ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಮತ್ತು ಐಎಸ್‌ಎಲ್ ಆಯೋಜಕರಾದ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಐಎಸ್‌ಡಿಎಲ್) ನಡುವೆ ಮಾಸ್ಟರ್ ರೈಟ್ಸ್ ಒಪ್ಪಂದ ನವೀಕರಣವಾಗದೇ ಉಂಟಾಗಿರುವ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣವನ್ನು ಇದೇ 22ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಎ.ಎಸ್.ಚಂದೂರ್ಕರ್ ಅವರನ್ನು ಒಳಗೊಂಡ ಪೀಠ ಅರ್ಜಿಯ ವಿಚಾರಣೆಗೆ ಒಪ್ಪಿಕೊಂಡಿತು.
ಐಎಸ್‌ಎಲ್ ಬಿಕ್ಕಟ್ಟನ್ನು ಶೀಘ್ರದಲ್ಲೇ ಬಗೆಹರಿಸದಿದ್ದರೆ ಕ್ಲಬ್ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವುದಾಗಿ 11 ಕ್ಲಬ್‌ಗಳು ಇತ್ತೀಚೆಗೆ ಫೆಡರೇಷನ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರಿಗೆ ಬರೆದ ಪತ್ರದಲ್ಲಿ ಕಟು ಎಚ್ಚರಿಕೆ ನೀಡಿದ್ದವು. ಈ ಬಿಕ್ಕಟ್ಟಿನಿಂದಾಗಿ ಭಾರತದ ವೃತ್ತಿಪರ ಫುಟ್‌ಬಾಲ್ ವ್ಯವಸ್ಥೆ ದುರ್ಬಲಗೊಂಡಿದೆ ಎಂದಿದ್ದವು.
ಅಮಿಕಸ್ ಕ್ಯೂರಿ (ಕೋರ್ಟ್‌ಗೆ ಸಹಕರಿಸುವ ವಕೀಲ)ಗೋಪಾಲ್ ಶಂಕರನಾರಾಯಣನ್ ಅವರು ಐಎಸ್‌ಎಲ್ ನಡೆಸುವ ಮೂಲಕ ಎಫ್‌ಎಸ್‌ಡಿಎಲ್ ಈ ಹಿಂದಿನ ಒಪ್ಪಂದಕ್ಕೆ ಬದ್ಧವಾಗಿರಬೇಕಿತ್ತು. ಒಂದೊಮ್ಮೆ ಅದು ಒಪ್ಪದಿದ್ದಲ್ಲಿ ಫೆಡರೇಷನ್ ಒಪ್ಪಂದವನ್ನು ಕೊನೆಗೊಳಿಸಿ ಹೊಸದಾಗಿ ಟಂಡರ್ ಕರೆಯಬೇಕಿತ್ತು. ಇದಾಗದಿದ್ದಲ್ಲಿ ಆಟಗಾರರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಪದೇ ಪದೇ ವೇತನ ಪಾವತಿ ಮಾಡದೇ ಹೋದಲ್ಲಿ ಫಿಫಾ, ಫೆಡರೇಷನ್ ಮೇಲೆ ನಿರ್ಬಂಧವನ್ನೂ ಹೇರಬಹುದಾಗಿದೆ’ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.