ADVERTISEMENT

ಆರ್ಚರಿ ವಿಶ್ವಕಪ್‌: ಚಿನ್ನಕ್ಕೆ ಗುರಿಯಿಟ್ಟ ಅತನು, ದೀಪಿಕಾ

ಆರ್ಚರಿ ವಿಶ್ವಕಪ್‌ ಮೊದಲ ಹಂತದ ಟೂರ್ನಿ: ಭಾರತಕ್ಕೆ ನಾಲ್ಕು ಪದಕ

ಪಿಟಿಐ
Published 26 ಏಪ್ರಿಲ್ 2021, 12:57 IST
Last Updated 26 ಏಪ್ರಿಲ್ 2021, 12:57 IST
ಪದಕಗಳೊಂದಿಗೆ ಸಂಭ್ರಮಿಸಿದ ಅತನು ದಾಸ್‌ ಹಾಗೂ ದೀಪಿಕಾ ಕುಮಾರಿ– ಸಾಯ್‌ ಮೀಡಿಯಾ ಟ್ವಿಟರ್‌ ಚಿತ್ರ
ಪದಕಗಳೊಂದಿಗೆ ಸಂಭ್ರಮಿಸಿದ ಅತನು ದಾಸ್‌ ಹಾಗೂ ದೀಪಿಕಾ ಕುಮಾರಿ– ಸಾಯ್‌ ಮೀಡಿಯಾ ಟ್ವಿಟರ್‌ ಚಿತ್ರ   

ಗ್ವಾಟೆಮಾಲಾ ಸಿಟಿ : ಭಾರತದ ‘ಆರ್ಚರಿ‘ ದಂಪತಿಯಾದ ಅತನು–ದೀಪಿಕಾ ಅವರು ವಿಶ್ವಕಪ್ ಮೊದಲ ಹಂತದ ಆರ್ಚರಿ ಟೂರ್ನಿಯಲ್ಲಿ ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು. ಇಲ್ಲಿ ನಡೆಯುತ್ತಿರುವ ಟೂರ್ನಿಯ ವೈಯಕ್ತಿಕ ವಿಭಾಗಗಳಲ್ಲಿ ಭಾನುವಾರ ಅಗ್ರಸ್ಥಾನ ಗಳಿಸುವ ಮೂಲಕ ಭಾರತದ ಶ್ರೇಷ್ಠ ಸಾಧನೆಗೆ ಕಾರಣರಾದರು.

ಟೂರ್ನಿಯಲ್ಲಿ ಭಾರತ ತಂಡವು ಒಟ್ಟು ಮೂರು ಚಿನ್ನ ಹಾಗೂ ಒಂದು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ದೀಪಿಕಾ ಅವರಿಗೆ ವೈಯಕ್ತಿಕ ವಿಭಾಗದಲ್ಲಿ ಇದು ವೃತ್ತಿಜೀವನದ ನಾಲ್ಕನೇ ಚಿನ್ನವಾದರೆ, ಅತನು ಅವರಿಗೆ ಮೊದಲನೆಯದ್ದು.

2009ರಲ್ಲಿ ಕ್ರೊವೇಷ್ಯಾದಲ್ಲಿ ನಡೆದ ಟೂರ್ನಿಯಲ್ಲಿ ಜಯಂತ್ ತಾಲೂಕ್ದಾರ್‌ ಚಿನ್ನದ ಪದಕ ಗೆದ್ದುಕೊಂಡ ಬಳಿಕ ಪುರುಷರ ವೈಯಕ್ತಿಕ ವಿಭಾಗದಲ್ಲಿ ಅತನು ಅವರಿಂದ ಶ್ರೇಷ್ಠ ಸಾಮರ್ಥ್ಯ ಹೊರಹೊಮ್ಮಿದೆ.

ADVERTISEMENT

ಟೂರ್ನಿಯಲ್ಲಿ ಮೊದಲ ಚಿನ್ನದ ಪದಕವನ್ನು ಭಾರತ ಮಹಿಳಾ ತಂಡವು ಜಯಿಸಿತ್ತು.

ಭಾನುವಾರ ಮಿಶ್ರ ವಿಭಾಗದಲ್ಲಿ ಅತನು ಹಾಗೂ ಅಂಕಿತಾ ಭಕತ್ ಅವರ ತಂಡ 6–2ರಿಂದ ಅಮೆರಿಕ ತಂಡವನ್ನು ಮಣಿಸಿ ಕಂಚಿನ ಪದಕ ಗೆದ್ದುಕೊಂಡಿತು.

ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಮೂರನೇ ಶ್ರೇಯಾಂಕದ ದೀಪಿಕಾ, ಶೂಟ್ ಆಫ್‌ನಲ್ಲಿ 6–5ರಿಂದ ಅಮೆರಿಕದ ಮೆಕೆಂಜಿ ಬ್ರೌನ್‌ ಅವರನ್ನು ಪರಾಭವಗೊಳಿಸಿ ಚಿನ್ನಕ್ಕೆ ಮುತ್ತಿಟ್ಟರು. ಸೆಮಿಫೈನಲ್‌ನಲ್ಲಿ ಅವರು ಮೆಕ್ಸಿಕೊದ ಅಲೆಜಾಂಡ್ರಾ ವೆಲೆನ್ಸಿಯಾ ಅವರನ್ನು 7–3ರಿಂದ ಸೋಲಿಸಿದ್ದರು.

ಅತನು ದಾಸ್‌ ಅವರು ಪುರುಷರ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ 6–4ರಿಂದ ಸ್ಪೇನ್‌ನ ಡೇನಿಯಲ್ ಕ್ಯಾಸ್ಟ್ರೊ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.