ADVERTISEMENT

ವಿಶ್ವ ರ‍್ಯಾಪಿಡ್ ಚೆಸ್: ಕೊನೆರು ಹಂಪಿಗೆ ರ‍್ಯಾಪಿಡ್ ಚಿನ್ನ

ಮ್ಯಾಗ್ನಸ್ ಕಾರ್ಲ್‌ಸನ್ ಜಯಭೇರಿ

ಪಿಟಿಐ
Published 30 ಡಿಸೆಂಬರ್ 2019, 3:01 IST
Last Updated 30 ಡಿಸೆಂಬರ್ 2019, 3:01 IST
ಪ್ರಶಸ್ತಿ ಗೆದ್ದ ಸಂತಸದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ   – ಅಖಿಲ ಭಾರತ ಚೆಸ್ ಫೆಡರೇಷನ್ ಟ್ವಿಟರ್‌ ಚಿತ್ರ
ಪ್ರಶಸ್ತಿ ಗೆದ್ದ ಸಂತಸದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ   – ಅಖಿಲ ಭಾರತ ಚೆಸ್ ಫೆಡರೇಷನ್ ಟ್ವಿಟರ್‌ ಚಿತ್ರ   

ಮಾಸ್ಕೊ: ಭಾರತದ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ವಿಶ್ವ ಮಹಿಳಾ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್ ಪ್ರಶಸ್ತಿ ಜಯಿಸಿದರು.

ಶನಿವಾರ ಇಲ್ಲಿ ಮುಕ್ತಾಯವಾದ ಟೂರ್ನಿಯ ಪ್ಲೇ ಆಫ್‌ನಲ್ಲಿ ಚೀನಾದ ಲೀ ಟಿಂಗ್ಜಿ ವಿರುದ್ಧ ಮೇಲುಗೈ ಸಾಧಿಸಿದ ಹಂಪಿ ಅಗ್ರಸ್ಥಾನಕ್ಕೇರಿದರು. ಚೀನಾ ಆಟಗಾರ್ತಿ ಲೀ ಬೆಳ್ಳಿ ಮತ್ತು ಟರ್ಕಿಯ ಏಕತ್ರೀನಾ ಅಟಾಲಿಕಾ ಕಂಚಿನ ಪದಕ ಪಡೆದರು.

12 ಸುತ್ತುಗಳ ಪೈಕಿ 9 ಪಾಯಿಂಟ್ಸ್‌ ಗಳಿಸಿದ್ದ ಹಂಪಿ, ಲೀ ಮತ್ತು ಅಟಾಲಿಕಾ ಅವರು ಮೊದಲ ಮೂರು ಸ್ಥಾನದಲ್ಲಿದ್ದರು. ಇಎಲ್‌ಒ ಪಾಯಿಂಟ್ಸ್‌ ಆಧಾರದಲ್ಲಿ ಹಂಪಿ ಮತ್ತು ಲೀ ಅವರು ಫೈನಲ್‌ ಪ್ಲೇ ಆಫ್‌ನಲ್ಲಿ ಪೈಪೋಟಿ ನಡೆಸಬೇಕಾಯಿತು. ಇದರಲ್ಲಿ ಕಪ್ಪುಕಾಯಿಗಳೊಂದಿಗೆ ಆಡಿದ ಕೊನೆರು ಹಂಪಿ ಮೊದಲ ಸುತ್ತಿನಲ್ಲಿ ಸೋತರು. ಎರಡನೇ ಸುತ್ತಿನಲ್ಲಿ ತಿರುಗೇಟು ನೀಡಿದರು. ಇದರೊಂದಿಗೆ ವಿಶ್ವ ಚಾಂಪಿಯನ್‌ ಆಗುವ ತಮ್ಮ ಹಲವು ವರ್ಷಗಳ ಕನಸನ್ನು ನನಸು ಮಾಡಿಕೊಂಡರು.

ADVERTISEMENT

‘ಚಾಂಪಿಯನ್‌ಷಿಪ್‌ನ ಮೂರನೇ ದಿನದಂದು ನಾನು ಮೊದಲ ಗೇಮ್ ಆಡಲು ಆರಂಭಿಸಿದಾಗ ಅಗ್ರ ಮೂರರಲ್ಲಿ ಒಂದು ಸ್ಥಾನ ಪಡೆಯುವ ನಿರೀಕ್ಷೆ ಮಾತ್ರ ಇತ್ತು. ಆದರೆ, ಟೈ ಬ್ರೇಕ್‌ ಆಡುವ ಅರ್ಹತೆ ಗಿಟ್ಟಿಸುತ್ತೇನೆ ಎಂದುಕೊಂಡಿರಲಿಲ್ಲ. ಮೊದಲ ಸುತ್ತಲ್ಲಿ ಸೋತೆ, ಆದರೆ ಎರಡನೇಯದರಲ್ಲಿ ಗೆಲುವಿನ ಹಾದಿಗೆ ಮರಳಿದೆ. ಇದೊಂದು ತರಹ ಅದೃಷ್ಟದ ಆಟ. ಕೊನೆಯ ಸುತ್ತಿನಲ್ಲಿಯೂ ಹಾದಿ ಸುಲಭವಾಯಿತು. ಪ್ರಶಸ್ತಿ ಕನಸು ಕೈಗೂಡಿತು’ ಎಂದು ಕೊನೆರು ಫಿಡೆ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

2016ರಲ್ಲಿ ಅವರು ತಾಯಿಯಾದ ನಂತರ 2018ರವರೆಗೆ ಚೆಸ್‌ ಟೂರ್ನಿಗಳಲ್ಲಿ ಆಡಿರಲಿಲ್ಲ. ಕಳೆದೊಂದು ವರ್ಷದಿಂದ ಅವರು ಅಭ್ಯಾಸ ಆರಂಭಿಸಿದ್ದರು.

ಈ ಟೂರ್ನಿಯ ಆರಂಭದ ಐದು ಸುತ್ತುಗಳಲ್ಲಿ ಅವರು 4.5 ಪಾಯಿಂಟ್ಸ್ ಗಳಿಸಿ ಮುಂಚೂಣಿಯಲ್ಲಿದ್ದರು. ನಂತರದ ಸುತ್ತಿನಲ್ಲಿ ರಷ್ಯಾದ ಐರಿನಾ ಬಲ್ಮಗಾ ವಿರುದ್ಧ ಸೋತರು. ಇದರಿಂದ ಅವರಿಗೆ ಕೊಂಚ ಹಿನ್ನಡೆಯಾಯಿತು. ನಂತರದ ಪಂದ್ಯಗಳಲ್ಲಿ ಸುಧಾರಿಸಿಕೊಂಡರು. ಅವರು ಕೊನೆಯ ಎರಡು ಸುತ್ತುಗಳಲ್ಲಿ ಭರ್ಜರಿ ಜಯ ಸಾಧಿಸಿ ಪ್ಲೇ ಆಫ್‌ಗೆ ಅವಕಾಶ ಗಳಿಸಿದರು.

ಮುಕ್ತ ರ‍್ಯಾಪಿಡ್ ಚೆಸ್ ವಿಭಾಗದಲ್ಲಿ 2017ರಲ್ಲಿ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಜಯಿಸಿದ್ದರು. ಅವರ ನಂತರ ಈ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ ಎರಡನೇ ಚೆಸ್ ಪಟು ಎಂಬ ಹೆಗ್ಗಳಿಕೆಗೆ 32 ವರ್ಷದ ಹಂಪಿ ಪಾತ್ರರಾಗಿದ್ದಾರೆ.

ಮ್ಹಾಗ್ನಸ್ ಕಾರ್ಲ್‌ಸನ್ ಜಯಭೇರಿ
ನಾರ್ವೆಯ ಗ್ರ್ಯಾಂಡ್‌ ಮಾಸ್ಟರ್ ಮ್ಯಾಗ್ನಸ್ ಕಾರ್ಲಸನ್ ಅವರು ಪುರುಷರ ರ‍್ಯಾಪಿಡ್‌ ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು.

15 ಸುತ್ತುಗಳಲ್ಲಿ 11.5 ಅಂಕಗಳನ್ನು ಗಳಿಸಿದ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಫಿಡೆ ಧ್ವಜದಡಿಯಲ್ಲಿ ಇರಾನ್‌ನ ಫಿರೌಜಾ ಅಲಿರೇಜಾ ಬೆಳ್ಳಿ ಪದಕ ಪಡೆದರು. ಹಿಕಾರು ನಕಾಮುರಾ ಅವರು ಕಂಚು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.