ADVERTISEMENT

ಮೋದಿ ಕನಸಿನಂತೆ ಭಾರತವು ಟಾಪ್ 10 ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಬೇಕು: ಮಾಂಡವೀಯ

ಪಿಟಿಐ
Published 25 ಆಗಸ್ಟ್ 2025, 2:40 IST
Last Updated 25 ಆಗಸ್ಟ್ 2025, 2:40 IST
<div class="paragraphs"><p>ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ&nbsp;ಮಾನಸುಖ್ ಮಾಂಡವೀಯ</p></div>

ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಮಾನಸುಖ್ ಮಾಂಡವೀಯ

   

ಕೃಪೆ: ಪಿಟಿಐ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಭಾರತವು ಒಲಿಂಪಿಕ್ಸ್‌ ಆಯೋಜನೆಗೆ ಸಜ್ಜಾಗಬೇಕು. ಹಾಗೆಯೇ, ವಿಶ್ವದ ಅಗ್ರ ಹತ್ತು ಕ್ರೀಡಾ ರಾಷ್ಟ್ರಗಳಲ್ಲಿ ಒಂದು ಎನಿಸಬೇಕು ಎಂದು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಮಾನಸುಖ್ ಮಾಂಡವೀಯ ಭಾನುವಾರ ಹೇಳಿದ್ದಾರೆ.

ADVERTISEMENT

2025ರ ಕಾಮನ್‌ವೆಲ್ತ್‌ ವೆಯ್ಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದ್ದಾರೆ.

ಈ ಕೂಟದಲ್ಲಿ ಭಾರತದ 44 ಮಂದಿ ಸೇರಿದಂತೆ 28 ದೇಶಗಳ ಒಟ್ಟು 291 ಅಥ್ಲೀಟ್‌ಗಳು ಭಾಗವಹಿಸಿದ್ದಾರೆ.

ಅಹಮದಾಬಾದ್‌ನ ನಾರಾಣಪುರ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ವೀರ ಸಾವರ್ಕರ್‌ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಸ್ಪರ್ಧೆಯು, ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುವ 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅರ್ಹತಾ ಕೂಟವೂ ಆಗಿದೆ.

2047ರ ಹೊತ್ತಿಗೆ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿದೆ. ಅಷ್ಟೊತ್ತಿಗೆ ಬೆಳವಣಿಗೆ ಹೊಂದಿದ ರಾಷ್ಟ್ರವಾಗಬೇಕು. ವಿಶ್ವದ ಅಗ್ರ ಕ್ರೀಡಾ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಐದರಲ್ಲಿ ಸ್ಥಾನ ಪಡೆಯಬೇಕು ಎಂದಿರುವ ಮಾಂಡವೀಯ, ಅದಕ್ಕಾಗಿ ಕ್ರಿಯಾ ಯೋಜನೆ ತಯಾರಾಗಿದೆ ಎಂದು ತಿಳಿಸಿದ್ದಾರೆ.

'ಕ್ರೀಡೆ ನಮ್ಮ ಪರಂಪರೆಯಾಗಿದೆ. ದೇಶದ 140 ಕೋಟಿ ಜನರಲ್ಲಿ ಶೇ 65ರಷ್ಟು ಮಂದಿ 35 ವರ್ಷಕ್ಕಿಂತ ಕೆಳಗಿನವರು. ಜನಸಂಖ್ಯಾ ಸಂಪತ್ತೇ ನಮ್ಮ ಬಂಡವಾಳ. ಇದನ್ನು ಬಳಸಿಕೊಂಡು, ಮುಂದಿನ ಹತ್ತು ವರ್ಷಗಳಲ್ಲಿ ವಿಶ್ವದ ಅಗ್ರ 10 ಕ್ರೀಡಾ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಬೇಕು ಎಂಬ ಗುರಿಯನ್ನು ಪ್ರಧಾನಿ ಮೋದಿ ಅವರು ಹಾಕಿಕೊಂಡಿದ್ದಾರೆ. ಅದೇರೀತಿ, ಮುಂದಿನ ದಶಕದಲ್ಲಿ ಒಲಿಂಪಿಕ್ಸ್‌ ಆಯೋಜಿಸುವ ದಿಕ್ಕಿನಲ್ಲಿ ಸಾಗಬೇಕಿದೆ' ಎಂದು ಕರೆ ನೀಡಿದ್ದಾರೆ.

ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ನಂತರ, ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಲು ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದೂ ಮಾಂಡವೀಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.