ADVERTISEMENT

PV Web Exclusive: ಐಎಸ್‌ಎಲ್‌ನಲ್ಲಿ ಭಾರತದ ಯುವ ತಾರೆಯರ ಕಾಲ್ಚಳಕ

ವಿಕ್ರಂ ಕಾಂತಿಕೆರೆ
Published 27 ಡಿಸೆಂಬರ್ 2020, 6:10 IST
Last Updated 27 ಡಿಸೆಂಬರ್ 2020, 6:10 IST
ವಿಘ್ನೇಶ್ ದ‌ಕ್ಷಿಣಮೂರ್ತಿ -ಐಎಸ್‌ಎಲ್ ಮೀಡಿಯಾ ಚಿತ್ರ
ವಿಘ್ನೇಶ್ ದ‌ಕ್ಷಿಣಮೂರ್ತಿ -ಐಎಸ್‌ಎಲ್ ಮೀಡಿಯಾ ಚಿತ್ರ   

ಕೋವಿಡ್ –19ರ ಸಂಕಟದ ನಡುವೆಯೂ ರೋಚಕ ಹೋರಾಟಗಳಿಗೆ ಸಾಕ್ಷಿಯಾಗಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಮೊದಲ ಹಂತದ 55 ಪಂದ್ಯಗಳ 39 ಹಣಾಹಣಿಗಳು ಈಗಾಗಲೇ ಮುಕ್ತಾಯಗೊಂಡಿವೆ. ‌ಖ್ಯಾತ ಆಟಗಾರರು ಏಳನೇ ಆವೃತ್ತಿಯಲ್ಲಿ ಇನ್ನೂ ಲಯ ಕಂಡುಕೊಳ್ಳಲಿಲ್ಲ.

ಹಿಂದಿನ ಆವೃತ್ತಿಗಳಲ್ಲಿ ಮಿಂಚಿರುವವರ ಪೈಕಿ ರಾಯ್ ಕೃಷ್ಣ ಅವರೊಬ್ಬರನ್ನು ಹೊರತುಪಡಿಸಿದರೆ ಉಳಿದವರು ಕಾಲ್ಚಳಕ ತೋರುವಲ್ಲಿ ವಿಫಲರಾಗಿದ್ದಾರೆ. ಫೆರಾನ್ ಕೊರೊಮಿನಾಸ್, ಬಾರ್ತೊಲೊಮಿಯೊ ಒಗ್ಬೆಚೆ, ಫ್ರಾನ್ಸಿಸ್ಕೊ ಹೆರ್ನಾಂಡಸ್, ಜಾಕಿಚಾಂದ್ ಸಿಂಗ್, ಹ್ಯೂಗೊ ಬೌಮೊಸ್, ಎಜು ಬೇಡಿಯಾ, ದಿಮಾಸ್ ಡೆಲ್ಗಾಡೊ, ಯುವಾನನ್ ಮುಂತಾದವರು ಚೆಂಡನ್ನು ಗುರಿ ಮುಟ್ಟಿಸುವುದರಲ್ಲಾಗಲಿ, ನಿಖರ ಪಾಸ್‌ಗಳನ್ನು ನೀಡುವುದರಲ್ಲಾಗಲಿ ಸಾಮರ್ಥ್ಯ ಮೆರೆಯಲಿಲ್ಲ. ಆದರೆ ಮತ್ತೊಂದೆಡೆ ಯುವ ಆಟಗಾರರು, ವಿಶೇಷವಾಗಿ ಭಾರತದ ಹೊಸ ಪ್ರತಿಭೆಗಳು ಮಿಂಚುತ್ತಿದ್ದಾರೆ.

ಮುಂಬೈ ಸಿಟಿ ಎಫ್‌ಸಿಯ ವಿಘ್ನೇಶ್ ದ‌ಕ್ಷಿಣಾಮೂರ್ತಿ, ಹೈದರಾಬಾದ್ ಎಫ್‌ಸಿಯ ಆಕಾಶ್ ಮಿಶ್ರಾ, ಲಿಸ್ಟನ್ ಕೊಲ್ಯಾಕೊ, ಚೆನ್ನೈಯಿನ್ ಎಫ್‌ಸಿಯ ದೀಪಕ್ ತಂಗ್ರಿ, ಜೆಮ್ಶೆಡ್‌ಪುರ ಎಫ್‌ಸಿಯ ವಿಲಿಯಂ ಲಾಲ್ನುಂಫೆಲಾ ಈಗಾಗಲೇ ಗಮನಾರ್ಹ ಆಟವಾಡಿ ಭರವಸೆ ಮೂಡಿಸಿದ್ದಾರೆ.

ಡಿಸೆಂಬರ್ 20ರಂದು ಹೈದರಾಬಾದ್ ಎಫ್‌ಸಿ ವಿರುದ್ಧ ಪಂದ್ಯದ 38ನೇ ನಿಮಿಷ ಗೋಲು ಗಳಿಸಿದ್ದ ವಿಘ್ನೇಶ್‌ ನೀರಸವಾಗಿ ಸಾಗುತ್ತಿದ್ದ ಪಂದ್ಯಕ್ಕೆ ರೋಚಕತೆ ತುಂಬಿದ್ದರು. ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ 2–0ಯಿಂದ ಜಯಿಸಲು (59ನೇ ನಿಮಿಷದಲ್ಲಿ ಮತ್ತೊಂದು ಗೋಲು ಲೀ ಫಾಂಡ್ರೆ ಕಾಲ್ಚಳಕದಿಂದ ಮೂಡಿತ್ತು) ಕಾರಣರಾಗಿದ್ದರು. ವಿಶೇಷವೆಂದರೆ ಅದು, ಐಎಸ್‌ಎಲ್‌ನಲ್ಲಿವಿಘ್ನೇಶ್‌ ಅವರ ಚೊಚ್ಚಲ ಗೋಲಾಗಿತ್ತು.

ಹಿಂದಿನ ಎರಡು ಆವೃತ್ತಿಗಳಲ್ಲಿ ಆಡಿದ್ದ ವಿಘ್ನೇಶ್ ಆ ಎರಡು ಆವೃತ್ತಿಗಳಲ್ಲಿ ಒಟ್ಟಾರೆ ಆಡಿದ್ದಕ್ಕಿಂತ ಹೆಚ್ಚು ಅವಧಿಯನ್ನು ಈಗಾಗಲೇ ಕಣದಲ್ಲಿ ಕಳೆದಿದ್ದಾರೆ. ಇದು, ತಂಡದ ಆಡಳಿತ ಅವರ ಮೇಲೆ ಇರಿಸಿರುವ ಭರವಸೆಯನ್ನು ಎತ್ತಿತೋರಿಸುತ್ತದೆ. ತಂಡದ ಐದು ಪಂದ್ಯಗಳಲ್ಲಿ ಅವರು ಆಡುವ 11ರಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. 22 ವರ್ಷದ ಈ ಮಿಡ್‌ಫೀಲ್ಡರ್ ಈಗಾಗಲೇ 21ರ ಸರಾಸರಿಯಲ್ಲಿ ಪಾಸ್‌ಗಳನ್ನು ನೀಡಿದ್ದಾರೆ. ರಕ್ಷಣಾ ವಿಭಾಗದಲ್ಲೂ ಈ ಆಟಗಾರನ ಕೊಡುಗೆ ಎದ್ದುಕಾಣುತ್ತಿದೆ. ನಾಲ್ಕು ಟ್ಯಾಕಲ್, ಆರು ಬ್ಲಾಕ್‌ಗಳು ಮತ್ತು ನಾಲ್ಕು ಕ್ಲಿಯರೆನ್ಸ್‌ಗಳ ಮೂಲಕ ಎದುರಾಳಿಗಳ ಗೋಲಿನ ಧಾವಂತಕ್ಕೆ ತಡೆಯೊಡ್ಡಿದ್ದಾರೆ. ಅಂದ ಹಾಗೆ ವಿಘ್ನೇಶ್‌, ಬೆಂಗಳೂರಿನ ಓಜೋನ್ ಎಫ್‌ಸಿ ತಂಡದ ಆಟಗಾರ ಆಗಿದ್ದರು. ಬೆಂಗಳೂರಿನ ಶ್ರೀರಾಂಪುರ ನಿವಾಸಿಯಾದ ಅವರು ಭಾರತ ತಂಡದ ಆಟಗಾರ ಕೂಡ ಹೌದು.

ಕೋಚ್ ಮೆಚ್ಚಿದ ಆಕಾಶ್ ಮಿಶ್ರಾ

ಬಾಲರಾಮಪುರ ನಿವಾಸಿಯಾದ ಆಕಾಶ್ ಮಿಶ್ರಾ 19 ವರ್ಷ ವಯಸ್ಸಿನಲ್ಲೇ ಐಎಸ್‌ಎಲ್‌ನಲ್ಲಿ ಮಿಂಚುತ್ತಿದ್ದಾರೆ. ಹೈದರಾಬಾದ್ ಎಫ್‌ಸಿ ಇಲ್ಲಿಯವರೆಗೆ ಆಡಿದ ಎಲ್ಲ ಪಂದ್ಯಗಳಲ್ಲೂ 90 ನಿಮಿಷಗಳ ಪೂರ್ಣಾವಧಿಯನ್ನು ಅಂಗಣದಲ್ಲಿ ಕಳೆದಿದ್ದಾರೆ. ‘ಭಾರತದ ಅತ್ಯುತ್ತಮ ಲೆಫ್ಟ್ ಬ್ಯಾಕ್ ಆಟಗಾರನಾಗಿ ಆಕಾಶ್ ಬೆಳೆಯಲಿದ್ದಾರೆ’ ಎಂದು ಕೋಚ್ ಮ್ಯಾನ್ಯುಯೆಲ್ ಮಾರ್ಕೆಜ್ ಕೊಂಡಾಡಿದ್ದಾರೆ.

21 ವರ್ಷದ ದೀಪಕ್ ತಂಗ್ರಿ ಕಳೆದ ವರ್ಷಕ್ಕಿಂತ ಹೆಚ್ಚು ಹುರುಪಿನಿಂದ ಈ ಬಾರಿ ಆಡುತ್ತಿದ್ದಾರೆ. ಚೆಂಡನ್ನು ಡ್ರಿಬಲ್ ಮಾಡಿಕೊಂಡು ಮುನ್ನುಗ್ಗುವ ಕಲೆಯಲ್ಲಿ ಪಳಗಿರುವ ಅವರು ಪಾಸಿಂಗ್ ಮೂಲಕ ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ಅವಕಾಶಗಳನ್ನು ಸೃಷ್ಟಿಸಿಕೊಡುತ್ತಿದ್ದಾರೆ.

2014ರಲ್ಲಿ ಮಿಜೋರಾಂ ತಂಡ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಲಿಯಂ ಲಾಲ್ನುಂಫೆಲಾ ಐ-ಲೀಗ್‌ನಲ್ಲಿ ಐಜ್ವಾಲ್ ತಂಡದ ಬೆನ್ನೆಲುಬು ಆಗಿದ್ದರು. ಈಗ ಜೆ‌ಮ್ಶೆಡ್‌ಪುರ ಎಫ್‌ಸಿಯ ಆಕ್ರಮಣ ವಿಭಾಗಕ್ಕೆ ಬಲ ತುಂಬಿದ್ದಾರೆ.

ಹಿಂದಿನ ಆವೃತ್ತಿಯ ಆರಂಭದಲ್ಲಿ ಎಫ್‌ಸಿ ಗೋವಾ ಜೊತೆ ಇದ್ದ ಲಿಸ್ಟನ್ ಕೊಲ್ಯಾಕೊ ಟೂರ್ನಿಯ ಮಧ್ಯದಲ್ಲಿ ಹೈದರಾಬಾದ್ ಎಫ್‌ಸಿ ಕಡೆಗೆ ವಾಲಿದ್ದರು. ನಂತರ ಎರಡು ಗೋಲು ಗಳಿಸಿ ಸಂಭ್ರಮಿಸಿದ್ದರು. ಈ ಬಾರಿ ಭರವಸೆಯಿಂದ ಕಣಕ್ಕೆ ಇಳಿದಿರುವ ಅವರು ಕೋಚ್‌ ತಮ್ಮ ಮೇಲೆ ಇರಿಸಿಕೊಂಡಿರುವ ಭರವಸೆಯನ್ನು ಹುಸಿ ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.