ADVERTISEMENT

ಜೀನ್ಸ್ ಧರಿಸಿದ್ದಕ್ಕಾಗಿ ವಿಶ್ವ ಚೆಸ್ ತಾರೆ ಮ್ಯಾಗ್ನಸ್ ಕಾರ್ಲಸನ್ ಅನರ್ಹ!

ಪಿಟಿಐ
Published 28 ಡಿಸೆಂಬರ್ 2024, 9:58 IST
Last Updated 28 ಡಿಸೆಂಬರ್ 2024, 9:58 IST
<div class="paragraphs"><p>ಮ್ಯಾಗ್ನಸ್ ಕಾರ್ಲಸನ್</p></div>

ಮ್ಯಾಗ್ನಸ್ ಕಾರ್ಲಸನ್

   

(ಚಿತ್ರ ಕೃಪೆ: X/@FIDE_chess)

ನ್ಯೂಯಾರ್ಕ್: ಫಿಡೆ ವಸ್ತ್ರಸಂಹಿತೆ ಉಲ್ಲಂಘನೆಗಾಗಿ ಐದು ಬಾರಿಯ ವಿಶ್ವ ಚಾಂಪಿಯನ್ ಹಾಗೂ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರಿಗೆ ಮೊದಲು ದಂಡ ವಿಧಿಸಿ, ನಂತರ ವಿಶ್ವ ರ್‍ಯಾಪಿಡ್‌ ಚೆಸ್‌ ಚಾಂಪಿಯನ್‌ಷಿಪ್‌ನಿಂದ ಅನರ್ಹಗೊಳಿಸಲಾಯಿತು.

ADVERTISEMENT

ವಾಲ್‌ಸ್ಟ್ರೀಟ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಜೀನ್ಸ್‌ ಪ್ಯಾಂಟ್‌ ಧರಿಸಿ ಆಡಲು ಬಂದಿದ್ದ ಹಾಲಿ ಚಾಂಪಿಯನ್ ಕಾರ್ಲ್‌ಸನ್‌ ಅವರಿಗೆ ಮೊದಲು ಸುಮಾರು ₹17000 ($200) ದಂಡ ವಿಧಿಸಲಾಯಿತು. ಟೂರ್ನಿಯ ವಸ್ತ್ರಸಂಹಿತೆ ನಿಯಮಗಳ ಪ್ರಕಾರ ಆಟಗಾರರು ಜೀನ್ಸ್‌ ಧರಿಸುವಂತಿಲ್ಲ. ಎಂಟನೇ ಸುತ್ತಿನ ನಂತರ ಪ್ಯಾಂಟ್‌ ಬದಲಾಯಿಸಿ ಬರುವಂತೆ ಅವರಿಗೆ ಚೀಫ್‌ ಆರ್ಬಿಟರ್‌ ಅಲೆಕ್ಸ್‌ ಹೊಲೊವ್ಜಾಕ್ ಅವರು ವಿನಂತಿಸಿದ್ದರು. ಆದರೆ ಅದಕ್ಕೆ ಮ್ಯಾಗ್ನಸ್‌ ನಿರಾಕರಿಸಿದ ಕಾರಣ ಅನರ್ಹಗೊಳಿಸಲಾಯಿತು.

ಒಂಬತ್ತನೇ ಸುತ್ತಿನ ಪೇರಿಂಗ್‌ (ಆಟಗಾರರ ಮುಖಾಮುಖಿ) ವೇಳೆ ಅವರ ಹೆಸರನ್ನು ಸೇರ್ಪಡೆಗೊಳಿಸಲಿಲ್ಲ. ಅವರು ಕಳೆದ ಎರಡು ವರ್ಷಗಳಿಂದ ಈ ಚಾಂಪಿಯನ್‌ಷಿಪ್‌ನಲ್ಲಿ ವಿಜೇತರಾಗಿದ್ದಾರೆ.

ಮರುದಿನದಿಂದ ವಸ್ತ್ರಸಂಹಿತೆ ಪಾಲನೆ ಮಾಡಲು ಒಪ್ಪುವುದಾಗಿ ಚೆಸ್‌ ಲೋಕದ ದಿಗ್ಗಜ ಆಟಗಾರ ಕಾರ್ಲ್‌ಸನ್‌ ತಿಳಿಸಿದರು. ಆದರೆ ತಕ್ಷಣಕ್ಕೆ ಬದಲಾಯಿಸಲು ಒಪ್ಪಲಿಲ್ಲ. ಹೀಗಾಗಿ ಅವರನ್ನು ಅನರ್ಹಗೊಳಿಸಲಾಯಿತು.

ವೃತ್ತಿಪರತೆ ಕಾಪಾಡುವ ದೃಷ್ಟಿಯಿಂದ ಭಾಗವಹಿಸುವ ಎಲ್ಲ ಆಟಗಾರರಿಗೆ ವಸ್ತ್ರಸಂಹಿತೆ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ‘ಎಕ್ಸ್‌’ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ವಿಶ್ವ ಚೆಸ್‌ ಸಂಸ್ಥೆಯಾದ ಫಿಡೆ ತಿಳಿಸಿದೆ.

ವಸ್ತ್ರಸಂಹಿತೆಯನ್ನು ಫಿಡೆ ಅಥ್ಲೀಟ್ಸ್‌ ಕಮಿಷನ್ ರೂಪಿಸಿದೆ. ಕೆಲ ವರ್ಷಗಳಿಂದ ಈ ನಿಯಮ ಜಾರಿಯಲ್ಲಿದೆ. ಆಟಗಾರರಿಗೆ ನೀಡಲಾಗಿರುವ ವಾಸ್ತವ್ಯದ ಸ್ಥಳ ನಡೆದುಕೊಂಡು ಹೋಗಬಹುದಾದ ಅಂತರದಲ್ಲಿದೆ. ಹೀಗಾಗಿ ನಿಯಮಕ್ಕೆ ಬದ್ಧರಾಗಿರುವುದು ಸ್ಪರ್ಧಿಗಳಿಗೆ ಕಷ್ಟವಾಗುವುದಿಲ್ಲ ಎಂದು ಹೇಳಿದೆ.

‘ಇಂದು ಕಾರ್ಲ್‌ಸಬ್‌ ಅವರು ಜೀನ್ಸ್‌ ಧರಿಸಿ ವಸ್ತ್ರಸಂಹಿತೆ ಉಲ್ಲಂಘಿಸಿದ್ದಾರೆ. ಈ ಕೂಟಕ್ಕೆ ಹಲವು ವರ್ಷಗಳಿಂದ ಮಾಡಿರುವ ನಿಯಮಗಳ ಪ್ರಕಾರ ಜೀನ್ಸ್‌ ಧರಿಸುವಂತಿಲ್ಲ. ಚೀಫ್‌ ಆರ್ಬಿಟರ್ ಅವರು ಕಾರ್ಲ್‌ಸನ್ ಅವರಿಗೆ ಉಲ್ಲಂಘನೆ ಬಗ್ಗೆ ಮಾಹಿತಿ ನೀಡಿ 200 ಡಾಲರ್ ದಂಡ ವಿಧಿಸಿದ್ದಾರೆ. ಅವರಿಗೆ ಜೀನ್ಸ್‌ ಬದಲಾಯಿಸಿ ಬರುವಂತೆ ತಿಳಿಸಿದ್ದಾರೆ. ಆದರೆ ಕಾರ್ಲ್‌ಸನ್‌ ನಿರಾಕರಿಸಿದ್ದಾರೆ. 9ನೇ ಸುತ್ತಿನ ಮುಖಾಮುಖಿಯಲ್ಲಿ ಅವರ ಹೆಸರು ಉಳಿಸಲಿಲ್ಲ. ಯಾರೂ ನಿಯಮಗಳಿಗೆ ಆತೀತರಲ್ಲ. ಅದು ಎಲ್ಲರಿಗೂ ಒಂದೇ’ ಎಂದು ಫಿಡೆ ತಿಳಿಸಿದೆ.

ಇದಕ್ಕೆ ಮೊದಲು ರಷ್ಯಾದ ಗ್ರ್ಯಾಂಡ್‌ಮಾಸ್ಟರ್‌ ಇಯಾನ್‌ ನಿಪೊಮ್‌ನಿಷಿ  ಅವರಿಗೂ ದಂಡ ವಿಧಿಸಲಾಯಿತು. ಆದರೆ ಅವರು ಜೀನ್ಸ್‌ ಪ್ಯಾಂಟ್‌ ಬದಲಾಯಿಸಿ ಬಂದರು.

‘ತಾವು ಬ್ಲಿಟ್ಜ್‌ ಚಾಂಪಿಯನ್‌ಷಿಪ್‌ನಲ್ಲೂ ಭಾಗವಹಿಸುವುದಿಲ್ಲ. ಫಿಡೆ ವಸ್ತ್ರಸಂಹಿತೆಯಿಂದ ನಿಯಮಗಳಿಂದ ಬೇಸತ್ತಿದ್ದೇನೆ. ಇದಕ್ಕಿಂತ ಒಳ್ಳೆಯ ವಾತಾವರಣದಲ್ಲಿರುವೆ’ ಎಂದು ಕಾರ್ಲ್‌ಸನ್‌ ನಾರ್ವೆಯ ಪ್ರಸಾರ ವಾಹಿನಿ ಎನ್‌ಆರ್‌ಕೆಗೆ ಪ್ರತಿಕ್ರಿಯಿಸಿದರು.

ಕಾರ್ಲ್‌ಸನ್‌, ಫಿಡೆಯಿಂದ ದೂರಸರಿಯುತ್ತಿರುವ ಲಕ್ಷಣ ಕಾಣುತ್ತಿದ್ದು, ಆಟದ ವೇಗಗೊಳಿಸುವ ಮಾದರಿ ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ‘ಫ್ರೀಸ್ಟೈಲ್‌ ಚೆಸ್‌’ ಗಾಗಿ ಅವರು 102 ಕೋಟಿ ರೂಪಾಯಿ ವಿನಿಯೋಗಿಸುತ್ತಿದ್ದಾರೆ.

ಫ್ರೀಸ್ಟೈಲ್‌ ಚೆಸ್‌ನಲ್ಲಿ ಪಡೆಗಳನ್ನು ಯಾವುದೇ ಮೊದಲೆರಡು ಸಾಲಿನಲ್ಲಿ ಯಾವುದೇ ರೀತಿ ಇಡಲು ಅವಕಾಶವಿದೆ. ಅಮೆರಿಕದ ದಿಗ್ಗಜ ಬಾಬಿ ಫಿಷರ್‌ ಮೊದಲಿಗೆ ಈ ಯೋಚನೆ ಹರಿಯಬಿಟ್ಟಿದ್ದರು. ಈ ರೀತಿಯ ಆಟವನ್ನು ಫ್ರೀಸ್ಟೈಲ್ ಚೆಸ್‌ ಎಂದು ಕರೆಯಲು ಕಾರ್ಲ್‌ಸನ್‌ ಇಷ್ಟಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.