
ನವದೆಹಲಿ: ಭಾರತದ ಐಶ್ವರಿ ಪ್ರತಾಪ್‌ಸಿಂಗ್ ತೋಮರ್ ಅವರು ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಪುರುಷರ 50 ಮೀ. ರೈಫಲ್ ತ್ರೀ ಪೊಸಿಷನ್ಸ್ ಸ್ಪರ್ಧೆಯಲ್ಲಿ ಗುರುವಾರ ಸ್ವರ್ಣಕ್ಕೆ ಗುರಿಯಿಟ್ಟರು. ಅವರು ಫೈನಲ್ ಸುತ್ತಿನಲ್ಲಿ362 ಅಂಕ ಸಂಪಾದಿಸಿ ವಿಶ್ವದಾಖಲೆಯನ್ನೂ ಸ್ಥಾಪಿಸಿದರು.
ತೋಮರ‌್ ಅವರಿಗೆ ನಿಕಟ ಪೈಪೋಟಿ ಒಡ್ಡಿದ ನೀರಜ್ ಕುಮಾರ್ (361.8) ಬೆಳ್ಳಿ ಪದಕ ಗೆದ್ದರೆ, ಅಖಿಲ್ ಶ್ಯೋರಾಣ್ (343.5) ಕಂಚು ತಮ್ಮದಾಗಿಸಿಕೊಂಡರು. ಆ ಮೂಲಕ ಭಾರತದ ಶೂಟರ್‌ಗಳು ಸ್ಪರ್ಧೆಯ ಮೂರೂ ಪದಕಗಳನ್ನು ಜಯಿಸಿ, ಪಾರಮ್ಯ ಮೆರೆದರು.
ಫೈನಲ್‌ಗೆ ಮುನ್ನ ನಡೆದ ಅರ್ಹತಾ ಸುತ್ತಿನಲ್ಲಿ ನೀರಜ್ (593) ಅಗ್ರಸ್ಥಾನ ಪಡೆದಿದ್ದರು. ಮಹಾರಾಷ್ಟ್ರದ ರುದ್ರಾಂಕ್ಷ್ ಪಾಟೀಲ್ (591) ಎರಡನೇ ಸ್ಥಾನ ಪಡೆದರಾದರೂ ಅವರು ರ್‍ಯಾಂಕಿಂಗ್ ಪಾಯಿಂಟ್ಸ್‌ಗಾಗಿ ಮಾತ್ರ ಸ್ಪರ್ಧಿಸಿದ್ದರು. ತೋಮರ್ ಹಾಗೂ ನಿಖಿಲ್ ತಲಾ 588 ಪಾಯಿಂಟ್ಸ್ ಪಡೆದು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ನೀರಜ್, ತೋಮರ್ ಮತ್ತು ನಿಖಿಲ್ ಜೋಡಿಗೆ (1,769 ಅಂಕ) ಟೀಮ್ ವಿಭಾಗದಲ್ಲಿಯೂ ಚಿನ್ನದ ಪದಕ ಒಲಿಯಿತು. ಜಪಾನ್ (1,754) ಹಾಗೂ ಕಜಾಕಸ್ತಾನ (1,748) ತಂಡಗಳು ಕ್ರಮವಾಗಿ ರಜತ ಹಾಗೂ ಕಂಚು ಜಯಿಸಿದವು.
ಒಲಿಂಪಿಯನ್ ಜಾಯ್‌ದೀಪ್ ಕರ್ಮಾಕರ್ ಅವರ ಪುತ್ರ ಅದ್ರಿಯಾನ್ ಜೂನಿಯರ್ ವಿಭಾಗದಲ್ಲಿ ಸ್ವರ್ಣ ಗೆದ್ದುಕೊಂಡರು. ಫೈನಲ್ ಸುತ್ತಿನಲ್ಲಿ 353.2 ಅಂಕ ಸಂಪಾದಿಸಿ ವಿಶ್ವ ಜೂನಿಯರ್ ದಾಖಲೆ ಹಾಗೂ ಏಷ್ಯನ್ ಜೂನಿಯರ್ ದಾಖಲೆಯನ್ನು ನಿರ್ಮಿಸಿದರು. ಕಜಾಕಸ್ತಾನದ ಕಿಮ್ ಡಿಮಿಟ್ರಿ (348.5) ರಜತ ಗೆದ್ದರೆ, ಭಾರತದ ಮಾನ್ವೇಂದ್ರ ಸಿಂಗ್ ಶೇಖಾವತ್ (338.6) ಕಂಚು ತಮ್ಮದಾಗಿಸಿಕೊಂಡರು.
ಚಾಂಪಿಯನ್‌ಷಿಪ್‌ನ ಕೊನೆಯ ದಿನವಾದ ಶುಕ್ರವಾರ ಮಹಿಳೆಯರ 50 ಮೀ. ರೈಫಲ್ ಪ್ರೋನ್ ಹಾಗೂ ಪುರುಷರ 25 ಮೀ. ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಗಳು ನಡೆಯಲಿವೆ. ಭಾರತವು ಈವರೆಗೆ 38 ಚಿನ್ನ ಸೇರಿ 70 ಪದಕ ಗೆದ್ದಿದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಉಜ್ಬೇಕಿಸ್ತಾನ (4 ಪದಕ; 3 ಚಿನ್ನ) ಜಯಿಸಿದ್ದು ಎರಡನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.