ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಚುನಾವಣೆಗಳನ್ನು ಹೊಸ ಕ್ರೀಡಾ ಕಾಯ್ದೆಯ ಪ್ರಕಾರ ನಡೆಸಬೇಕು ಎಂದು ಕೇಂದ್ರ ಕ್ರೀಡಾ ಸಚಿವಾಲಯವು ಇಂಗಿತ ವ್ಯಕ್ತಪಡಿಸಿದೆ.
ಆದರೆ ಕಾಯ್ದೆಯನ್ನು ಆರು ತಿಂಗಳಲ್ಲಿ ಪೂರ್ಣಪ್ರಮಾಣದಲ್ಲಿ ಅನುಷ್ಠಾನ ಮಾಡಲು ಸಚಿವಾಲಯವು ಗುರಿಯಿಟ್ಟುಕೊಂಡಿದೆ. ಆದರೆ ಕ್ರಿಕೆಟ್ ಸಂಸ್ಥೆಯಲ್ಲಿ ಸೂಕ್ತ ಸಮಯಕ್ಕೆ ಹೊಸ ಕಾಯ್ದೆಯ ಅನುಷ್ಠಾನವು ಪೂರ್ಣಗೊಳ್ಳದಿದ್ದರೆ ಸುಪ್ರೀಂಕೋರ್ಟ್ ಅನುಮೋದಿಸಿರುವ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳ ಅನ್ವಯ ಚುನಾವಣೆ ನಡೆಸಬಹುದು ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.
‘ಬಿಸಿಸಿಐ ಸೇರಿದಂತೆ ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು (ಎನ್‌ಎಸ್‌ಎಫ್) ಕಾಯ್ದೆಯನ್ನು ಪೂರ್ಣವಾಗಿ ಜಾರಿಗೊಳಿಸಿದ ನಂತರ ಅದರನ್ವಯ ಚುನಾವಣೆಗಳನ್ನು ನಡೆಸಬೇಕಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.
ಲೋಧಾ ಸಮಿತಿಯ ಶಿಫಾರಸುಗಳಲ್ಲಿ ಪದಾಧಿಕಾರಿಗಳ ವಯೋಮಿತಿಯು 70 ವರ್ಷಕ್ಕೆ ಮಿತಿಗೊಳಿಸಲಾಗಿದೆ. ಆದರೆ ಹೊಸ ಕಾಯ್ದೆಯಲ್ಲಿ ಅಂತರರಾಷ್ಟ್ರೀಯ ಫೆಡರೇಷನ್‌ಗಳ ಬೈಲಾ ಮತ್ತು ಕಾನೂನುಗಳು ಅನುವು ಮಾಡಿದರೆ 70 ರಿಂದ 75 ವರ್ಷಗಳವರೆಗೆ ವಯಸ್ಸಿನ ಮಿತಿ ಇರುತ್ತದೆ. ಹೊಸ ಕಾಯ್ದೆಯಲ್ಲಿ ಬಿಸಿಸಿಐ ಚುನಾವಣೆ ನಡೆಸಲು ಸಿದ್ಧವಾದರೆ, ಐಸಿಸಿ ನಿಯಮದಲ್ಲಿ ಪದಾಧಿಕಾರಿಗಳ ಸ್ಪರ್ಧೆಗೆ ವಯಸ್ಸಿನ ಮಿತಿ ಇಲ್ಲದಿರುವ ನಿಯಮ ಅನ್ವಯವಾಗುತ್ತದೆ.
ಬಿಸಿಸಿಐ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಅವರಿಗೆ ಈಚೆಗೆ 70 ವರ್ಷ ವಯಸ್ಸು ತುಂಬಿತು. ಅದರಿಂದಾಗಿ ಅವರ ಅಧಿಕಾರವಧಿ ಕೊನೆಗೊಂಡಿತು. ಆದರೂ ಕೂಡ ಬಿಸಿಸಿಐ ಇದುವರೆಗೂ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮಂಡಳಿಯು ತನ್ನ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸುವಾಗ ಚುನಾವಣೆಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.