ADVERTISEMENT

ಫಿಡೆ ಮಹಿಳಾ ವಿಶ್ವಕಪ್‌ ಟೂರ್ನಿ: ಎಂಟರ ಘಟ್ಟಕ್ಕೆ ಭಾರತದ ನಾಲ್ವರು

ಟೈಬ್ರೇಕರ್‌ನಲ್ಲಿ ಒಲಿದ ಗೆಲುವು

ಪಿಟಿಐ
Published 18 ಜುಲೈ 2025, 19:42 IST
Last Updated 18 ಜುಲೈ 2025, 19:42 IST
   

ಬಟುಮಿ: ಭಾರತದ ಐಎಂ ಆಟಗಾರ್ತಿ ದಿವ್ಯಾ ದೇಶಮುಖ್ ಅವರು ತಮಗಿಂತ ಉನ್ನತ ರೇಟಿಂಗ್ ಪಡೆದಿರುವ ಚೀನಾದ ಗ್ರ್ಯಾಂಡ್‌ ಮಾಸ್ಟರ್‌ ಝು ಜಿನೆರ್‌ ಅವರನ್ನು ಟೈಬ್ರೇಕರ್‌ನಲ್ಲಿ ಸೋಲಿಸಿ ಫಿಡೆ ಮಹಿಳಾ ವಿಶ್ವಕಪ್‌ನಲ್ಲಿ ಶುಕ್ರವಾರ ಕ್ವಾರ್ಟರ್‌ಫೈನಲ್ ತಲುಪಿದರು. ಗ್ರ್ಯಾಂಡ್‌ಮಾಸ್ಟರ್‌ಗಳಾದ ಕೋನೇರು ಹಂಪಿ, ಡಿ. ಹಾರಿಕಾ ಮತ್ತು ಆರ್‌.ವೈಶಾಲಿ ಅವರೂ ಎಂಟರ ಘಟ್ಟ ಪ್ರವೇಶಿಸಿದರು.

ಭಾರತದ ನಾಲ್ವರು ಆಟಗಾರ್ತಿಯರು ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಥಾನ ಪಡೆದಂತಾಗಿದೆ. ದಿವ್ಯಾ ಅವರು ಮುಂದಿನ ಸುತ್ತಿನಲ್ಲಿ ಸ್ವದೇಶದ ಹಾರಿಕಾ ಅವರನ್ನು ಎದುರಿ
ಸಲಿದ್ದಾರೆ. ಹಂಪಿ ಅವರು ಸಂಗ್‌ ಯುಕ್ಸಿನ್ (ಚೀನಾ) ವಿರುದ್ಧ; ವೈಶಾಲಿ ಅವರು ತಾನ್ ಝೊಂಗಿ (ಚೀನಾ) ವಿರುದ್ಧ ಸೆಣಸಾಡುವರು.

ದಿವ್ಯಾ 25+10 ನಿಮಿಷಗಳ ರ್‍ಯಾಪಿಡ್‌ ಟೈಬ್ರೇಕ್‌ನ ಮೊದಲ ಆಟ ಗೆದ್ದು ಮಾನಸಿಕ ಮೇಲುಗೈ ಪಡೆದರು. ನಂತರ ಎರಡನೇ ಆಟವನ್ನು ಡ್ರಾ ಮಾಡಿಕೊಂಡು 1.5–0.5 (ಒಟ್ಟಾರೆ 2.5–1.5)ರಲ್ಲಿ ಜಯ ಗಳಿಸಿದರು. ಇವರಿಬ್ಬರ ನಡುವಣ ಎರಡು ಪಂದ್ಯಗಳ ಕ್ಲಾಸಿಕಲ್‌ ಸುತ್ತಿನಲ್ಲಿ ಇಬ್ಬರೂ ಒಂದೊಂದು ಪಂದ್ಯ ಗೆದ್ದು ಸ್ಕೋರ್‌ ಸಮನಾದ ಕಾರಣ ಟೈಬ್ರೇಕ್ ಆಡಿಸಲಾಗಿತ್ತು. 

ADVERTISEMENT

ಇನ್ನೊಂದು ಪ್ರಿಕ್ವಾರ್ಟರ್‌ ಫೈನಲ್‌ನ ಟೈಬ್ರೇಕ್‌ನಲ್ಲಿ ಹಂಪಿ 1.5–0.5 ರಿಂದ ಸ್ವಿಟ್ಜರ್ಲೆಂಡ್‌ನ ಅಲೆಕ್ಸಾಂಡ್ರಾ ಕೊಸ್ಟಾನಿಯುಕ್ ಅವರನ್ನು ಸೋಲಿಸಿದರು. ಮೊದಲ ರ್‍ಯಾಪಿಡ್‌ ಆಟವನ್ನು ಹಂಪಿ ಗೆದ್ದರು. ಎರಡನೇ ಆಟ ಡ್ರಾ ಆಗಿದ್ದರಿಂದ ಹಂಪಿ ಮುನ್ನಡೆದರು. ಇವರಿಬ್ಬರ ನಡುವೆ ಕ್ಲಾಸಿಕಲ್ ಸುತ್ತಿನ ಎರಡೂ ಪಂದ್ಯಗಳು ಡ್ರಾ ಆಗಿದ್ದವು.

ಡಿ.ಹಾರಿಕಾ ಇನ್ನೊಂದು ಪಂದ್ಯದಲ್ಲಿ ರಷ್ಯಾದ ಕ್ಯಾಥರಿನಾ ಲಾಗ್ನೊ ಅವರನ್ನು 3.5–2.5 ರಿಂದ ಸೋಲಿಸಿದರು. ಇವರಿಬ್ಬರ ನಡುವೆ ಕ್ಲಾಸಿಕಲ್ ಪಂದ್ಯಗಳು ಡ್ರಾ ಆಗಿದ್ದವು.

ವೈಶಾಲಿ ಅವರು 4.5–3.5ರಿಂದ ಕಜಕಸ್ತಾನದ ಮೆರಯುರ್ಟ್ ಕಮಲಿದೆನೋವಾ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.