ಅಭ್ಯಾಸದಲ್ಲಿ ನಿರತವಾಗಿರುವ ಭಾರತೀಯ ಆಟಗಾರರು
ಪಿಟಿಐ
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡ ನಾಳೆ (ಶುಕ್ರವಾರ) ಒಮಾನ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ತೆಗೆದುಕೊಂಡು ಸಂಪೂರ್ಣ 20 ಓವರ್‌ಗಳನ್ನು ಬ್ಯಾಟಿಂಗ್ ನಡೆಸಲು ಟೀಂ ಇಂಡಿಯಾ ಎದುರು ನೋಡುತ್ತಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ ಈಗಾಗಲೇ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದಿದೆ. ಮಾತ್ರವಲ್ಲ, ಭಾನುವಾರ ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಲೀಗ್‌ನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲೂ ಕಡಿಮೆ ಸ್ಕೋರ್ ಬೆನ್ನಟ್ಟಿ ಗೆದ್ದಿರುವ ಭಾರತೀಯ ಬ್ಯಾಟರ್‌ಗಳಿಗೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಕ್ಕಿಲ್ಲ. ಹಾಗಾಗಿ ಒಮಾನ್ ವಿರುದ್ಧದ ಪಂದ್ಯದಲ್ಲಿ ಪೂರ್ಣ 20 ಓವರ್‌ಗಳನ್ನು ಬಳಸಿಕೊಂಡು ಬ್ಯಾಟಿಂಗ್ ಮಾಡಲು ಟೀಂ ಇಂಡಿಯಾ ಎದುರು ನೋಡುತ್ತಿದೆ.
ಲೀಗ್‌ನ ಎರಡು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾಗಿರುವ ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿಲ್ಲ. ಹಾಗಾಗಿ ಮುಂದಿನ ಒಮಾನ್ ವಿರುದ್ಧದ ಪಂದ್ಯ ಈ ಆಟಗಾರರಿಗೆ ತಮ್ಮ ಲಯಕ್ಕೆ ಮರಳಲು ಉತ್ತಮ ಅವಕಾಶ ನೀಡಲಿದೆ..
ಸದ್ಯ ಟೀಂ ಇಂಡಿಯಾದಲ್ಲಿ ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿಯಂತ ಶ್ರೇಷ್ಠ ಬೌಲರ್‌ಗಳಿದ್ದು, ಅವರ ದಾಳಿ ಎದುರಿಸುವುದು ಓಮನ್‌ಗೆ ಸುಲಭವಲ್ಲ, ಒಂದುವೇಳೆ, ಒಮಾನ್ ಮೊದಲು ಬ್ಯಾಟಿಂಗ್ ನಡೆಸಿದರೆ, ಭಾರತೀಯ ಬೌಲರ್‌ಗಳನ್ನು ಎದುರಿಸಲಾಗದೆ ಕಡಿಮೆ ರನ್‌ಗಳಿಗೆ ಆಲೌಟ್ ಆಗುವ ಸಂಭವ ಹೆಚ್ಚಿದೆ.
ಒಮಾನ್ ಆಡಿರುವ ಎರಡೂ ಪಂದ್ಯಗಳಲ್ಲಿ ಉತ್ತಮ ಸ್ಕೋರ್ ಕಲೆಹಾಕಿಲ್ಲ, ಪಾಕಿಸ್ತಾನ ಮತ್ತು ಯುಎಇ ಎರಡೂ ತಂಡಗಳ ವಿರುದ್ಧ ಅಲ್ಪಮೊತ್ತಕ್ಕೆ ಕುಸಿದಿದೆ. ಕ್ರಮವಾಗಿ 67 ಹಾಗೂ 130 ರನ್ ಗಳಿಸಿದೆ. ಮಾತ್ರವಲ್ಲ, ಎರಡೂ ಪಂದ್ಯಗಳಿಂದ ಯಾವುದೇ ಒಬ್ಬ ಬ್ಯಾಟ್ಸಮನ್ ಕೂಡ 30ಕ್ಕಿಂತ ಅಧಿಕ ರನ್ ಕಲೆಹಾಕಿಲ್ಲ.
ಇತ್ತ ಒಮಾನ್ ವಿರುದ್ಧದ ಪಂದ್ಯದ ಬಳಿಕ ಟೀಂ ಇಂಡಿಯಾ ಪಾಕಿಸ್ತಾನ ತಂಡವನ್ನು ಎದುರಿಸಬೇಕಿರುವುದರಿಂದ ಯಾವುದೇ ಆಟಗಾರರಿಗೆ ವಿಶ್ರಾಂತಿ ನೀಡದಿರಲು ಕೋಚ್ ಗಂಭೀರ್ ನಿರ್ಧರಿಸಿದ್ದಾರೆ. ಒಂದುವೇಳೆ, ಜಸ್‌ಪ್ರೀತ್ ಬುಮ್ರಾ ತಮಗೆ ವಿಶ್ರಾಂತಿ ಬೇಕು ಅಂದರೆ ಮಾತ್ರ ಪರಿಗಣಿಸುವ ಸಾಧ್ಯತೆ ಇದೆ.
ಒಮಾನ್ ವಿರುದ್ಧದ ಅನೌಪಚಾರಿಕ ಪಂದ್ಯದಲ್ಲಿ, ಜಸ್ಪ್ರೀತ್ ಬುಮ್ರಾ ಬದಲು ಅರ್ಷದೀಪ್ ಸಿಂಗ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇನ್ನೂ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸಿಕೊಂಡು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ) ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
ಒಮಾನ್: ಜತೀಂದರ್ ಸಿಂಗ್ (ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ, ಸೂಫಿಯಾನ್ ಯೂಸೂಫ್, ಆಶಿಶ್ ಒಡೆದರಾ, ಅಮೀರ್ ಕಲೀಮ್, ಮೊಹಮ್ಮದ್ ನದೀಮ್, ಸುಫಿಯಾನ್ ಮೊಹಮ್ಮದ್, ಆರ್ಯನ್ ಬಿಶ್ತ್, ಕರಣ್ ಸೋನಾವಾಲೆ, ಜಿಕ್ರಿಯಾ ಇಸ್ಲಾಂ, ಸಮಯ್ ಶ್ರೀವತ್ಸ, ಹಸ್ನೇನ್ ಶಾ, ಶಾ ಫೈಸಲ್, ನದೀಮ್ ಖಾನ್, ವಸೀಂ ಅಲಿ, ಜಿತೆನ್ ರಾಮನಂದಿ, ಆರ್ಯನ್ ಬಿಶ್ತ್, ಶಖೀಲ್ ಅಹ್ಮದ್.
ಪಂದ್ಯ ಆರಂಭ: ಶುಕ್ರವಾರ ರಾತ್ರಿ 8 ಗಂಟೆಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.