ADVERTISEMENT

ವಿಶ್ವ ಬ್ಲಿಟ್ಜ್‌ ಚೆಸ್‌: ಹಂಪಿಗೆ 12ನೇ ಸ್ಥಾನ

ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಎರಡೂ ವಿಭಾಗದ ಪ್ರಶಸ್ತಿ

ಪಿಟಿಐ
Published 31 ಡಿಸೆಂಬರ್ 2019, 19:30 IST
Last Updated 31 ಡಿಸೆಂಬರ್ 2019, 19:30 IST
ಕೋನೇರು ಹಂಪಿ
ಕೋನೇರು ಹಂಪಿ   

ಮಾಸ್ಕೊ: ಕೊನೆಯ ಮೂರು ಸುತ್ತಿನ ಪಂದ್ಯಗಳಲ್ಲಿ ಸೋತಿದ್ದರಿಂದ, ವಿಶ್ವ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಪ್ರಶಸ್ತಿ ಗೆಲ್ಲುವ ಕೋನೇರು ಹಂಪಿ ಅವರ ಆಸೆ ಈಡೇರಲಿಲ್ಲ. ಸೋಮವಾರ ಮುಕ್ತಾಯಗೊಂಡ ಎರಡು ದಿನಗಳ ಬ್ಲಿಟ್ಜ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ 12ನೇ ಸ್ಥಾನಕ್ಕೆ ಸರಿದರು.

ರಷ್ಯಾದ ಕ್ಯಾತರಿನಾ ಲಾಗ್ನೊ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು. ನಾರ್ವೆಯ ನಿಪುಣ ಮ್ಯಾಗ್ನಸ್‌ ಕಾರ್ಲ್‌ಸನ್‌ ಪುರುಷರ ವಿಭಾಗದಲ್ಲಿ ನಿರೀಕ್ಷೆಯಂತೆ ಚಾಂಪಿಯನ್‌ ಆದರು.

ವಿಶ್ವದ ಅಗ್ರಮಾನ್ಯ ಆಟಗಾರನಾದ ಕಾರ್ಲ್‌ಸನ್‌ ಎರಡು ದಿನಗಳ ಹಿಂದೆ ರ‍್ಯಾಪಿಡ್‌ ವಿಭಾಗದಲ್ಲೂ ವಿಜೇತರಾಗಿದ್ದು, ‘ಡಬಲ್‌’ ಸಾಧಿಸಿದರು. 2014ರಲ್ಲೂ ಅವರು ಇಂಥದ್ದೇ ಸಾಧನೆ ಮಾಡಿದ್ದರು. ಆ ಮೂಲಕ ಅವರು ಕ್ಲಾಸಿಕಲ್‌, ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಮೂರೂ ವಿಭಾಗಗಳಲ್ಲಿ ವಿಶ್ವದ ಅಗ್ರಗಣ್ಯರೆನಿಸಿದರು.

ADVERTISEMENT

ಹಂಪಿ, ಶನಿವಾರ ಚೀನಾದ ಲೀ ಟಿಂಗ್ಜಿ ಅವರ ವಿರುದ್ಧ ಟೈಬ್ರೇಕರ್‌ನಲ್ಲಿ ಜಯಗಳಿಸಿ ಶನಿವಾರ ರ್‍ಯಾಪಿಡ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಭಾನುವಾರ ಬ್ಲಿಟ್ಜ್‌ ವಿಭಾಗದಲ್ಲಿ 9ನೇ ಸುತ್ತಿನ ಪಂದ್ಯಗಳ ನಂತರ ಏಳು ಪಾಯಿಂಟ್‌ ಸಂಗ್ರಹಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದರು. ಆದರೆ ಸೋಮವಾರ ಅದೇ ಲಯ ಮುಂದುವರಿಸಲು ವಿಫಲರಾಗಿ 17 ಸುತ್ತುಗಳಿಂದ ಒಟ್ಟು 10.5 ಅಂಕಗಳನ್ನು ಸಂಗ್ರಹಿಸಲಷ್ಟೇ ಶಕ್ತರಾದರು.

ಎರಡನೇ ದಿನ ಎರಡು ಗೆಲುವಿನೊಡನೆ ಆಭಿಯಾನ ಮುಂದುವರಿಸಿದ ಕೋನೇರು ಹಂಪಿ, ನಂತರ ಎರಡು ‘ಡ್ರಾ’ಗಳ ಮೂಲಕ 13ನೇ ಸುತ್ತಿನ ನಂತರ ಲಾಗ್ನೊ ಜೊತೆ ಮುನ್ನಡೆ ಹಂಚಿಕೊಂಡಿದ್ದರು. ಇಬ್ಬರೂ ತಲಾ 10 ಪಾಯಿಂಟ್ಸ್‌ ಗಳಿಸಿದ್ದರು.

ಆದರೆ ನಿರ್ಣಾಯಕ 14ನೇ ಸುತ್ತಿನಲ್ಲಿ ಹಂಪಿ, ರಷ್ಯಾದ ಅಲಿಸಾ ಗಲ್ಲಿಯಾಮೋವಾ ಅವರ ಸಂಗಡ ‘ಡ್ರಾ’ ಮಾಡಿಕೊಂಡರು. ಲಾಗ್ನೊ ಈ ಸುತ್ತಿನಲ್ಲಿ ಜಯಗಳಿಸಿದರಲ್ಲದೇ, ಮುಂದಿನ ಸುತ್ತಿನಲ್ಲೂ ಗೆದ್ದು ಪ್ರಶಸ್ತಿಯನ್ನು ಖಚಿತಪಡಿಸಿಕೊಂಡರು. ಭಾರತದ ಆಟಗಾರ್ತಿ ಕೊನೆಯ ಮೂರೂ ಸುತ್ತುಗಳಲ್ಲಿ ಒಂದೂ ಪಾಯಿಂಟ್‌ ಗಳಿಸಲಾಗದೇ ಹಿನ್ನಡೆ ಅನುಭವಿಸಿದರು.

ಭಾರತದ ಇನ್ನೋರ್ವ ಆಟಗಾರ್ತಿ ದ್ರೋನಾವಳ್ಳಿ ಹರಿಕಾ 25 ಸ್ಥಾನ ಪಡೆದರು.

ಮೊದಲ ದಿನದ ನಂತರ ಲಾಗ್ನೊ ಮೊದಲ ಸ್ಥಾನದಲ್ಲಿದ್ದರು. ಎರಡನೇ ದಿನವೂ ಉತ್ತಮ ಸಾಧನೆ ತೋರಿದರು. 17 ಸುತ್ತುಗಳಿಂದ ಅವರು 13 ಅಂಕಗಳನ್ನು ಸಂಗ್ರಹಿಸಿ ಪ್ರಶಸ್ತಿ ಉಳಿಸಿಕೊಂಡರು. ಉ್ರಕೇನ್‌ನ ಅನ್ನಾ ಮುಝಿಚುಕ್‌ (12.5 ಅಂಕ) ಎರಡನೇ, ಚೀನಾದ ಟಾನ್‌ ಝೊಂಗಿ (12) ಅಂಕ ಮೂರನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.