
ಸಾಂದರ್ಭಿಕ ಚಿತ್ರ
ನವದೆಹಲಿ: ಪುರುಷರ ಹಾಕಿ ಇಂಡಿಯಾ ಲೀಗ್‌ನಲ್ಲಿ ಎಚ್‌ಐಎಲ್ ಆಡಳಿತ ಮಂಡಳಿ ತಂಡದ ನಾಯಕರಾಗಿ ಭಾರತ ತಂಡದ ತಾರಾ ಆಟಗಾರ ಹಾಗೂ ಮಿಡ್‌ಫೀಲ್ಡರ್ ಆಗಿರುವ ಹಾರ್ದಿಕ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ಟೂರ್ನಿಯು ಜನವರಿ 3ರಿಂದ ಚೆನ್ನೈನಲ್ಲಿ ಪ್ರಾರಂಭವಾಗಲಿದೆ.
ಟೂರ್ನಿಯಲ್ಲಿ ಎಚ್‌ಐಎಲ್ ಆಡಳಿತ ಮಂಡಳಿ ತಂಡ ಜನವರಿ 5ರಂದು ಎಸ್‌ಜಿ ಪೈಪರ್ಸ್ ತಂಡದ ವಿರುದ್ಧ ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಕ್ರೀಡಾಂಗಣದಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.
ಎಚ್‌ಐಎಲ್ ಆಡಳಿತ ತಂಡದ ನಾಯಕನಾಗಿ ನೇಮಕವಾಗಿರುವ ಕುರಿತು ಪ‍್ರತಿಕ್ರಿಯೆ ನೀಡಿರುವ ಹಾರ್ದಿಕ್ ಸಿಂಗ್, ‘ಈ ಅವಕಾಶ ನೀಡಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾನು ಕೂಡ ಅದನ್ನೇ ಎದುರು ನೋಡುತ್ತಿದ್ದೆ. ನಾಯಕತ್ವದ ಜವಾಬ್ದಾರಿ ಹಾಗೂ ತಂಡವವನ್ನು ಏಳುಬೀಳುಗಳ ನಡುವೆ ಮುನ್ನಡೆಸುವುದು ರೋಮಾಂಚನಕಾರಿ ಅನುಭವವಾಗಿರಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನಮ್ಮ ತಂಡದಲ್ಲಿ ಜೂನಿಯರ್ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರರು ಹಾಗೂ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅನುಭವಿ ಆಟಗಾರರು ಇದ್ದಾರೆ. ನಾವು ಉತ್ತಮ ಋತುವನ್ನು ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ಪುರುಷರ ಹೀರೋ ಹಾಕಿ ಇಂಡಿಯಾ ಲೀಗ್ 2026 ರಲ್ಲಿ 8 ತಂಡಗಳು ಭಾಗವಹಿಸುತ್ತಿವೆ. ಇದರಲ್ಲಿ, ತಮಿಳುನಾಡು ಡ್ರಾಗನ್ಸ್, ಹೈದರಾಬಾದ್ ತೂಫಾನ್ಸ್, ಜೆಎಸ್‌ಡಬ್ಲ್ಯೂ ಸೂರ್ಮಾ ಹಾಕಿ ಕ್ಲಬ್, ಶ್ರಾಚಿ ರಾರ್ಹ್ ಬೆಂಗಾಲ್ ಟೈಗರ್ಸ್ (ಹಾಲಿ ಚಾಂಪಿಯನ್ಸ್), ವೇದಾಂತ ಕಳಿಂಗ ಲ್ಯಾನ್ಸರ್ಸ್, ರಾಂಚಿ ರಾಯಲ್ಸ್, ಎಸ್‌ಜಿ ಪೈಪರ್ಸ್ ಮತ್ತು ಎಚ್‌ಐಎಲ್ ಆಡಳಿತ ಮಂಡಳಿ ತಂಡಗಳು ಭಾಗವಹಿಸಲಿವೆ.