ADVERTISEMENT

ಕಬಡ್ಡಿ ಆಡಲು ಪಾಕಿಸ್ತಾನ ತಲುಪಿದ ‘ಭಾರತ ತಂಡ’: ಅಚ್ಚರಿಗೊಂಡ ಕ್ರೀಡಾ ಇಲಾಖೆ

ಏಜೆನ್ಸೀಸ್
Published 10 ಫೆಬ್ರುವರಿ 2020, 13:14 IST
Last Updated 10 ಫೆಬ್ರುವರಿ 2020, 13:14 IST
   

ನವದೆಹಲಿ:ವಿಶ್ವ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿದೆ ಎಂಬ ಸುದ್ದಿ ತಿಳಿದು ಭಾರತೀಯ ಒಲಂಪಿಕ್‌ ಒಕ್ಕೂಟವು (ಐಒಎ) ಅಚ್ಚರಿಗೊಳಗಾಗಿದೆ.

ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಯಾಗಿರುವ ಕಬಡ್ಡಿ ವಿಶ್ವಕಪ್‌ನಲ್ಲಿ ಭಾಗವಹಿಸಲುಭಾರತ ತಂಡವು ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮಾತ್ರವಲ್ಲದೆ,‘ಭಾರತ ತಂಡ’ದವರು ಎನ್ನಲಾದಆಟಗಾರರು ದೇಶದ ಬಾವುಟ ಹಿಡಿದಿರುವ ಗ್ರೂಪ್‌ ಫೋಟೊ ಹಾಗೂ ಎಲ್ಲ ತಂಡದ ನಾಯಕರು ಟ್ರೋಫಿ ಜೊತೆಗೆ ನಿಂತಿರುವ ಚಿತ್ರವೂ ವೈರಲ್‌ ಆಗಿದೆ.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವಐಒಎ ಮುಖ್ಯಸ್ಥ ನರೀಂದರ್‌ ಬಾತ್ರಾ, ಲಾಹೋರ್‌ಗೆತಲುಪಿದೆ ಎನ್ನಲಾದ ತಂಡವು ಭಾರತದ ಅಧಿಕೃತ ತಂಡವಲ್ಲ. ಅವರು ಭಾರತದ ಹೆಸರನ್ನು ಬಳಸುವಂತಿಲ್ಲ ಎಂದು ಹೇಳಿದ್ದಾರೆ.

ADVERTISEMENT

‘ಐಒಎ ಒಪ್ಪಿಗೆ ನೀಡಿಲ್ಲ ಮತ್ತು ಭಾರತ ಕಬಡ್ಡಿ ಫೆಡರೇಷನ್‌ (ಎಕೆಎಫ್‌ಐ) ಸಹ ಸಮ್ಮತಿ ಸೂಚಿಸಿಲ್ಲ. ಹಾಗಾಗಿ ಅಲ್ಲಿಗೆ (ಪಾಕಿಸ್ತಾನಕ್ಕೆ) ಹೋಗಿರುವವರು ಯಾರೆಂಬುದೇ ಗೊತ್ತಿಲ್ಲ. 60 ರಿಂದ 100 ಜನರು ಹೋಗಿರಬಹುದು. ಆದರೆ, ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಐಒಎನಲ್ಲಿ ಸದಸ್ಯತ್ವ ಹೊಂದಿರುವಕಬಡ್ಡಿ ಫೆಡರೇಷನ್‌ ಯಾರೊಬ್ಬರನ್ನೂ ಕಳುಹಿಸಿಕೊಟ್ಟಿಲ್ಲ ಎಂದು ಖಚಿತ ಪಡಿಸಿದೆ. ಕ್ರೀಡಾ ಸಚಿವಾಲಯವೂ ಅದನ್ನು ಸ್ಪಷ್ಟಪಡಿಸಿದೆ. ಹಾಗಾಗಿ ಅವರು ಯಾರೆಂಬುದು ಗೊತ್ತಿಲ್ಲ ಮತ್ತು ಅದರ ಕತೆಯೇನು ಎಂಬುದೂ ಗೊತ್ತಿಲ್ಲ’ ಎಂದಿದ್ದಾರೆ.

‘ಇದಕ್ಕೂ ಭಾರತದ ಕ್ರೀಡೆಗೆ ಯಾವುದೇ ಸಂಬಂಧವಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ.

ಮುಂದುವರಿದು, ‘ಇಲ್ಲಿಯವರೆಗೆ ನಾವು ನಮ್ಮ ತಂಡವನ್ನು ಪ್ರಕಟಿಸಿಲ್ಲ. ಹಾಗಾಗಿ ಅವರು (ಅಲ್ಲಿಗೆ ತೆರಳಿರುವರು) ‘ಭಾರತ’ ಎಂಬ ಪದವನ್ನು ಬಳಸಕೂಡದು. ಐಒಎ ಮತ್ತು ಸರ್ಕಾರದ ಅನುಮತಿ ಇದ್ದರೆ ಮಾತ್ರವೇ ಅದನ್ನು ಬಳಸಿಕೊಳ್ಳಬಹುದು. ಭಾರತದ ಪಾಸ್‌ಪೋರ್ಟ್‌ ಇರುವ ಕೆಲವರು ಹೋಗಿ ಅಲ್ಲಿ (ಪಾಕಿಸ್ತಾನದಲ್ಲಿ)‘ಭಾರತ ತಂಡವಾಗಿ’ ಆಡಬಹುದಾದರೆ, ಅದು ಕ್ರೀಡೆ ಸಾಗಬೇಕಾದ ಮಾರ್ಗವಲ್ಲ. ಆದರೆ, ಇದು ನನ್ನ ಮಿತಿಯನ್ನು ಮೀರಿರುವುದರಿಂದ ಈ ಕುರಿತು ಪಾಕಿಸ್ತಾನದ ಬಗ್ಗೆ ಯಾವುದೇ ಮಾತನ್ನುಹೇಳಲಾರೆ. ಪಾಕಿಸ್ತಾನ ತನ್ನಿಷ್ಟದಂತೆಮಾಡಲಿ’ ಎಂದು ಹೇಳಿದ್ದಾರೆ.

ವಿದೇಶಗಳಲ್ಲಿ ನಡೆಯುವ ಯಾವುದೇ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ರಾಷ್ಟ್ರೀಯ ಫೆಡರೇಷನ್‌ಕ್ರೀಡಾ ಸಚಿವಾಲಯದೊಂದಿಗೆ ಸಂವಹನ ನಡೆಸಿ, ವಿದೇಶಾಂಗ ಇಲಾಖೆಯಿಂದ ರಾಜಕೀಯ ಹಾಗೂ ಗೃಹ ಇಲಾಖೆಯಿಂದ ರಕ್ಷಣಾ ಅನುಮತಿ ದೊರೆತರಷ್ಟೇ ಮುಂದುವರಿಯಲು ಸಾಧ್ಯ.

ಎಕೆಎಫ್‌ಐ ಅಧ್ಯಕ್ಷ ನ್ಯಾ. ಎಸ್‌.ಪಿ. ಗರ್ಗ್, ‘ಪಾಕಿಸ್ತಾನಕ್ಕೆ ತೆರಳಲು ಮತ್ತು ಅಲ್ಲಿ ಕಬಡ್ಡಿ ಆಡಲು ಯಾವುದೇ ತಂಡಕ್ಕೆ ನಾವು ಅನುಮತಿ ನೀಡಿಲ್ಲ. ಸಂಪೂರ್ಣ ಮಾಹಿತಿ ಬಂದ ಬಳಿಕ ವಿಚಾರ ಸ್ಪಷ್ಟವಾಗಲಿದೆ’ ಎಂದು ಹೇಳಿಕೆ ನೀಡಿದ್ದಾರೆ.

‘ಎಕೆಎಫ್‌ಐ ಇಂತಹ ಬೆಳವಣಿಗೆಗಳನ್ನು ಬೆಂಬಲಿಸುವುದಿಲ್ಲ. ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶ್ವಕಪ್‌ ಆಯೋಜಕರ ಪ್ರಕಾರ,ಫೆ.09 ರಿಂದ 16ರ ವರೆಗೆ ನಡೆಯಲಿರುವ ಈ ಕೂಟದಲ್ಲಿ 10 ತಂಡಗಳು(ಪಾಕಿಸ್ತಾನ,ಭಾರತ, ಕೆನಡಾ, ಇರಾನ್‌, ಯುಎಸ್‌, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಕೊರಿಯಾ, ಸಿಯೆರ್ರಾ ಲಿಯೋನ್, ಅಜರ್‌ಬೈಜಾನ್‌) ಭಾಗವಹಿಸಲಿವೆ. ಪ್ರಶಸ್ತಿ ಗೆದ್ದವರಿಗೆ ₹ 1 ಕೋಟಿ ಹಾಗೂ ರನ್ನರ್ಸ್‌ ಅಪ್‌ ಆದವರಿಗೆ ₹ 75 ಲಕ್ಷ ಬಹುಮಾನ ನೀಡಲಾಗುತ್ತದೆ.

ಭಾರತದಲ್ಲಿ ನಡೆದಿದ್ದ ಕಳೆದ ಆರು ವಿಶ್ವಕಪ್‌ಗಳಲ್ಲಿಯೂ ಭಾರತ ಚಾಂಪಿಯನ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.