ADVERTISEMENT

ಡಿ.5ರಿಂದ ಜೂನಿಯರ್‌ ವಿಶ್ವಕಪ್ ಹಾಕಿ: ಯಶಸ್ಸಿನ ವಿಶ್ವಾಸದಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 12:41 IST
Last Updated 2 ಡಿಸೆಂಬರ್ 2023, 12:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಇತ್ತೀಚಿನ ಯಶಸ್ಸು, ಭಾರತ ತಂಡಕ್ಕೆ ಕ್ವಾಲಾಲಂಪುರದಲ್ಲಿ ನಡೆಯಲಿರುವ ಪುರುಷರ ಜೂನಿಯರ್‌ ವಿಶ್ವಕಪ್‌ನಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಲಿದೆ ಎಂದು ತಂಡದ ಉಪ ನಾಯಕ ಅರಿಜೀತ್ ಸಿಂಗ್ ಹುಂಡಲ್ ಶನಿವಾರ ಇಲ್ಲಿ ಹೇಳಿದರು. ಬರುವ ಮಂಗಳವಾರ (ಡಿ.5) ಈ ಟೂರ್ನಿ ಆರಂಭವಾಗಲಿದೆ.

ಭಾರತ ಜೂನಿಯರ್ ತಂಡದವರು ವಿಶ್ವಕಪ್‌ ಆಡಲು ಶನಿವಾರ ಮಲೇಷ್ಯಾಕ್ಕೆ ತೆರಳಿದರು. 5ರಂದು ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಕೊರಿಯಾ ವಿರುದ್ಧ ಆಡಲಿದೆ. ‘ಕಳೆದ (ಭುವನೇಶ್ವರದಲ್ಲಿ ನಡೆದ) ವಿಶ್ವಕಪ್ ನಂತರ ಭಾರತ ತಂಡವು ಸಾಕಷ್ಟು ಪ್ರಗತಿ ಸಾಧಿಸಿದೆ. 2022ರಲ್ಲಿ ನಾವು ಸುಲ್ತಾನ್ ಆಫ್ ಜೋಹರ್ ಕಪ್ ಟೂರ್ನಿ, ಜೂನಿಯರ್ ಏಷ್ಯಾ ಕಪ್ ಗೆದ್ದುಕೊಂಡೆವು. ಇತ್ತೀಚೆಗೆ ಸುಲ್ತಾನ್‌ ಆಫ್‌ ಜೋಹರ್‌ ಕಪ್‌ನಲ್ಲಿ ಮೂರನೇ ಸ್ಥಾನ ಗಳಿಸಿದೆವು’ ಎಂದು ಹುಂಡಲ್ ಅವರು ಹಾಕಿ ಇಂಡಿಯಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ನಾವೂ ಜೂನಿಯರ್ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಹೊಂದಿದ್ದೇವೆ. ಸಂದರ್ಭ ಬಂದಾಗ ನಮ್ಮಲ್ಲಿರುವ ಅತ್ಯುತ್ತಮ ಆಟವನ್ನು ಪ್ರದರ್ಶಿಸಬೇಕಷ್ಟೇ’ ಎಂದು ಅವರು ಹೇಳಿದರು.

‌ಭಾರತ ಮತ್ತು ಕೊರಿಯಾ ಜೊತೆ, ಸ್ಪೇನ್‌, ಕೆನಡಾ ‘ಸಿ’ ಗುಂಪಿನಲ್ಲಿವೆ.‌ ಹಾಲಿ ಚಾಂಪಿಯನ್ ಆರ್ಜೆಂಟೀನಾ, ಚಿಲಿ, ಆಸ್ಟ್ರೇಲಿಯಾ ಮತ್ತು ಆತಿಥೇಯ ಮಲೇಷ್ಯಾ ‘ಎ’ ಗುಂಪಿನಲ್ಲಿವೆ. ಜರ್ಮನಿ, ಫ್ರಾನ್ಸ್‌, ದಕ್ಷಿಣ ಆಫ್ರಿಕಾ ಮತ್ತು ಈಜಿಪ್ಟ್‌ ‘ಬಿ’ ಗುಂಪಿನಲ್ಲಿ, ನೆದರ್ಲೆಂಡ್ಸ್‌, ನ್ಯೂಜಿಲೆಂಡ್‌, ಬೆಲ್ಜಿಯಂ ಮತ್ತು ಪಾಕಿಸ್ತಾನ ತಂಡಗಳು ‘ಡಿ’ ಗುಂಪಿನಲ್ಲಿವೆ.

ಕೊರಿಯಾ ವಿರುದ್ಧದ ಮೊದಲ ಪಂದ್ಯದ ನಂತರ ಭಾರತವು ತನ್ನ ಎರಡನೇ ಪಂದ್ಯವನ್ನು ಡಿ. 7ರಂದು ಸ್ಪೇನ್‌ ವಿರುದ್ಧ, ಡಿ. 9ರಂದು ಕೆನಡಾ ವಿರುದ್ಧ ಮೂರನೇ ಪಂದ್ಯವನ್ನು ಆಡಲಿದೆ. ಭಾರತ ತನ್ನ ಗುಂಪಿನಲ್ಲಿ ಮೊದಲ ಎರಡರಲ್ಲಿ ಸ್ಥಾನ ಪಡೆದರೆ ಕ್ವಾರ್ಟರ್‌ಫೈನಲ್ ಹಂತಕ್ಕೇರಬಹುದು.

ಭುವನೇಶ್ವರದಲ್ಲಿ 2021ರಲ್ಲಿ ನಡೆದ ಇದಕ್ಕೆ ಮೊದಲಿನ ಟೂರ್ನಿಯಲ್ಲಿ ಭಾರತ ನಾಲ್ಕನೇ ಸ್ಥಾನ ಗಳಿಸಿತ್ತು. ಮೂರು– ನಾಲ್ಕನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಫ್ರಾನ್ಸ್‌ ತಂಡದೆದುರು ಸೋಲನುಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.