ADVERTISEMENT

Tokyo Olympics: ‘ಲವ್ಲಿ’ ಪಂಚ್‌ಗೆ ಚಿನ್‌ ಚೆನ್ ಚಿತ್‌

ಮಾಜಿ ವಿಶ್ವ ಚಾಂಪಿಯನ್‌ ಎದುರು ಜಯ; ಸಿಮ್ರನ್‌ಜೀತ್ ಕೌರ್‌ಗೆ ನಿರಾಸೆ

ಪಿಟಿಐ
Published 30 ಜುಲೈ 2021, 19:31 IST
Last Updated 30 ಜುಲೈ 2021, 19:31 IST
ಲವ್ಲಿನಾ ಬೊರ್ಗೊಹೇನ್ –ಪಿಟಿಐ ಚಿತ್ರ
ಲವ್ಲಿನಾ ಬೊರ್ಗೊಹೇನ್ –ಪಿಟಿಐ ಚಿತ್ರ   

ಟೋಕಿಯೊ: ಅಸ್ಸಾಂನ ಲವ್ಲಿನಾ ಬೊರ್ಗೊಹೇನ್ ಪದಾರ್ಪಣೆಯ ಒಲಿಂಪಿಕ್ಸ್‌ನಲ್ಲೇ ಅಮೋಘ ಸಾಧನೆ ಮಾಡಿದ್ದಾರೆ. ಮಹಿಳೆಯರ ಬಾಕ್ಸಿಂಗ್‌ನಲ್ಲಿ ಅವರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ 69 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮಾಜಿ ವಿಶ್ವ ಚಾಂಪಿಯನ್, ಚೀನಾ ಥೈಪೆಯ ನೀನ್ ಚಿನ್ ಚೆನ್ ಎದುರು ಲವ್ಲಿನಾ ಭರ್ಜರಿ ಗೆಲುವು ದಾಖಲಿಸಿದರು.

23 ವರ್ಷದ ಭಾರತದ ಬಾಕ್ಸರ್‌ 4–1ರಿಂದ ಎದುರಾಳಿಯನ್ನು ಮಣಿಸಿದರು. ಅಂತಿಮ ನಾಲ್ಕರ ಘಟ್ಟದಲ್ಲಿ ಅವರು ಹಾಲಿ ವಿಶ್ವ ಚಾಂಪಿಯನ್ ಟರ್ಕಿಯ ಬುಸೆನಾಜ್ ಸುರ್ಮೆನಲಿ ವಿರುದ್ಧ ಸೆಣಸುವರು. ಉಕ್ರೇನ್‌ನ ಅನಾ ಲೈಜೆಂಕೊ ವಿರುದ್ಧ ಗೆದ್ದು ಟರ್ಕಿಯ ಬಾಕ್ಸರ್ ಸೆಮಿಫೈನಲ್‌ ಹಂತ ಪ್ರವೇಶಿಸಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದಿರುವ ಲವ್ಲಿನಾ ಬಲಶಾಲಿ ಪಂಚ್‌ಗಳೊಂದಿಗೆ ಎದುರಾಳಿಯನ್ನು ಕಂಗೆಡಿಸಿದರು. ಆಕ್ರಮಣಕಾರಿ ಆಟದ ಜೊತೆಯಲ್ಲಿ ತಾಳ್ಮೆಯ ರಕ್ಷಣಾ ತಂತ್ರಗಳನ್ನು ಕೂಡ ಪ್ರಯೋಗಿಸಿದ ಅವರು ಅವಕಾಶಗಳನ್ನು ಸೃಷ್ಟಿಸಿಕೊಂಡು ಪಾಯಿಂಟ್‌ಗಳನ್ನು ಕಲೆ ಹಾಕಿದರು.

ADVERTISEMENT

ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದ್ದು 2008ರಲ್ಲಿ. ವಿಜೇಂದರ್ ಸಿಂಗ್ ಆ ವರ್ಷ ಕಿಂಚಿನ ಪದಕ ಗೆದ್ದುಕೊಂಡಿದ್ದರು. 2012ರಲ್ಲಿ ಎಂ.ಸಿ.ಮೇರಿ ಕೋಮ್ ಕಂಚಿನ ಪದಕ ಗಳಿಸಿದ್ದರು. ಆಗಸ್ಟ್ ನಾಲ್ಕರಂದು ನಡೆಯುವ ಸೆಮಿಫೈನಲ್‌ನಲ್ಲಿ ಜಯ ಸಾಧಿಸಿದರೆ ಬಾಕ್ಸಿಂಗ್‌ನಲ್ಲಿ ಭಾರತದ ಗರಿಷ್ಠ ಸಾಧನೆ ಮಾಡುವ ಅವಕಾಶ ಅವರಿಗೆ ಲಭಿಸಲಿದೆ.

ಶುಕ್ರವಾರ 60 ಕೆಜಿ ವಿಭಾಗದ ಬೌಟ್‌ನಲ್ಲಿ ಸಿಮ್ರನ್‌ಜೀತ್ ಕೌರ್ ನೀರಸ ಆಟವಾಡಿ ಥಾಯ್ಲೆಂಡ್‌ನ ಸುದಾಪರ್ನ್ ಸೀಸೊಂಡಿಗೆ 0–5ರಲ್ಲಿ ಮಣಿದರು.

ಆರಂಭದಲ್ಲಿ ಉತ್ತಮ ಆರಂಭ ಕಂಡ ಸಿಮ್ರನ್‌ಜೀತ್ ಗೆಲುವು ಸಾಧಿಸುವ ಭರವಸೆ ಮೂಡಿಸಿದ್ದರು. ಆದರೆ ನಂತರ ಎದುರಾಳಿಯ ಪ್ರತಿದಾಳಿಗೆ ಕಂಗೆಟ್ಟರು.

ಯೋಜನೆ ಇರಲಿಲ್ಲ; ಎದುರಾಳಿಗೆ ಹೆದರಲಿಲ್ಲ

ಎದುರಾಳಿ ಮಾಜಿ ವಿಶ್ವ ಚಾಂಪಿಯನ್ ಆಗಿದ್ದರೂ ತಾವು ಯಾವುದೇ ಯೋಜನೆಯೊಂದಿಗೆ ಕಣಕ್ಕೆ ಇಳಿದಿರಲಿಲ್ಲ. ನಿರಾತಂಕವಾಗಿ ಆಡಿದ್ದರಿಂದ ಸುಲಭ ಜಯ ದೊರಕಿತು ಎಂದು ಲವ್ಲಿನಾ ಹೇಳಿದರು.

‘ಆಕೆಯ ಎದುರು ಈ ಹಿಂದೆ ನಾಲ್ಕು ಬಾರಿ ಸೋತಿದ್ದೆ. ಅದಕ್ಕೆ ಪ್ರತೀಕಾರ ತೀರಿಸುವ ಆಸೆ ಮನದಲ್ಲಿತ್ತು. ಆದ್ದರಿಂದ ಭಯವೂ ಇಲ್ಲದೆ ಆಡಲು ನಿರ್ಧರಿಸಿದ್ದೆ’ ಎಂದು ಆನ್‌ಲೈನ್ ಮೂಲಕ ನಡೆದ ಸಂದರ್ಶನದಲ್ಲಿ ಅವರು ತಿಳಿಸಿದರು. ಚಿನ್ನದ ಪದಕ ಗೆದ್ದ ನಂತರ ಇನ್ನಷ್ಟು ಮಾತನಾಡೋಣ ಎಂದು ಅವರು ಮಾಧ್ಯಮದವರಿಗೆ ಭರವಸೆಯಿಂದ ಹೇಳಿದರು.

ಸೋತರೆ ಕಂಚಿನ ಪದಕ

ಸೆಮಿಫೈನಲ್ ಬೌಟ್‌ನಲ್ಲಿ ಸೋತರೂ ಲವ್ಲಿನಾಗೆ ಕಂಚಿನ ಪದಕ ಸಿಗಲಿದೆ. ಬಾಕ್ಸಿಂಗ್‌ನಲ್ಲಿ ಒಟ್ಟು ನಾಲ್ಕು ಪದಕಗಳನ್ನು ನೀಡಲಾಗುತ್ತದೆ. ಫೈನಲ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ನಿರ್ಧಾರವಾದರೆ, ಸೆಮಿಫೈನಲ್‌ನಲ್ಲಿ ಸೋತ ಇಬ್ಬರಿಗೂ ಕಂಚಿನ ಪದಕ ನೀಡಲಾಗುತ್ತದೆ.

ಬಾಕ್ಸಿಂಗ್ ಕಣಕ್ಕೆ ಬಂದ ಕಿಕ್‌ ಬಾಕ್ಸರ್‌

ಕಿಕ್‌ ಬಾಕ್ಸಿಂಗ್‌ನಲ್ಲಿ ಮಿಂಚುತ್ತಿದ್ದ ಲವ್ಲಿನಾ ಅವರನ್ನು ಬಾಕ್ಸಿಂಗ್ ಕಣಕ್ಕೆ ಕರೆದುಕೊಂಡು ಬಂದವರು ಭಾರತ ಕ್ರೀಡಾ ಪ್ರಾಧಿಕಾರದ ಕೋಚ್ ಪದಮ್ ಬೋರೊ. ಅಸ್ಸಾಂನ ಗೊಲಾಘಟ್ ಜಿಲ್ಲೆಯ ಮುಖಿಯಾ ಗ್ರಾಮದ ನಿವಾಸಿ ಲವ್ಲಿನಾ ಅವರ ಸಹೋದರಿಯರಾದ ಲಿಚಾ ಮತ್ತು ಲೀಮಾ ಅವರು ಕಿಕ್ ಬಾಕ್ಸಿಂಗ್ ಮಾಡುತ್ತಿದ್ದರು. ಪಾಲಕರಿಂದ ಅವರಿಗೆ ಉತ್ತಮ ಬೆಂಬಲವೂ ಸಿಗುತ್ತಿತ್ತು. ಸಹೋದರಿಯರ ಜೊತೆ ತಾವೂ ‘ಕಿಕ್‌’ ಮಾಡಲು ಹೋಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.