ADVERTISEMENT

ಭಾರತ ಮಹಿಳಾ ಹಾಕಿ ತಂಡದಲ್ಲಿ ಕೋವಿಡ್: ಕೊರಿಯಾ ಎದುರಿನ ಪಂದ್ಯವೂ ರದ್ದು

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ

ಪಿಟಿಐ
Published 8 ಡಿಸೆಂಬರ್ 2021, 13:49 IST
Last Updated 8 ಡಿಸೆಂಬರ್ 2021, 13:49 IST
ಭಾರತ ಮಹಿಳಾ ಹಾಕಿ ತಂಡ –ಸಾಂದರ್ಭಿಕ ಚಿತ್ರ
ಭಾರತ ಮಹಿಳಾ ಹಾಕಿ ತಂಡ –ಸಾಂದರ್ಭಿಕ ಚಿತ್ರ   

ಡಾಂಘೆ, ದಕ್ಷಿಣ ಕೊರಿಯಾ: ಭಾರತ ಮಹಿಳಾ ಹಾಕಿ ತಂಡದಲ್ಲಿ ಕೋವಿಡ್‌–19 ಕಾಣಿಸಿಕೊಂಡಿದೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಲು ಇಲ್ಲಿಗೆ ಬಂದಿರುವ ತಂಡದ ಆಟಗಾರ್ತಿಯೊಬ್ಬರು ಸೋಂಕಿಗೆ ಒಳಗಾಗಿರುವುದು ಖಚಿತವಾಗಿದೆ.

ಆತಿಥೇಯ ದಕ್ಷಿಣ ಕೊರಿಯಾ ಎದುರಿನ ಭಾರತದ ಪಂದ್ಯವನ್ನುಕೋವಿಡ್‌ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಈ ವಿಷಯವನ್ನು ಏಷ್ಯನ್ ಹಾಕಿ ಫೆಡರೇಷನ್ ಟ್ವೀಟ್ ಮಾಡುವ ಮೂಲಕ ಬಹಿರಂಗ ಮಾಡಿದೆ.

ಮಲೇಷ್ಯಾ ತಂಡದ ಆಟಗಾರ್ತಿ ನೂರುಲ್ ಫಯೆಜಾ ಶಿಫೀಕಾ ಖಲೀಮ್ ಅವರಲ್ಲಿ ಸೋಂಕು ಕಾಣಿಸಿಕೊಂಡ ಕಾರಣ ಭಾರತದ ಎದುರಿನ ಪಂದ್ಯವನ್ನು ಸೋಮವಾರ ರದ್ದುಪಡಿಸಲಾಗಿತ್ತು. ಸೋಂಕಿನ ಹಿನ್ನೆಲೆಯಲ್ಲಿ ತಂಡದ ಎಲ್ಲರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈಗ ಭಾರತ ತಂಡವೂ ಕ್ವಾರಂಟೈನ್‌ಗೆ ಒಳಗಾಬೇಕಾಗಿದೆ.

ADVERTISEMENT

ಭಾರತ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 13–0ಯಿಂದ ಜಯಿಸಿತ್ತು. ಡ್ರ್ಯಾಗ್ ಫ್ಲಿಕ್ಕರ್ ಗುರ್ಜೀತ್ ಕೌರ್ ಐದು ಗೋಲು ಗಳಿಸಿದ್ದರು. ಎರಡನೇ ಪಂದ್ಯ ಮಲೇಷ್ಯಾ ವಿರುದ್ಧ ನಿಗದಿಯಾಗಿತ್ತು.

ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳ ಪೈಕಿ ಭಾರತ ಅಂತರರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಗರಿಷ್ಠ, ಒಂಬತ್ತನೇ ಸ್ಥಾನದಲ್ಲಿದೆ. 2020ರಲ್ಲಿ ನಡೆಯಬೇಕಾಗಿದ್ದ ಮಹಿಳೆಯರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಕೋವಿಡ್‌–19ರ ಕಾರಣದಿಂದ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.