ವಿರಾಟ್ ಕೊಹ್ಲಿ ಅವರೊಂದಿಗೆ ಪ್ಯಾಡಿ ಆ್ಯಪ್ಟನ್ (ಎಡಭಾಗದಲ್ಲಿ), ಡಿ.ಗುಕೇಶ್ (ಮದ್ಯದಲ್ಲಿ), ಪ್ಯಾಡಿ ಆಪ್ಟನ್ (ಬಲಭಾಗದಲ್ಲಿ)
(ಪಿಟಿಐ ಚಿತ್ರಗಳು, ಎಕ್ಸ್ ಚಿತ್ರ)
ಬೆಂಗಳೂರು: ಇಡೀ ದೇಶದ ಕ್ರೀಡಾಭಿಮಾನಿಗಳು ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಡಿ. ಗುಕೇಶ್ ಅವರ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಸಂಭ್ರಮದ ಅಲೆಯಲ್ಲಿ ತೇಲಾಡುತ್ತಿದ್ದಾರೆ.
ಆದರೆ ಗುಕೇಶ್ ಅವರ ಯಶಸ್ಸಿನಲ್ಲಿ 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದ್ದ ಭಾರತ ತಂಡದ ಜತೆ ಕೆಲಸ ನಿರ್ವಹಿಸಿದ್ದ ಕ್ರೀಡಾ ಮನೋವಿಶ್ಲೇಷಕ ಪ್ಯಾಡಿ ಆಪ್ಟನ್ ಅವರ ಪಾತ್ರವೂ ಮಹತ್ತರವಾಗಿದೆ.
ದಕ್ಷಿಣ ಆಫ್ರಿಕಾ ಮೂಲದ ಪ್ಯಾಡಿ ಆಪ್ಟನ್ ಭಾರತ ಕ್ರಿಕೆಟ್ ತಂಡದ ಮೆಂಟಲ್ ಕಂಡಿಷನಿಂಗ್ ಪರಿಣತರಾಗಿ ಕಾರ್ಯ ನಿರ್ವಹಿಸಿದ್ದರು. ಕಳೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಯಶಸ್ಸಿನಲ್ಲೂ ಮಹತ್ವದ ಪಾತ್ರ ವಹಿಸಿದ್ದರು.
ಈಗ ಚೆಸ್‌ನಲ್ಲೂ ಮೋಡಿ ಮಾಡಿದ್ದಾರೆ. ಗುಕೇಶ್ ಅತ್ಯುತ್ತಮ ಮನೋಬಲವನ್ನು ಕಾಪಾಡಿಕೊಳ್ಳುವುದರಲ್ಲಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಸಿಂಗಪುರದಲ್ಲಿ 14 ಪಂದ್ಯಗಳವರೆಗೆ ಜಿದ್ದಾಜಿದ್ದಿನಿಂದ ಸಾಗಿದ ಫೈನಲ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸಿದ್ದ ಗುಕೇಶ್, ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
18ರ ಹರೆಯದ ಗುಕೇಶ್, ವಿಶ್ವ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ. ಹಾಗೆಯೇ ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಬಳಿಕ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಭಾರತೀಯ ಎನಿಸಿದ್ದಾರೆ.
ಹೆಸರಾಂತ ಮೆಂಟಲ್ ಕಂಡಿಷನಿಂಗ್ ಕೋಚ್ ಆಗಿರುವ ಪ್ಯಾಡಿ ಆಪ್ಟನ್, ಗುಕೇಶ್ ಅವರ ಮನೋಸ್ಥೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಗುಕೇಶ್ ಆಟದ ಬಗ್ಗೆ ಅಪಾರ ಜ್ಞಾನ, ಗ್ರಹಿಕೆ ಮತ್ತು ಮುಂದಾಲೋಚನೆಯನ್ನು ಹೊಂದಿದ್ದರು. ಸ್ವಯಂ ಅರಿವಿನ ಅದ್ಭುತ ಶಕ್ತಿಯನ್ನು ಗುಕೇಶ್ ಹೊಂದಿದ್ದಾರೆ. ಇದು ಅವರಲ್ಲಿ ಎದ್ದು ಕಾಣುವ ಗುಣಗಳು' ಎಂದು ಆಪ್ಟನ್ ಹೊಗಳಿದ್ದಾರೆ.
'ವಿಶ್ವ ಚಾಂಪಿಯನ್ ಆಗಿರುವುದರ ಪೂರ್ಣ ಶ್ರೇಯಸ್ಸು ಗುಕೇಶ್‌ಗೆ ಸಲ್ಲಬೇಕು. ಏಕೆಂದರೆ ಮೊದಲ ಪಂದ್ಯದಲ್ಲಿ ಎದುರಾದ ಸೋಲಿನ ಬಳಿಕವೂ ಏಕಾಗ್ರತೆಯನ್ನು ಕಾಪಾಡಿಕೊಂಡರು. ಆರಂಭಿಕ ಹಿನ್ನಡೆಯನ್ನು ಮೆಟ್ಟಿ ನಿಂತು ಚಾಂಪಿಯನ್ ಆದರು' ಎಂದು ಹೇಳಿದ್ದಾರೆ.
ಪಂದ್ಯಾವಳಿಯಲ್ಲಿ ಜಾಸ್ತಿ ಯೋಚಿಸದೇ ಸಹಜ ಆಟ ಆಡುವಂತೆ ಸಲಹೆ ಮಾಡಿರುವುದಾಗಿ ಆಪ್ಟನ್ ತಿಳಿಸಿದ್ದಾರೆ.
ಮೂರು ವಾರಗಳ ಕಾಲ ಮುಂದುವರಿದ ಫೈನಲ್‌ನಲ್ಲಿ ಮಾನಸಿಕ ಮನೋಬಲ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವೆನಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಆಪ್ಟನ್ 'ನಮ್ಮಲ್ಲಿ ಸ್ಪಷ್ಟ ಯೋಜನೆಯಿತ್ತು' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.