಾಲೆ

ಐಎಸ್‌ಎಲ್‌: ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡು ಒದ್ದ ಕೇರಳ ತಂಡದ ನಿಕೊಲಾ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 20:00 IST
Last Updated 5 ನವೆಂಬರ್ 2018, 20:00 IST
ಬಿಎಫ್‌ಸಿ ತಂಡದ ಸುನಿಲ್‌ ಚೆಟ್ರಿ (ಬಿಳಿ ಪೋಷಾಕು) ಚೆಂಡನ್ನು ಗುರಿ ಮುಟ್ಟಿಸಲು ಪ್ರಯತ್ನಿಸಿದರು.
ಬಿಎಫ್‌ಸಿ ತಂಡದ ಸುನಿಲ್‌ ಚೆಟ್ರಿ (ಬಿಳಿ ಪೋಷಾಕು) ಚೆಂಡನ್ನು ಗುರಿ ಮುಟ್ಟಿಸಲು ಪ್ರಯತ್ನಿಸಿದರು.   

ಕೊಚ್ಚಿ: ಈ ಬಾರಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ನಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡದ ಗೆಲುವಿನ ಓಟ ಮುಂದುವರಿದಿದೆ.

ಇಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಸುನಿಲ್‌ ಚೆಟ್ರಿ ಸಾರಥ್ಯದ ಬಿಎಫ್‌ಸಿ 2–1 ಗೋಲುಗಳಿಂದ ಆತಿಥೇಯ ಕೇರಳ ಬ್ಲಾಸ್ಟರ್ಸ್‌ ತಂಡವನ್ನು ಸೋಲಿಸಿದೆ.

ಈ ಗೆಲುವಿನೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 13ಕ್ಕೆ ಹೆಚ್ಚಿಸಿಕೊಂಡಿರುವ ಬೆಂಗಳೂರಿನ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ADVERTISEMENT

ಉಭಯ ತಂಡಗಳು ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದವು. ಹೀಗಾಗಿ ಮೊದಲ 15 ನಿಮಿಷಗಳ ಆಟ ಗೋಲುರಹಿತವಾಗಿತ್ತು. 17ನೇ ನಿಮಿಷದಲ್ಲಿ ಸುನಿಲ್‌ ಚೆಟ್ರಿ ಕಾಲ್ಚಳಕ ತೋರಿದರು. ಎದುರಾಳಿ ಆವರಣದ 30 ಗಜ ದೂರದಿಂದ ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಚೆಟ್ರಿ ಅದನ್ನು ಚಾಕಚಕ್ಯತೆಯಿಂದ ಗುರಿ ಮುಟ್ಟಿಸಿದರು.

ನಂತರ ಕೇರಳ ಬ್ಲಾಸ್ಟರ್ಸ್‌ ಮಿಂಚಿತು. 30ನೇ ನಿಮಿಷದಲ್ಲಿ ಆತಿಥೇಯರಿಗೆ ಪೆನಾಲ್ಟಿ ಲಭಿಸಿತು. ಈ ಅವಕಾಶದಲ್ಲಿ ಸ್ಲೆವಿಸಾ ಸ್ಟೊಜಾನೊವಿಚ್‌ ಗೋಲು ಬಾರಿಸಿ 1–1ರ ಸಮಬಲಕ್ಕೆ ಕಾರಣರಾದರು. ಬಳಿಕದ ಅವಧಿಯಲ್ಲಿ ಉಭಯ ತಂಡಗಳೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಕ್ಷಣ ಕ್ಷಣವೂ ಆಟದ ರೋಚಕತೆ ಹೆಚ್ಚುತ್ತಲೇ ಇತ್ತು. 75ನೇ ನಿಮಿಷದವರೆಗೂ ಸಮಬಲದ ಪೈಪೋಟಿ ಕಂಡುಬಂತು. ನಂತರ ಬೆಂಗಳೂರಿನ ತಂಡ ಮೇಲುಗೈ ಸಾಧಿಸಿತು. 80ನೇ ನಿಮಿಷದಲ್ಲಿ ಚೆಟ್ರಿ ಪಡೆಯ ಖಾತೆಗೆ ‘ಉಡುಗೊರೆ’ ರೂಪದಲ್ಲಿ ಗೋಲು ಸೇರ್ಪಡೆಯಾಯಿತು. ನಿಕೊಲಾ ಕ್ರಾಮರೆವಿಚ್‌ ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಒದ್ದರು. ಇದು ಆತಿಥೇಯರಿಗೆ ಮುಳುವಾಯಿತು.

ಬಳಿಕ ಬಿಎಫ್‌ಸಿ ಮೋಡಿ ಮಾಡಿತು. ಪಂದ್ಯ ಮುಗಿಯಲು ಕೆಲ ಸೆಕೆಂಡುಗಳು ಬಾಕಿ ಇದ್ದಾಗ ಬ್ಲಾಸ್ಟರ್ಸ್‌ಗೆ ಪೆನಾಲ್ಟಿ ಸಿಕ್ಕಿತ್ತು. ಈ ಅವಕಾಶದಲ್ಲಿ ಆತಿಥೇಯ ಆಟಗಾರ ಒದ್ದ ಚೆಂಡು ಬಿಎಫ್‌ಸಿ ಗೋಲುಪೆಟ್ಟಿಗೆ ಮೇಲಿನಿಂದ ಹಾದು ಅಂಗಳದ ಆಚೆ ಬೀಳುತ್ತಿದ್ದಂತೆ ಚೆಟ್ರಿ ಪಡೆಯ ಆಟಗಾರರ ಮೊಗದಲ್ಲಿ ಸಂತಸ ಅರಳಿತು. ಬಿಎಫ್‌ಸಿ ಅಭಿಮಾನಿಗಳು ಖುಷಿಯಿಂದ ಕುಣಿದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.