ADVERTISEMENT

ರಾಜ್ಯ ಚೆಸ್‌ನಲ್ಲಿ ಡಿಜಿಟಿ ಬಳಕೆ ಮುನ್ನೆಲೆಗೆ

ಟಾಪ್ ಬೋರ್ಡ್‌ಗಳ ಗೇಮ್‌ಗಳಲ್ಲಿ ತಪ್ಪುಗಳು ಎಸಗಿದರೆ ಪತ್ತೆ; ಪ್ರಮುಖ ಪಂದ್ಯಗಳ ನೇರ ಪ್ರಸಾರಕ್ಕೆ ಅನುಕೂಲ

ವಿಕ್ರಂ ಕಾಂತಿಕೆರೆ
Published 26 ಸೆಪ್ಟೆಂಬರ್ 2025, 23:57 IST
Last Updated 26 ಸೆಪ್ಟೆಂಬರ್ 2025, 23:57 IST
ಮಂಗಳೂರಿನಲ್ಲಿ ನಡೆಯುತ್ತಿರುವ ಆರ್‌ಸಿಸಿ ಟೂರ್ನಿಯಲ್ಲಿ ಡಿಜಿಟಲ್‌ ಬೋರ್ಡ್‌ಗಳಲ್ಲಿ ಆಡುತ್ತಿರುವ ಅಗ್ರ ಶ್ರೇಯಾಂಕಿತರು
ಮಂಗಳೂರಿನಲ್ಲಿ ನಡೆಯುತ್ತಿರುವ ಆರ್‌ಸಿಸಿ ಟೂರ್ನಿಯಲ್ಲಿ ಡಿಜಿಟಲ್‌ ಬೋರ್ಡ್‌ಗಳಲ್ಲಿ ಆಡುತ್ತಿರುವ ಅಗ್ರ ಶ್ರೇಯಾಂಕಿತರು   

ಮಂಗಳೂರು: ಗ್ರ್ಯಾಂಡ್ ಮಾಸ್ಟರ್ ಮಟ್ಟದ ಚೆಸ್‌ ಟೂರ್ನಿಗಳಲ್ಲಿ ಬಳಕೆಯಾಗುವ ಡಿಜಿಟಿ (ಡಿಜಿಟಲ್ ಗೇಮ್ ಟೆಕ್ನಾಲಜಿ) ಬೋರ್ಡ್‌ ತಂತ್ರಜ್ಞಾನ ಈಗ ರಾಜ್ಯ, ಅಂತರರಾಜ್ಯ ಟೂರ್ನಿಗಳಲ್ಲೂ ಕಂಡುಬರುತ್ತಿದೆ. ಕರ್ನಾಟಕದಲ್ಲೂ ಈಚೆಗೆ ಹೆಚ್ಚು ಪ್ರಚುರವಾಗಿದೆ. ಪ್ರಮುಖ ಪಂದ್ಯಗಳ ನೇರ ಪ್ರಸಾರ ಇದರ ಮುಖ್ಯ ಭಾಗ ಆಗಿರುವುದರಿಂದ ಜಿಲ್ಲೆಗಳಲ್ಲಿ ನಡೆಯುವ ಟೂರ್ನಿಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪುತ್ತಿವೆ.

ಡಿಜಿಟಿ 1998ರಿಂದಲೇ ಬಳಕೆಯಲ್ಲಿದೆ. ಭಾರತಕ್ಕೆ ಇದು ಕಾಲಿಟ್ಟದ್ದು 2013ರಲ್ಲಿ. ಒಂದು ದಶಕದ ನಂತರ ಕರ್ನಾಟಕದಲ್ಲೂ ಪ್ರಾಬಲ್ಯಕ್ಕೆ ಬಂತು. ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಇದಕ್ಕೆಂದೇ 10 ಬೋರ್ಡ್‌ಗಳನ್ನು ಖರೀದಿಸಿದ್ದು ಜಿಲ್ಲಾ ಮಟ್ಟದಲ್ಲಿ ನಡೆಯುವ ಟೂರ್ನಿಗಳಲ್ಲೂ ಬಳಸಲು ನೀಡುತ್ತಿದೆ. ಖಾಸಗಿ ಚೆಸ್‌ ಸಂಸ್ಥೆಗಳು ಕೂಡ ದುಬಾರಿಯಾದ ಈ ಬೋರ್ಡ್‌ಗಳನ್ನು ಇರಿಸಿಕೊಳ್ಳತೊಡಗಿವೆ.

ಮಂಗಳೂರಿನಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಆರ್‌ಸಿಸಿ ಫಿಡೆ ರೇಟೆಡ್‌ ಅಂತರರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಡಿಜಿಟಿ ಬಳಕೆಯಾಗಿತ್ತಿದ್ದು ಟಾಪ್ ಬೋರ್ಡ್‌ಗಳ ಪಂದ್ಯಗಳು ವಿಶ್ಲೇಷಣೆಯೊಂದಿಗೆ ನೇರ ಪ್ರಸಾರ ಆಗುತ್ತಿವೆ. ಟೂರ್ನಿಗಾಗಿ ರಾವ್ಸ್‌ ಚೆಸ್ ಕಾರ್ನರ್‌ 10 ಡಿಜಿಟಲ್ ಬೋರ್ಡ್‌ಗಳನ್ನು ಖರೀದಿಸಿದೆ. 

ADVERTISEMENT

ಏನು, ಯಾಕೆ ಡಿಜಿಟಿ ಬೋರ್ಡ್‌?

ಡಿಜಿಟಿ ಬೋರ್ಡ್‌ಗಳ ಬಳಕೆಯಿಂದ ಪ್ರಮುಖ ಪಂದ್ಯಗಳು ಸೇವ್ ಆಗುತ್ತವೆ. ಪ್ರಪಂಚದ ಯಾವ ಮೂಲೆಯಲ್ಲಾದರೂ ಕುಳಿತು ಪಂದ್ಯವನ್ನು ವೀಕ್ಷಿಸಬಹುದು ಮತ್ತು ವಿಶ್ಲೇಷಣೆಗಳ ಮೂಲಕ ಆಟವನ್ನು ವಿವರವಾಗಿ ತಿಳಿದುಕೊಳ್ಳಬಹುದು. 

‘ಹಿಂದೆಲ್ಲ ಮನ್ರಾಯ್ ಚೆಸ್ ಎಂಬ ತಂತ್ರಜ್ಞಾನ ಬಳಸಲಾಗುತ್ತಿತ್ತು. ಅದರಲ್ಲಿ ಆರ್ಬಿಟರ್‌ಗೆ ತುಂಬ ಕೆಲಸ ಇರುತ್ತಿತ್ತು. ಅವರೇ ಹೋಗಿ ಕಾಯಿಗಳನ್ನು ಮೂವ್ ಮಾಡಬೇಕಿತ್ತು. ಡಿಜಿಟಿಯಲ್ಲಿ ಎಲ್ಲವೂ ಆನ್‌ಲೈನ್. ಟೈಮರ್‌ನಿಂದ ಸಂಪರ್ಕ ಕಲ್ಪಿಸಿರುವ ಎಲ್ಲ ಬೋರ್ಡ್‌ಗಳನ್ನು ಕಂಪ್ಯೂಟರ್‌ಗೆ ಜೋಡಿಸಲಾಗುತ್ತದೆ. ಆರ್ಬಿಟರ್ ತನ್ನ ಮುಂದೆ ಇರುವ ಕಂಪ್ಯೂಟರ್‌ನಲ್ಲೇ ಎಲ್ಲವನ್ನೂ ನೋಡಬಹುದು. ಆಟಗಾರರು ಅಕ್ರಮವಾಗಿ ಕಾಯಿಗಳನ್ನು ಮೂವ್ ಮಾಡಿದರೆ ಆರ್ಬಿಟರ್ ಅಥವಾ ತಂತ್ರಜ್ಞರ ತಂಡ ಸರಿಪಡಿಸಬಹುದು. ಕಾಯಿನ್‌ಗಳು ಸಮರ್ಪಕವಾಗಿ ಇರಿಸದಿದ್ದರೂ ಸಿಗ್ನಲ್ ಬರುತ್ತದೆ’ ಎಂದು ಆರ್‌ಸಿಸಿ ಟೂರ್ನಿಯ ಆರ್ಬಿಟರ್ ಸಾಕ್ಷಾತ್‌ ಯು.ಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಡಿಜಿಟಿಯನ್ನು ಪ್ರಚುರಪಡಿಸುತ್ತಿದೆ. ಪ್ರಮುಖ ಟೂರ್ನಿಗಳಿಗೆ ಈ ಬೋರ್ಡ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ‘ತಂತ್ರಜ್ಞಾನವನ್ನು ಬಳಸಲು ಸೌಲಭ್ಯ ಇರುವ ಕಡೆಗಳಿಗೆ ಟೂರ್ನಿಗಳ ಸಂದರ್ಭದಲ್ಲಿ ಬೋರ್ಡ್‌ಗಳನ್ನು ಕೊಡಲಾಗುತ್ತದೆ. ಇನ್ನಷ್ಟು ಬೋರ್ಡ್‌ಗಳನ್ನು ಖರೀದಿಸಿ ಇದರ ಬಳಕೆ ಹೆಚ್ಚಾಗುವಂತೆ ಮಾಡಲಾಗುವುದು’ ಎಂದು ರಾಜ್ಯ ಸಂಸ್ಥೆಯ ಅಧ್ಯಕ್ಷ ಮಧುಕರ್ ಟಿ.ಎನ್‌ ತಿಳಿಸಿದರು. 

ಡಿಜಿಟಲ್‌ ಬೋರ್ಡ್‌ 

ಮಂಗಳೂರಿನಿಂದ...

ಮಂಗಳೂರಿನಲ್ಲಿ ನಡೆಯುತ್ತಿರುವ ಆರ್‌ಸಿಸಿ ಫಿಡೆ ರೇಟೆಡ್ ಟೂರ್ನಿಯ ಟಾಪ್‌ 10 ಬೋರ್ಡ್‌ಗಳು ಡಿಜಿಟಿ. ಈ ಬೋರ್ಡ್‌ಗಳ ಪಂದ್ಯಗಳು ಚೆಸ್ ಡಾಟ್‌ ಕಾಮ್‌ನಲ್ಲಿ ನೇರಪ್ರಸಾರ ಆಗುತ್ತಿವೆ. ವಿಮೆನ್ ಇಂಟರ್‌ನ್ಯಾಷನಲ್ ಮಾಸ್ಟರ್‌ ಇಶಾ ಶರ್ಮಾ ಮತ್ತು ರೇಟೆಡ್ ಆಟಗಾರ್ತಿ ನಿಶಾ ಪಾಟ್ಕರ್ ಪ್ರತಿ ಸುತ್ತಿನ ಪಂದ್ಯಗಳ ಕುರಿತು ವೀಕ್ಷಕ ವಿವರಣೆ ನೀಡುತ್ತಿದ್ದು ವಿಶ್ಲೇಷಣೆಯನ್ನೂ ಮಾಡುತ್ತಿದ್ದಾರೆ. 

ಡಿಜಿಟಿ ಬಳಕೆಯಾಗುವಲ್ಲಿ ಟಾಪ್‌ ಟೆನ್ ಬೋರ್ಡ್‌ಗಳು ಆನ್‌ಲೈನ್‌ ಆಗಿರುತ್ತವೆ. ಆಟಗಾರರ ನೊಟೇಷನ್ ಸಮರ್ಪಕವಾಗಿಲ್ಲದಿದ್ದರೆ ಸೇವ್ ಆದ ಗೇಮ್ ನೋಡಿ ತಿದ್ದಲು ಆರ್ಬಿಟರ್‌ಗೆ ಅವಕಾಶ ಸಿಗುತ್ತದೆ.
ಸಾಕ್ಷಾತ್ ಯು.ಕೆ ಚೆಸ್ ಆರ್ಬಿಟರ್‌
ಸಾಕ್ಷಾತ್ ಯು.ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.