ದಿವ್ಯಾ ದೇಶಮುಖ್
ಬಟುಮಿ (ಜಾರ್ಜಿಯಾ): 'ಇದು ಕೇವಲ ಆರಂಭವಷ್ಟೇ' ಎಂದು ಫಿಡೆ ಮಹಿಳಾ ಚೆಸ್ ವಿಶ್ವಕಪ್ ಗೆದ್ದಿರುವ ಭಾರತದ ಯುವ ತಾರೆ ದಿವ್ಯಾ ದೇಶಮುಖ್ ಅಭಿಪ್ರಾಯಪಟ್ಟಿದ್ದಾರೆ.
ಫೈನಲ್‌ನಲ್ಲಿ ತಮ್ಮದೇ ದೇಶದ ಅನುಭವಿ ಪಟು ಕೋನೇರು ಹಂಪಿ ಅವರನ್ನು ಟೈಬ್ರೇಕರ್‌ನಲ್ಲಿ ಸೋಲಿಸಿರುವ ದಿವ್ಯಾ, ಫಿಡೆ ಚೆಸ್ ಮಹಿಳಾ ವಿಶ್ವಕಪ್ ಕಿರೀಟ ಧರಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.
ಅದರೊಂದಿಗೆ 19ರ ಹರೆಯದ ದಿವ್ಯಾ, 'ಗ್ರ್ಯಾಂಡ್‌ಮಾಸ್ಟರ್' ಪಟ್ಟಕ್ಕೂ ಅರ್ಹರಾಗಿದ್ದಾರೆ.
'ಗೆಲುವನ್ನು ಅರಗಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಈ ಪಕ್ರಿಯೆಯಲ್ಲಿ ಗ್ರ್ಯಾಂಡ್ ಮಾಸ್ಟರ್ ಬಿರುದು ಪಡೆದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಈ ಕ್ಷಣಕ್ಕಾಗಿ ಕಾಯುತ್ತಿದ್ದೆ. ಈಗ ನಾನು ಕೂಡ ಗ್ರ್ಯಾಂಡ್ ಮಾಸ್ಟರ್ ಆಗಿದ್ದೇನೆ' ಎಂದು ಹೇಳಿದ್ದಾರೆ.
'ಈ ಕ್ಷಣದಲ್ಲಿ ಭಾವನೆಗಳನ್ನು ಹಂಚಿಕೊಳ್ಳುವುದು ಸ್ವಲ್ಪ ಕಷ್ಟಕರವಾಗಿದೆ. ಈ ಗೆಲುವು ನನ್ನ ಪಾಲಿಗೆ ಅತ್ಯಂತ ಮುಖ್ಯವೆನಿಸಿತ್ತು. ನಿಸ್ಸಂಶವಾಗಿಯೂ ಇನ್ನೂ ಸಾಕಷ್ಟು ಸಾಧಿಸಲಿಕ್ಕಿದೆ. ಈ ಹಾದಿಯಲ್ಲಿ ಇದು ಕೇವಲ ಆರಂಭವಷ್ಟೇ' ಎಂದು ಹೇಳಿದ್ದಾರೆ.
ಟೂರ್ನಿಗೆ ಮೊದಲು ದಿವ್ಯಾ ಬಳಿ ಗ್ರ್ಯಾಂಡ್‌ಮಾಸ್ಟರ್ ಪಟ್ಟ ಇರಲಿಲ್ಲ. ಆದರೆ ಫಿಡೆ ನಿಯಮಗಳ ಪ್ರಕಾರ ಟೂರ್ನಿ ಗೆದ್ದ ಆಟಗಾರ್ತಿ, ಯಾವುದೇ ಪ್ರಕ್ರಿಯೆಯ ಅಗತ್ಯವಿಲ್ಲದೇ ನೇರವಾಗಿ ಜಿಎಂ ಬಿರುದು ಪಡೆಯುತ್ತಾರೆ.
ಮುಂದಿನ ವರ್ಷ ನಡೆಯಲಿರುವ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆಯನ್ನೂ ದಿವ್ಯಾ ಗಿಟ್ಟಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.