ADVERTISEMENT

ಭಾರತದಲ್ಲಿ ಏಷ್ಯಾಕಪ್ ಹಾಕಿ: ಪಾಕಿಸ್ತಾನ ತಂಡ ಬಾರದಿದ್ದರೆ ಬಾಂಗ್ಲಾದೇಶಕ್ಕೆ ಅವಕಾಶ

ಪಿಟಿಐ
Published 18 ಆಗಸ್ಟ್ 2025, 9:53 IST
Last Updated 18 ಆಗಸ್ಟ್ 2025, 9:53 IST
<div class="paragraphs"><p>ಪಂದ್ಯವೊಂದರಲ್ಲಿ ಭಾರತ ಹಾಗೂ ಪಾಕಿಸ್ತಾನ ಆಟಗಾರರು</p></div>

ಪಂದ್ಯವೊಂದರಲ್ಲಿ ಭಾರತ ಹಾಗೂ ಪಾಕಿಸ್ತಾನ ಆಟಗಾರರು

   

ಕೃಪೆ: ಪಿಟಿಐ

ನವದೆಹಲಿ: ಬಿಹಾರದ ರಾಜ್‌ಗಿರ್‌ನಲ್ಲಿ ಇದೇ ತಿಂಗಳು 29ರಿಂದ ಆರಂಭವಾಗುವ ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿ ಭಾಗವಹಿಸುವುದನ್ನು ಪಾಕಿಸ್ತಾನ ತಂಡ ಖಚಿತಪಡಿಸಿ ದಿದ್ದರೆ, ಬಾಂಗ್ಲಾದೇಶಕ್ಕೆ ಅವಕಾಶ ನೀಡಲಾಗುವುದು ಎಂದು 'ಹಾಕಿ ಇಂಡಿಯಾ'ದ ಉನ್ನತ ಮೂಲಗಳು ಸೋಮವಾರ ತಿಳಿಸಿವೆ.

ADVERTISEMENT

ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳುವ ಪಾಕ್‌ ಆಟಗಾರರಿಗೆ ವಿಸಾ ಒದಗಿಸುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಖಚಿತಪಡಿಸಿದೆ. ಆದರೆ, ಭದ್ರತಾ ಕಾರಣಗಳನ್ನು ನೀಡಿ ಭಾರತಕ್ಕೆ ಪ್ರಯಾಣಿಸುವುದನ್ನು ಪಾಕಿಸ್ತಾನ ಹಾಕಿ ಫೆಡರೇಷನ್‌ (ಪಿಎಚ್‌ಎಫ್‌) ನಿರಾಕರಿಸಿದೆ.

ಎಂಟು ತಂಡಗಳು ಪಾಲ್ಗೊಳ್ಳುವ ಈ ಟೂರ್ನಿಯಲ್ಲಿ ಪಾಕಿಸ್ತಾನ ಬದಲು ಸ್ಪರ್ಧಿಸುವಂತೆ ಬಾಂಗ್ಲಾದೇಶಕ್ಕೆ ಈಗಾಗಲೇ ಸಂಘಟಕರು ಕೋರಿದ್ದಾರೆ. ಆದರೆ, ಮುಂದಿನ 48 ಗಂಟೆಗಳ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು 'ಹಾಕಿ ಇಂಡಿಯಾ' ಅಧಿಕಾರಿಯೊಬ್ಬರು ಹೇಳಿದ್ದಾರೆ.

'ಪಾಕಿಸ್ತಾನ ಆಟಗಾರರಿಗೆ ವಿಸಾ ಸೌಲಭ್ಯ ಕಲ್ಪಿಸುವುದಾಗಿ ಭಾರತ ಸರ್ಕಾರ ಈಗಾಗಲೇ ಹೇಳಿದೆ. ಆದಾಗ್ಯೂ ಅವರು ಬರಲು ನಿರಾಕರಿಸಿದರೆ, ಅದು ನಮ್ಮ ಸಮಸ್ಯೆ ಅಲ್ಲ. ಪಾಕ್‌ ತಂಡ ಬರದಿದ್ದರೆ, ಟೂರ್ನಿಯಲ್ಲಿ ಭಾಗವಹಿಸುವಂತೆ ಬಾಂಗ್ಲಾದೇಶಕ್ಕೆ ಈಗಾಗಲೇ ಆಹ್ವಾನ ನೀಡಿದ್ದೇವೆ. ಆದರೆ, ಪಾಕ್‌ ತಂಡದ ಆಗಮನ ಖಾತ್ರಿಪಡಿಸಿಕೊಳ್ಳಲು ಇನ್ನೆರಡು ದಿನ ಕಾಯಬೇಕಿದೆ' ಎಂದು ತಿಳಿಸಿದ್ದಾರೆ.

'ಪಾಕಿಸ್ತಾನವಾಗಲೀ, ಬಾಂಗ್ಲದೇಶವಾಗಲೀ ಈವರೆಗೆ ನಮಗೆ ಯಾವುದೇ ಖಾತ್ರಿ ನೀಡಿಲ್ಲ. ಆದರೆ, ಪಾಕಿಸ್ತಾನ ಬದಲು ಬಾಂಗ್ಲಾದೇಶ ಆಡುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.

ಏಷ್ಯಾಕಪ್‌ ಟೂರ್ನಿಯು 2026ರ ವಿಶ್ವಕಪ್‌ಗೆ ಅರ್ಹತಾ ಪಂದ್ಯಾವಳಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಉಗ್ರರು ನಡೆಸಿದ ಗುಂಡಿನ ದಾಳಿ ಬಳಿಕ ಭಾರತ, ಪಾಕ್‌ ಸಂಬಂಧ ಮತ್ತಷ್ಟು ಹಳಸಿದೆ. ಹೀಗಾಗಿ, ಪಾಕ್‌ ತಂಡ ಏಷ್ಯಾಕಪ್‌ನಲ್ಲಿ ಆಡುವುದು ಅನುಮಾನವಾಗಿದೆ. ಉಳಿದಂತೆ, ಆತಿಥೇಯ ಭಾರತ, ಚೀನಾ, ಜಪಾನ್‌, ಮಲೇಷ್ಯಾ, ದಕ್ಷಿಣ ಕೊರಿಯಾ, ಒಮನ್‌ ಮತ್ತು ಚೀನೀಸ್‌ ತೈಪೇಯಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.