ADVERTISEMENT

ಮರೋಡಾನಾ: ಮನದಲ್ಲಿ ನೆನಪು; ಮೈಯಲ್ಲಿ ಟ್ಯಾಟೂ

ವಿಕ್ರಂ ಕಾಂತಿಕೆರೆ
Published 6 ಡಿಸೆಂಬರ್ 2020, 16:31 IST
Last Updated 6 ಡಿಸೆಂಬರ್ 2020, 16:31 IST
ಅರ್ಜೆಂಟೀನಾದ ಬೀದಿಯ ಗೋಡೆಯಲ್ಲಿ ಬರೆದಿರುವ ಮರಡೋನಾ ಅವರ ಬೃಹತ್ ಚಿತ್ರ –ಎಎಫ್‌ಪಿ ಚಿತ್ರ
ಅರ್ಜೆಂಟೀನಾದ ಬೀದಿಯ ಗೋಡೆಯಲ್ಲಿ ಬರೆದಿರುವ ಮರಡೋನಾ ಅವರ ಬೃಹತ್ ಚಿತ್ರ –ಎಎಫ್‌ಪಿ ಚಿತ್ರ   
""

ಕಾಲ್ಚೆಂಡಿನಾಟದ ಮೋಡಿಗಾರ ಡಿಯೆಗೊ ಮರಡೋನಾ ಇಲ್ಲದಾಗಿ ಒಂದು ವಾರವಾಯಿತು. ರಾಷ್ಟ್ರೀಯ ತಂಡ ಅರ್ಜೆಂಟೀನಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ, ಕ್ಲಬ್‌ ಫುಟ್‌ಬಾಲ್‌ನಲ್ಲಿ ನೆಪೊಲಿ ತಂಡವನ್ನು ಉತ್ತುಂಗಕ್ಕೇರಿಸಿದ ’ಫುಟ್‌ಬಾಲ್ ದೇವರು‘ ಸಾವಿಗೀಡಾದಾಗ ಕ್ರೀಡಾ ಜಗತ್ತಿಡೀ ಮರುಗಿತ್ತು. ಆ ಶೋಕಭಾವ ಕೆಲವು ಕಡೆಯಲ್ಲಿ ಈಗಲೂ ಮಡುಗಟ್ಟಿ ನಿಂತಿದೆ. ಈ ನಡುವೆ, ಮರಡೋನಾ ಅವರ ಭಾವಚಿತ್ರಗಳು ವಿವಿಧ ರೂಪದಲ್ಲಿ ಮರುಜೀವ ಪಡೆಯುತ್ತಿವೆ. ಅರ್ಜೆಂಟೀನಾ, ರಿಯೊ ಡಿ ಜನೈರೊ ಮತ್ತು ನೇಪಲ್ಸ್‌ನ ಕ್ರೀಡಾಂಗಣದ ಗ್ಯಾಲರಿಗಳಲ್ಲಿ, ಎಲ್‌ಇಡಿ ಪರದೆಗಳಲ್ಲಿ, ಬೀದಿಬದಿಯ ಗೋಡೆಗಳಲ್ಲಿ ಬೃಹತ್ ಚಿತ್ರಗಳು ಕಾಣಿಸುತ್ತಿದ್ದರೆ, ವಿಶ್ವದ ವಿವಿಧ ಕಡೆಗಳಲ್ಲಿ ಮರಡೋನಾ ಅವರ ಚಿತ್ರ, ಹೆಸರು ಮತ್ತು 10ನೇ ಸಂಖ್ಯೆಯ ಜೆರ್ಸಿ ಜನರ ಮೈಮೇಲೆ ಟ್ಯಾಟೂ ಮೂಲಕ ಮೂಡುತ್ತಿವೆ.

ರಿಯೊದಲ್ಲಿ ಡಿಸೆಂಬರ್ ಒಂದರಂದು ನಡೆದ ಅರ್ಜೆಂಟೀನಾದ ರೇಸಿಂಗ್ ಕ್ಲಬ್‌ ಮತ್ತು ಬ್ರೆಜಿಲ್‌ನ ಫ್ಲೆಮಿಂಗೊ ಕ್ಲಬ್ ನಡುವಿನ ಕೋಪಾ ಲಿಬರ್ಟಡೋರ್‌ ಟೂರ್ನಿಯ ಪಂದ್ಯದ ಸಂದರ್ಭದಲ್ಲಿ ಮರಡೋನಾಗೆ ಗೌರವ ಸಲ್ಲಿಸುವ ಬಗೆಬಗೆಯ ವಿನ್ಯಾಸಗಳು ಗ್ಯಾಲರಿಯಲ್ಲಿದ್ದವು. ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿರುವ ಲೀಗ್ ಟೂರ್ನಿಗಳಲ್ಲೂ ಗ್ಯಾಲರಿ ಮತ್ತು ಸ್ಟ್ಯಾಂಡ್‌ಗಳಲ್ಲಿ ಮರಡೋನಾ ನೆನಪೇ ತುಂಬಿದೆ.

ಅರ್ಜೆಂಟೀನಾದ ರಾಜಧಾನಿಯಲ್ಲಿ ಆಲ್ಫ್ರೆಡೊ ಸೆಗತೋರಿ ಎಂಬ ಕಲಾವಿದ ಗೋಡೆಯಲ್ಲಿ ಬರೆದ ಬೃಹತ್ ಚಿತ್ರ ಗಮನ ಸೆಳೆಯುತ್ತಿದೆ. ನೇಪಲ್ಸ್‌ ನಗರದ ಬಹುಮಹಡಿ ಕಟ್ಟಡದ ಮೇಲೆ ಮತ್ತು ಬೃಹತ್ ಗೋಡೆಗಳಲ್ಲಿ ಕಲಾವಿದ ಜೋರಿತ್ ಬರೆದಿರುವ ಸುಂದರ ಚಿತ್ರಗಳು ಮರಡೋನಾ ಅವರನ್ನು ಮತ್ತೆ ಮತ್ತೆ ನೆನಪಿಸುವಂತಿವೆ.

ADVERTISEMENT

ತೋಳಲ್ಲಿ ಮರಡೋನಾ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿರುವ ಅರ್ಜೆಂಟೀನಾದ ನೆರಿಯಾ ಬಾರ್ಬೋಸಾ, ಸಿಂಥಿಯಾ ವೆರೋನಿನಾ ಮುಂತಾದವರು ನೆಚ್ಚಿನ ಆಟಗಾರನ ನೆನಪಿನಲ್ಲಿ ಕಣ್ಣೀರು ಹಾಕುತ್ತಿದ್ದರೆ ಪಿಜ್ಜಾ ವ್ಯಾಪಾರಿ ಗಿರೆನೊ ರಾಡ್ರಿಗ್ಸ್ ಮತ್ತು ಫುಟ್‌ಬಾಲ್ ಪ್ರೇಮಿ ಮಥಿಯಾಸ್ ಡಿಸೋಸಿಯಾ ಅವರು ತಮ್ಮ ಬೆನ್ನಿನಲ್ಲೇ ಮರಡೋನಾ ನೆನಪಿನ ಅಂಗಳ ಸೃಷ್ಟಿಸಿದ್ದಾರೆ. ಮ್ಯಾಕ್ಸಿಮಿಲಿಯಾನೊ ಫರ್ನಾಂಡಿಸ್ ಅವರಂಥ ಅಭಿಮಾನಿಗಳು ಇಡೀ ಕೈಯನ್ನೇ ಟ್ಯಾಟೂವಿಗಾಗಿ ಮೀಸಲಿಟ್ಟಿದ್ದಾರೆ.

ಟೂರ್ನಿಗೆ ಮರುನಾಮಕರಣ

ಅರ್ಜೆಂಟೀನಾದಲ್ಲಿ ಎರಡು ದಿನಗಳ ಹಿಂದೆ ಆರಂಭಗೊಂಡಿರುವ ‘ದಿ ಅಂರ್ಜೆಂಟಿನ್ ಜೂನಿಯರ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌‘ ಹೆಸರನ್ನು ‘ಕೋಪಾ ಡಿಯೆಗೊ ಮರಡೋನಾ 2020 ಫುಟ್‌ಬಾಲ್ ಟೂರ್ನಿ’ ಎಂದು ಬದಲಾಯಿಸಲಾಗಿದೆ. ಈ ಟೂರ್ನಿಯಲ್ಲಿ ಆಡುವ ತಂಡಗಳು ಕ್ಷಣಕ್ಷಣವೂ ಮರಡೋನಾ ಅವರನ್ನು ನೆನಪಿಸುತ್ತಿವೆ. ಕೆಲವು ಆಟಗಾರರು ಜೆರ್ಸಿಯಲ್ಲಿ ತಮ್ಮ ಹೆಸರಿಗೆ ಬದಲಾಗಿ ಮರಡೋನಾ ಎಂದು ಬರೆಸಿಕೊಂಡಿದ್ದಾರೆ.

ಮರಡೋನಾ ಚಿತ್ರದ ಟ್ಯಾಟೂ ಹಾಕಿಸಿಕೊಂಡು ಗೌರವ ಸೂಚಿಸಿದ ಸಿಂಥಿಯಾ ವೆರೋನಿಕಾ –ರಾಯಿಟರ್ಸ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.