ವಿಯ್ಕ್ ಆನ್ ಝೀ (ನೆದರ್ಲೆಂಡ್ಸ್): ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಟಾಟಾ ಸ್ಟೀಲ್ ಚೆಸ್ ಟೂರ್ನಿಯ ಏಳನೇ ಸುತ್ತಿನಲ್ಲಿ ಸ್ವದೇಶದ ಅನುಭವಿ ಆಟಗಾರ ಪಿ.ಹರಿಕೃಷ್ಣ ಅವರನ್ನು ಸುಲಭವಾಗಿ ಸೋಲಿಸಿದರು. ಈ ಗೆಲುವಿನೊಡನೆ ಅವರು ಅಗ್ರಸ್ಥಾನದಲ್ಲಿರುವ ಆಟಗಾರರ ಜೊತೆಗೂಡಿದರು.
ಇದು ಗುಕೇಶ್ ಅವರಿಗೆ ಮೂರನೇ ಗೆಲುವಾಗಿದ್ದು, ಅವರು ಸ್ವದೇಶದ ಪ್ರಜ್ಞಾನಂದ ಮತ್ತು ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಜೊತೆ ಮೊದಲ ಸಲ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಮೂವರೂ ತಲಾ ಐದು ಪಾಯಿಂಟ್ಸ್ ಗಳಿಸಿದ್ದಾರೆ. 14 ಆಟಗಾರರ ಈ ರೌಂಡ್‌ರಾಬಿನ್ ಟೂರ್ನಿಯಲ್ಲಿ ಇನ್ನೂ ಆರು ಸುತ್ತುಗಳು ಆಡಲು ಉಳಿದಿವೆ.
ಸೋಮವಾರ ನಡೆದ ಏಳನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಪ್ರಜ್ಞಾನಂದ ಅವರು ಆತಿಥೇಯ ನೆದರ್ಲೆಂಡ್ಸ್‌ನ ಜೋರ್ಡನ್ ವಾನ್ ಫೋರೀಸ್ಟ್ ಅವರ ರಕ್ಷಣೆಯನ್ನು ಭೇದಿಸಲು ಸಾಧ್ಯವಾಗದೇ ಡ್ರಾಕ್ಕೆ ಒಪ್ಪಿಕೊಳ್ಳಬೇಕಾಯಿತು. ಅಬ್ದುಸತ್ತಾರೋವ್ ಅವರೂ ನೆದರ್ಲೆಂಡ್ಸ್‌ನ ಅನಿಶ್ ಗಿರಿ ಜೊತೆ ಡ್ರಾ ಕರಾರಿಗೆ ಸಹಿಹಾಕಿದರು. ಗಿರಿ ಅವರಿಗೆ ಇದು ಸತತ ಆರನೇ ಡ್ರಾ.
ಅರ್ಜುನ್‌ಗೆ ಮತ್ತೆ ಹಿನ್ನಡೆ:
ರ್‍ಯಾಂಕಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಸರಿದ ಅರ್ಜುನ್ ಇರಿಗೇಶಿ ಅವರು ಟೂರ್ನಿಯಲ್ಲಿ ನಾಲ್ಕನೇ ಸೋಲು ಕಂಡು ನಿರಾಶೆಗೊಳಗಾದರು. ಆತಿಥೇಯ ದೇಶದ ಮ್ಯಾಕ್ಸ್ ವಾರ್ಡರ್‌ಮ್ಯಾನ್ ಅವರು ಇರಿಗೇಶಿ ಅವರನ್ನು ಮಣಿಸಿದರು.
2801 ರ್‍ಯಾಂಕಿಂಗ್‌ನೊಡನೆ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ ಇರಿಗೇಶಿ ಈಗಾಗಲೇ 28 ರೇಟಿಂಗ್ ಪಾಯಿಂಟ್ಸ್ ಕಳೆದುಕೊಂಡಿದ್ದಾರೆ.
ಕಣದಲ್ಲಿರುವ ಭಾರತದ ಮತ್ತೊಬ್ಬ ಆಟಗಾರ ಲಿಯಾನ್ ಲ್ಯೂಕ್ ಮೆಂಡೋನ್ಸಾ ಅವರು ಹಾಲಿ ಚಾಂಪಿಯನ್ ವೀ ಯಿ ಅವರೊಡನೆ ಡ್ರಾ ಮಾಡಿಕೊಂಡು ಸಮಾಧಾನಕರ ಫಲಿತಾಂಶ ದಾಖಲಿಸಿದರು.
ವ್ಲಾದಿಮಿರ್ ಫೆಡೊಸೀವ್ ಅವರು ಮತ್ತೊಂದು ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಮಣಿಸಿದರು.
ಹರಿಕೃಷ್ಣ (3.5) ಅವರು ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನ (ಅಮೆರಿಕದ) ಜೊತೆಗೆ ಆರನೇ ಸ್ಥಾನದಲ್ಲಿದ್ದಾರೆ. ಚೀನಾದ ವೀ ಯಿ ಮತ್ತು ಮೆಂಡೊನ್ಸಾ ತಲಾ ಎರಡು ಪಾಯಿಂಟ್ ಗಳಿಸಿದ್ದಾರೆ. ಅರ್ಜುನ್ 1.5 ಪಾಯಿಂಟ್ಸ್ ಮಾತ್ರ ಗಳಿಸಲು ಸಾಧ್ಯವಾಗಿದೆ.
ಚಾಲೆಂಜರ್ಸ್ ವಿಭಾಗದಲ್ಲಿ ಆರ್.ವೈಶಾಲಿ, ಬೆಂಜಮಿನ್ ಬೊಕ್ (ನೆದರ್ಲೆಂಡ್ಸ್) ಜೊತೆ ಡ್ರಾ ಮಾಡಿಕೊಂಡರೆ, ದಿವ್ಯಾ ದೇಶಮುಖ್, ಚೀನಾದ ಮಿಯೊಯಿ ಲು ಕೈಲಿ ಪರಾಭವ ಕಾಣಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.