ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತದ ಶೂಟರ್‌ಗಳು ಜನವರಿ 24ರಂದು ಕೈರೊದಲ್ಲಿ ಆರಂಭವಾಗುವ ವರ್ಷದ ಮೊದಲ ಸ್ಪರ್ಧೆಯಾದ ಐಎಸ್ ಎಸ್‌ಎಫ್ ವಿಶ್ವ ಕಪ್‌ನಲ್ಲಿ ಭಾಗವಹಿಸುತ್ತಿಲ್ಲ. ಈ ವರ್ಷ ಸಾಕಷ್ಟು ಟೂರ್ನಿಗಳಲ್ಲಿ ಭಾಗವಹಿಸಿರುವ ಸ್ಪರ್ಧಿಗಳಿಗೆ ವಿಶ್ರಾಂತಿ ನೀಡಲು ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ಗೆ ಮುನ್ನ ಇನ್ನೂ ಕೆಲವು ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳಿರುವ ಕಾರಣ ಅವರು ದಣಿಯುವುದನ್ನು ತಡೆಯಲು ರಾಷ್ಟ್ರೀಯ ಫೆಡರೇಷನ್ ಮುಂದಾಗಿದೆ.
ಆದರೆ ಟೂರ್ನಿ ತಪ್ಪಿಸಿಕೊಳ್ಳುವ ಈ ನಿರ್ಧಾರ ಇತ್ತೀಚೆಗಷ್ಟೇ ಕೈಗೊಂಡಿರುವ ಕಾರಣ, ಈ ಮೊದಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯೋಜನೆ ಹಾಕಿಕೊಂಡಿದ್ದ ಕೆಲವು ಪ್ರಮುಖ ಶೂಟರ್‌ಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.
‘ಈ ವಿಷಯವನ್ನು ಕೋಚ್‌ಗಳು, ಕ್ರೀಡಾ ವಿಜ್ಞಾನ ತಂಡದ ಜೊತೆ ಮತ್ತು ಸಂಬಂಧಿಸಿದ ಎಲ್ಲರ ಜೊತೆ ಚರ್ಚಿ
ಸಲಾಗಿದ್ದು, ಅದರಂತೆ ಮುಂದುವರಿಯಲಾಗಿದೆ’ ಎಂದು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ ಮಹಾ ಕಾರ್ಯದರ್ಶಿ ಸುಲ್ತಾನ್ ಸಿಂಗ್ ತಿಳಿಸಿದ್ದಾರೆ.
ಕೈರೊ ವಿಶ್ವಕಪ್‌ನಲ್ಲಿ ಎಲ್ಲಾ ಮೂರು ವಿಭಾಗಗಳಲ್ಲಿ– ಪಿಸ್ತೂಲ್, ರೈಫಲ್ ಮತ್ತು ಶಾಟ್‌ಗನ್– ಸ್ಪರ್ಧೆ
ಗಳನ್ನು ಆಯೋಜಿಸಲಾಗಿದ್ದು, ಜನವರಿ 24 ರಿಂದ ಫೆಬ್ರುವರಿ 1ರವರೆಗೆ ನಿಗದಿಯಾಗಿದೆ.
ಮುಂದಿನ ವರ್ಷ ಬಿಡುವಿಲ್ಲದ ಕಾರ್ಯಕ್ರಮಗಳಿರುವ ಕಾರಣ ಶೂಟರ್‌ಗಳಿಗೆ ದಣಿವಾಗಬಾರದು ಎಂದು ಕೋಚ್‌ಗಳೂ ಬಯಸಿದ್ದಾರೆ ಎಂದು ಎನ್‌ಆರ್‌ಎಐ ಸಹಾಯಕ ಕಾರ್ಯದರ್ಶಿ ನಿಮಿತ್ ಚೋಪ್ರಾ ಹೇಳಿದರು.
‘ಕೋಚ್‌ಗಳು ತಮ್ಮ ಶೂಟರ್‌ಗಳಿಗೆ ವಿಶ್ರಾಂತಿ ಬಯಸುತ್ತಾರೆ ವಿನಾ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಲು ಒಲವು ತೋರಿಸುವುದಿಲ್ಲ. ಜನವರಿ 5 ರಿಂದ 18ರವರೆಗೆ ಜಕಾರ್ತಾದಲ್ಲಿ (ಏಷ್ಯಾ ಒಲಿಂಪಿಕ್ ಅರ್ಹತಾ ರೈಫಲ್/ ಪಿಸ್ತೂಲ್) ಸ್ಪರ್ಧೆಯಿದ್ದು ಅದರಲ್ಲಿ ಪೂರ್ಣಪ್ರಮಾಣದ ‘ಎ’ ತಂಡ ಭಾಗವಹಿಸಲಿದೆ ಎಂದು ಚೋಪ್ರಾ ತಿಳಿಸಿದ್ದಾರೆ. ಕೈರೊ ವಿಶ್ವಕಪ್‌ನಲ್ಲಿ ಭಾಗವಹಿಸದಿರುವ ತೀರ್ಮಾನವನ್ನು ಕಳೆದ ವಾರವಷ್ಟೇ ಕೈಗೊಳ್ಳಲಾಯಿತು ಎಂದೂ ಮಾಹಿತಿ ನೀಡಿದ್ದಾರೆ.
‘ನಾವು ‘ಬಿ’ ತಂಡವನ್ನೂ ಕಳುಹಿಸುತ್ತಿಲ್ಲ. ಒಂದು ವೇಳೆ ‘ಎ’ ತಂಡವನ್ನು ಕಳುಹಿಸದೇ ‘ಬಿ’ ತಂಡವನ್ನು ಕಳುಹಿಸಿದಲ್ಲಿ ಅವರು ಸಾಕಷ್ಟು ಪಾಯಿಂಟ್‌ಗಳನ್ನು ಕಲೆಹಾಕಿದರಲ್ಲಿ ಅದು ‘ಎ’ ತಂಡಕ್ಕೆ ಅನನುಕೂಲ (ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಯುವ ಒಲಿಂಪಿಕ್ಸ್ ಅರ್ಹತಾ ಟ್ರಯಲ್ಸ್ ವೇಳೆ) ಉಂಟು ಮಾಡಲಿದೆ. ಹೀಗಾಗಿ ಕೈರೊಕ್ಕೆ ನಾವು ಹೋಗುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.