ADVERTISEMENT

FIDE Women's World Cup | ಕೋನೇರು ಹಂಪಿ ಮಣಿಸಿದ ದಿವ್ಯಾ ದೇಶಮುಖ್‌ ಚಾಂಪಿಯನ್

ಪಿಟಿಐ
Published 28 ಜುಲೈ 2025, 11:17 IST
Last Updated 28 ಜುಲೈ 2025, 11:17 IST
   

ಬಟುಮಿ(ಜಾರ್ಜಿಯಾ): ಭಾರತದ ಯುವ ತಾರೆ ದಿವ್ಯಾ ದೇಶಮುಖ್ ಅವರಿಗೆ ಕಪ್ಪು ಸಮುದ್ರದ ತಟದಲ್ಲಿರುವ ಈ ಸುಂದರ ನಗರದಲ್ಲಿ ಸೋಮವಾರ ಅವಳಿ ಸಂಭ್ರಮ. ಫೈನಲ್‌ನಲ್ಲಿ ಸ್ವದೇಶದ ಅನುಭವಿ ಕೋನೇರು ಹಂಪಿ ಅವರನ್ನು ಸೋಲಿಸಿ ಫಿಡೆ ಚೆಸ್‌ ಮಹಿಳಾ ವಿಶ್ವಕಪ್ ಕಿರೀಟ ಧರಿಸಿದ ಅವರು ಜೊತೆಯಲ್ಲೇ ‘ಗ್ರ್ಯಾಂಡ್‌ಮಾಸ್ಟರ್‌’ ಬಿರುದಿಗೂ ಪಾತ್ರರಾದರು.

ಈ ಪ್ರತಿಷ್ಠಿತ ಟೂರ್ನಿಯ ಫೈನಲ್‌ಗೆ ಮೊದಲ ಬಾರಿ ಭಾರತದ ಆಟಗಾರ್ತಿಯರು ತಲುಪಿದ್ದೇ ಚಾರಿತ್ರಿಕ ಸಂದರ್ಭವಾಗಿತ್ತು. 19 ವರ್ಷ ವಯಸ್ಸಿನ ದಿವ್ಯಾ ಟೈಬ್ರೇಕರ್‌ನ ಎರಡನೇ ರ್‍ಯಾಪಿಡ್‌ ಆಟದಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಹಂಪಿ ಅವರನ್ನು ಸೋಲಿಸಿ ಫೈನಲ್‌ ಪಂದ್ಯವನ್ನು 2.5–1.5 ರಿಂದ ಗೆದ್ದರು. ಟೂರ್ನಿಗೆ ಅವರ ಬಳಿ ಒಂದೂ ಗ್ರ್ಯಾಂಡ್‌ಮಾಸ್ಟರ್‌ ನಾರ್ಮ್ ಇರಲಿಲ್ಲ. ಫಿಡೆ ನಿಯಮಗಳ ಪ್ರಕಾರ ಟೂರ್ನಿ ಗೆದ್ದ ಆಟಗಾರ್ತಿ, ಯಾವುದೇ ಪ್ರಕ್ರಿಯೆಯ ಅಗತ್ಯವಿಲ್ಲದೇ ನೇರವಾಗಿ ಜಿಎಂ ಬಿರುದು ಪಡೆಯುತ್ತಾರೆ.

ಉತ್ತಮ ಲಯದಲ್ಲಿದ್ದ 19 ವರ್ಷ ವಯಸ್ಸಿನ ದಿವ್ಯಾ, ಇಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ವಿಶ್ವಕಪ್‌ ಗೆದ್ದ ಮೊದಲ ಭಾರತೀಯ ಆಟಗಾರ್ತಿಯಾದರು. ಟ್ರೋಫಿಯ ಜೊತೆಗೆ ₹43.30 ಲಕ್ಷ ನಗದು ಬಹುಮಾನ ಅವರ ಪಾಲಾಯಿತು. ಅವರ ಈ ದೊಡ್ಡ ಮಟ್ಟದ ಯಶಸ್ಸು ಭಾರತದ ಚೆಸ್‌ಗೆ ಬಲ ತುಂಬಲಿದೆ.

ADVERTISEMENT

ದಿವ್ಯಾ ಈ ಟೂರ್ನಿಯಲ್ಲಿ 15ನೇ ಶ್ರೇಯಾಂಕ ಪಡೆದಿದ್ದರು. ಆದರೆ ಶಾಂತಚಿತ್ತ ಮತ್ತು ಏಕಾಗ್ರತೆಯಿಂದ ಆಡಿ ತಮಗಿಂತ ಮೇಲಿನ ರ್‍ಯಾಂಕಿನ ಆಟಗಾರ್ತಿಯರನ್ನು ಮಣಿಸುತ್ತ ಹೋದರು.

ಫೈನಲ್‌ನ ಮೊದಲ ಎರಡು ಕ್ಲಾಸಿಕಲ್‌ ಆಟಗಳು (ಶನಿವಾರ ಮತ್ತು ಭಾನುವಾರ) ಡ್ರಾ ಆಗಿದ್ದವು. ಹೀಗಾಗಿ ವಿಜೇತರ ನಿರ್ಧಾರಕ್ಕೆ ಟೈಬ್ರೇಕ್‌ ಪಂದ್ಯಗಳನ್ನು ಆಡಿಸಲಾಯಿತು. 

ಸೋಮವಾರ ನಡೆದ ಎರಡೂ ರ‍್ಯಾಪಿಡ್‌ ಆಟಗಳು ಹೋರಾಟದಿಂದ ಕೂಡಿದ್ದವು. ದಿವ್ಯಾ ಮತ್ತು ಹಂಪಿ ತಮ್ಮ ರೇಟಿಂಗ್‌ ಸಾಮರ್ಥ್ಯಕ್ಕಿಂತ ಮೇಲಿನ ಮಟ್ಟದಲ್ಲಿ ಆಡಿದರು. ಮೊದಲ ಪಂದ್ಯದಲ್ಲಿ ಬಿಳಿ ಕಾಯಿಗಳಲ್ಲಿ ಆಡಿದ ದಿವ್ಯಾಗೆ ಅಲ್ಪ ಮೇಲುಗೈ ಇತ್ತು. ಹಂಪಿ ಅವರು ರೂಕ್‌ ಮತ್ತು ಬಿಷಪ್‌ಗಾಗಿ ತಮ್ಮ ಕ್ವೀನ್‌ ಕೊಟ್ಟರು. ಅವರು ಭದ್ರ ಕೋಟೆ ಕಟ್ಟಿದ್ದರಿಂದ ಪಂದ್ಯ ಡ್ರಾ ಆಯಿತು.

ಎರಡನೇ ಆಟದಲ್ಲಿ ಹಂಪಿ ಅವರು ಆರಂಭಿಕ ನಡೆಗಳ ನಂತರ ಒತ್ತಡಕ್ಕೆ ಸಿಲುಕಿದರು. ಒಂದು ಹಂತದಲ್ಲಿ ಅವರ  ಬಳಿ ಎಂಟು ನಿಮಿಷಗಳಿದ್ದರೆ, ದಿವ್ಯಾ ಬಳಿ 16 ನಿಮಿಷಗಳಿದ್ದವು. ಆದರೆ ಕೊನೆಯ ಹಂತದಲ್ಲಿ ಮತ್ತೆ ಒತ್ತಡದಲ್ಲಿ ಹಂಪಿ ತಪ್ಪು ಮಾಡಿದರು. ಇದರಿಂದ ದಿವ್ಯಾ ಅವರಿಗೆ ತಮ್ಮ ಕಾಲಾಳನ್ನು ಎದುರಾಳಿಯ ಕೊನೆಯ ಫೈಲ್‌ನತ್ತ ಮುನ್ನಡೆಸಲು ದಾರಿಯಾಯಿತು. ಪಂದ್ಯ ತ್ಯಜಿಸಿ 38 ವರ್ಷ ವಯಸ್ಸಿನ ಹಂಪಿ, ಎದುರಾಳಿಗೆ ಹಸ್ತಲಾಘವ ನೀಡಿದರು. ಈ ವೇಳೆ ದಿವ್ಯಾ ಅವರು ಭಾವೋದ್ವೇಗ ತಡೆಯಲಾಗದೇ ಕಣ್ಣೀರಾದರು.

‘ಈ (ಗೆಲುವಿನ) ಬಗ್ಗೆ ವಿವರಣೆಗೆ ಸಮಯ ಬೇಕು. ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ನನಗೆ ಈ ರೀತಿ ಒದಗಬೇಕೆಂಬುದು ವಿಧಿಲಿಖಿತವಾಗಿತ್ತು. ಏಕೆಂದರೆ ಈ ಟೂರ್ನಿಗೆ ಮೊದಲು ನನ್ನ ಬಳಿ ಒಂದೂ ನಾರ್ಮ್ ಇರಲಿಲ್ಲ. ಈಗ ನಾನು ಗ್ರ್ಯಾಂಡ್‌ಮಾಸ್ಟರ್‌’ ಎಂದು ವೈದ್ಯ ದಂಪತಿಯ ಮಗಳಾದ ದಿವ್ಯಾ ತಕ್ಷಣದ ಪ್ರತಿಕ್ರಿಯೆ ನೀಡಿದರು.

ಗಮನಾರ್ಹ ಎಂದರೆ, ಇಂದಿನ ಫೈನಲ್‌ ಟೈಬ್ರೇಕ್‌ ಪಂದ್ಯಗಳಿಗೆ ಮೊದಲು, ಫೇವರಿಟ್‌ ಆಟಗಾರ್ತಿಯ ಆಯ್ಕೆಗೆ ಫಿಡೆ ನಡೆಸಿದ ಸಮೀಕ್ಷೆಯಲ್ಲಿ ದಿವ್ಯಾ ಪರ ಶೇ 59 ಮತ್ತು ಹಂಪಿ ಪರ ಶೇ 41 ಮತಗಳು ಬಂದಿದ್ದವು.

ಇದು ಭಾರತೀಯ ಚೆಸ್‌ಗೆ ದೊಡ್ಡ ಸಂಭ್ರಮ’ ಎಂದು ಐದು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಬಣ್ಣಿಸಿದರು.

ಭಾರತದ ಇಬ್ಬರು ಆಟಗಾರ್ತಿಯರೂ– ದಿವ್ಯಾ ಮತ್ತು ಹಂಪಿ– ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ. ಮೂರನೇ ಸ್ಥಾನ ಪಡೆದ ಚೀನಾದ ಝೊಂಗ್‌ಯಿ ತಾನ್ ಸಹ ಅರ್ಹತೆ ಗಳಿಸಿದ್ದಾರೆ.

ವಿಶ್ವಕಪ್‌ ಗೆದ್ದ ದಿವ್ಯಾ ದೇಶಮುಖ್‌ ಅವರಿಗೆ ಅಭಿನಂದನೆಗಳು. ಗ್ರ್ಯಾಂಡ್‌ಮಾಸ್ಟರ್‌ ಪಟ್ಟದ ಜೊತೆಗೆ ಕ್ಯಾಂಡಿಡೇಟ್ಸ್‌ನಲ್ಲಿ ಸ್ಥಾನ. ಉತ್ತಮ ಹಣಾಹಣಿ. ಹಂಪಿ ಸಹ ಚೆನ್ನಾಗಿಯೇ ಆಡಿದರು ಮತ್ತು ಹೋರಾಟದ ಮನೋಭಾವ ಪ್ರದರ್ಶಿಸಿದರು. ಅವರೂ ಗ್ರೇಟ್‌ ಚಾಂಪಿಯನ್‌! ಭಾರತದ ಚೆಸ್‌ಗೆ ಇದು ದೊಡ್ಡ ಸಂಭ್ರಮದ ಕ್ಷಣ. ವಿಶೇಷವಾಗಿ ಮಹಿಳಾ ಚೆಸ್‌ಗೆ’ ಎಂದು ಆನಂದ್‌ ‘ಎಕ್ಸ್‌’ ನಲ್ಲಿ ಅಭಿನಂದಿಸಿದ್ದಾರೆ.

88ನೇ ಜಿಎಂ: ಅವರು ದೇಶದ 88ನೇ ಗ್ರ್ಯಾಂಡ್‌ಮಾಸ್ಟರ್‌ ಎನಿಸಿದರು. ಈ ಪಟ್ಟ ಪಡೆದ ಭಾರತದ ನಾಲ್ಕನೇ ಆಟಗಾರ್ತಿ. ಅವರ ಫೈನಲ್ ಎದುರಾಳಿಯಾಗಿದ್ದ ಹಂಪಿ (2002), ದ್ರೋಣವಲ್ಲಿ ಹಾರಿಕ (2011) ಮತ್ತು ವೈಶಾಲಿ ರಮೇಶಬಾಬು (2023) ಈ ಮೊದಲು ಗ್ರ್ಯಾಂಡ್‌ಮಾಸ್ಟರ್‌ಗಳಾಗಿದ್ದ ಆಟಗಾರ್ತಿಯರು. ಅಂದರೆ ಹಂಪಿ ಜಿಎಂ ಆದಾಗ ದಿವ್ಯಾ ಇನ್ನೂ ಜನಿಸಿರಲಿಲ್ಲ.

ದಿವ್ಯಾ ಆಟ ಧೋನಿ ರೀತಿ: ಶ್ರೀನಾಥ್‌

ನವದೆಹಲಿ (ಪಿಟಿಐ): ‘ದಿವ್ಯಾ ಅವರ ಸಾಮರ್ಥ್ಯ ಎಂದರೆ ಮಹತ್ವದ ಸಂದರ್ಭ ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಆಟದ ಮಟ್ಟ ಎತ್ತರಿಸುವುದು. ಅದು ಮಹೇಂದ್ರ ಸಿಂಗ್ ಧೋನಿ ಅವರು ಕೊನೆಯ ಓವರುಗಳಲ್ಲಿ ಪಂದ್ಯ ಗೆಲ್ಲಿಸುವ ರೀತಿ...’

– ಹೀಗೆಂದು ಬಣ್ಣಿಸಿದವರು ಅವರ ಆರಂಭದ ಕೋಚ್‌ ಶ್ರೀನಾಥ್‌ ನಾರಾಯಣನ್‌. ದಿವ್ಯಾ ದೇಶಮುಖ್ ಅವರ ಸಂಯಮ, ಶಾಂತಚಿತ್ತದ ಆಟವನ್ನು ಅವರು ಕ್ರಿಕೆಟ್ ದಿಗ್ಗಜ ಎಂ.ಎಸ್‌.ಧೋನಿ ಅವರಿಗೆ ಹೋಲಿಸಿದರು. ‘ದಿವ್ಯಾ ಅವರಲ್ಲೂ ಅಂಥ ಆಟವಿದೆ. ಮಹತ್ವದ ಪಂದ್ಯಗಳ ಕೊನೆಯ ಸುತ್ತಿನಲ್ಲಿ ಅಥವಾ ನಿರ್ಣಾಯಕ ಸಂದರ್ಭಗಳಲ್ಲಿ, ಒತ್ತಡದ ಸನ್ನಿವೇಶದಲ್ಲಿ ಅವರು ಚೆನ್ನಾಗಿ ಆಡುತ್ತಾರೆ’ ಎಂದು ತುಲನೆ ಮಾಡಿದರು.

‘ಅಕೆ ಮೊದಲು ಆಕ್ರಮಣಕಾರಿ ಶೈಲಿಯ ಆಟವಾಡುತ್ತಿದ್ದಳು. ಆದರೆ ಕಾಲಕಳೆದಂತೆ ಆಲ್‌ರೌಂಡ್‌ ಆಟಕ್ಕೆ ಒತ್ತುನೀಡಿದರು. ಅಕೆ ಮೂರೂ ಮಾದರಿಯಲ್ಲಿ (ಕ್ಲಾಸಿಕಲ್‌, ರ‍್ಯಾಪಿಡ್‌, ಬ್ಲಿಟ್ಝ್‌) ಉತ್ತಮ ಆಟಗಾರ್ತಿ’ ಎಂದು ಚೆನ್ನೈನಿಂದ ಅವರು ಪಿಟಿಐಗೆ ತಿಳಿಸಿದರು.

ಶ್ರೀನಾಥ್‌ ಅವರು 2020ರವರೆಗೆ ನಾಗ್ಪುರದ ಆಟಗಾರ್ತಿಗೆ ಕೋಚ್‌ ಆಗಿದ್ದರು.

ದಿವ್ಯಾ ದೇಶಮುಖ್‌ ಸಾಧನೆಯ ಹಾದಿ

ಜನನ: 2005 ಡಿಸೆಂಬರ್‌ 9

ಊರು: ನಾಗ್ಪುರ, ಮಹಾರಾಷ್ಟ್ರ

ತಂದೆ: ಡಾ.ಜಿತೇಂದ್ರ ದೇಶಮುಖ್, ತಾಯಿ:ಡಾ.ನಮ್ರತಾ ದೇಶಮುಖ್ (ಇಬ್ಬರೂ ವೈದ್ಯರು)

2012: ರಾಷ್ಟ್ರೀಯ 7 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ

2014: ವಿಶ್ವ 10 ವರ್ಷದೊಳಗಿವರ ಚಾಂಪಿಯನ್ (ಡರ್ಬನ್‌)

2017: ವಿಶ್ವ 12 ವರ್ಷದೊಳಗಿನವರ ಚಾಂಪಿಯನ್ (ಬ್ರೆಜಿಲ್‌)

2021: ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ (ಡಬ್ಲ್ಯುಜಿಎಂ)

2020: ಆನ್‌ಲೈನ್ ಒಲಿಂಪಿಯಾಡ್‌ನಲ್ಲಿ ಚಿನ್ನ ಗೆದ್ದ ಮಹಿಳಾ ತಂಡದಲ್ಲಿದ್ದ ಆಟಗಾರ್ತಿ

2022: ಚೆಸ್‌ ಒಲಿಂಪಿಯಾಡ್‌ನಲ್ಲಿ ವೈಯಕ್ತಿಕ ಕಂಚಿನ ಪದಕ

2023: ಇಂಟರ್‌ನ್ಯಾಷನಲ್ ಮಾಸ್ಟರ್

2023: ಏಷ್ಯನ್ ಮಹಿಳಾ ಚಾಂಪಿಯನ್‌

2024: ಮಹಿಳಾ ವಿಶ್ವ ಜೂನಿಯರ್ ಚಾಂಪಿಯನ್

2024ರ ಒಲಿಂಪಿಯಾಡ್‌ನಲ್ಲಿ ಡಬಲ್‌ ಚಿನ್ನ (ವೈಯಕ್ತಿಕ ಮತ್ತು ತಂಡ ವಿಭಾಗ)

2025: ಫಿಡೆ ಮಹಿಳಾ ವಿಶ್ವಕಪ್‌ ಚಾಂಪಿಯನ್, ಗ್ರ್ಯಾಂಡ್‌ ಮಾಸ್ಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.