
ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣ
ಪ್ರಜಾವಾಣಿ ಚಿತ್ರ
ಬೆಂಗಳೂರು: ಕಿತ್ತುಹೋಗಿರುವ ಸಿಂಥೆಟಿಕ್ ಟ್ರ್ಯಾಕ್‌ಗಳು, ನಿರ್ವಹಣೆಯಿಲ್ಲದ ಆಸನಗಳು, ಎಲ್ಲೆಂದರಲ್ಲಿ ಬಿದ್ದಿರುವ ಕಸಕಡ್ಡಿಗಳು, ಗಬ್ಬೆದ್ದು ನಾರುತ್ತಿರುವ ಶೌಚಾಲಯಗಳು, ಅಡ್ಡಾದಿಡ್ಡಿಯಾಗಿ ಓಡಾಡುವ ಬೀದಿನಾಯಿಗಳು, ಕಗ್ಗತ್ತಲೆಯಲ್ಲೇ ತಾಲೀಮು ನಡೆಸುವ ಅಥ್ಲೀಟ್‌ಗಳು... ಇದು ಬೆಂಗಳೂರಿನ ಹೆಗ್ಗರುತಾಗಿರುವ ಕಂಠೀರವ ಹೊರಾಂಗಣ ಕ್ರೀಡಾಂಗಣದ ದುಸ್ಥಿತಿ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಡೆತನದಲ್ಲಿರುವ ಈ ಕ್ರೀಡಾಂಗಣವು ನಿರ್ವಹಣೆಯಿಲ್ಲದೆ ಸೊರಗುತ್ತಿದೆ. 18 ಸಾವಿರಕ್ಕೂ ಅಧಿಕ ಆಸನ ಸಾಮರ್ಥ್ಯವುಳ್ಳ ಈ ಕ್ರೀಡಾಂಗಣವು ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಸಾಕ್ಷಿಯಾಗಿದೆ.
ಆದರೆ, ಬಾಡಿಗೆ ದರದಲ್ಲಿ ಲಭ್ಯವಿರುವ ಈ ಕ್ರೀಡಾಂಗಣವು ಕ್ರೀಡೇತರ ಚಟುವಟಿಕೆಗಳಿಗೂ ಬಳಕೆಯಾಗುತ್ತಿದೆ. ಸರ್ಕಾರದ ಪ್ರಮುಖ ಸಭೆ ಸಮಾರಂಭಕ್ಕೆ, ಗಣ್ಯರ ಪಾರ್ಥಿವ ಶರೀರದ ಸಾರ್ವಜನಿಕರ ದರ್ಶನಕ್ಕೆ, ಸಿನಿಮಾ ಚಿತ್ರೀಕರಣಕ್ಕೂ ಬಳಕೆಯಾಗುತ್ತಿದೆ. ಹೀಗಾಗಿ, ರಾಜ್ಯ ಅಥವಾ ರಾಷ್ಟ್ರವನ್ನು ಪ್ರತಿನಿಧಿಸುವ ಅಥ್ಲೀಟ್‌ಗಳ ಅಭ್ಯಾಸಕ್ಕೆ ಕೇಂದ್ರವಾಗಬೇಕಿದ್ದ ಈ ತಾಣವು ‘ಸಾರ್ವಜನಿಕ’ ಬಳಕೆಯಿಂದಾಗಿ ಅವ್ಯವಸ್ಥೆಯ ಆಗರವಾಗಿದೆ.
‘ಕರ್ನಾಟಕ ಮಿನಿ ಕ್ರೀಡಾಕೂಟ’ ಇದೇ ಕ್ರೀಡಾಂಗಣದಲ್ಲಿ ನ.2ರಿಂದ 9ರತನಕ ನಡೆದಿತ್ತು. ಅಂದು ಭಾಗವಹಿಸಿದ್ದ ಸಾವಿರಾರು ಕ್ರೀಡಾಪಟುಗಳಿಗೆ ಹಂಚಿದ್ದ ತಂಪು ಪಾನೀಯದ ಪ್ಯಾಕೇಟ್‌ಗಳು ಒಂದು ವಾರ ಪ್ರೇಕ್ಷಕರ ಗ್ಯಾಲರಿಯಲ್ಲಿ ರಾಶಿಯಾಗಿ ಬಿದ್ದಿದ್ದವು.
‘ಕೋಟ್ಯಂತರ ರೂಪಾಯಿ ವೆಚ್ಚಮಾಡಿ ಮೂರು ವರ್ಷಗಳ ಹಿಂದೆ ಅಳವಡಿಸಿದ್ದ ಸಿಂಥೆಟಿಕ್ ಟ್ರ್ಯಾಕ್ ಕಿತ್ತುಹೋಗಿದೆ. ಕಳೆದ ವರ್ಷ ನಡೆದಿದ್ದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಸಂದರ್ಭದಲ್ಲಿ ಕೆಲ ಅಥ್ಲೀಟ್‌ಗಳು ಬ್ಲಾಕ್‌ನಲ್ಲಿ ಸ್ಲಿಪ್ ಆಗಿದ್ದರು. ಪಕ್ಕದ ಚೆನ್ನೈನಲ್ಲಿ ಅಥ್ಲೀಟ್‌ಗಳ ಮತ್ತು ಸಾರ್ವಜನಿಕರ ಅಭ್ಯಾಸಕ್ಕೆ ಪ್ರತ್ಯೇಕ ಟ್ರ್ಯಾಕ್ ಇದೆ. ಆದರೆ, ಇಲ್ಲಿ ಪುಟ್ಟಮಕ್ಕಳಿಂದ ಹಿಡಿದು ರಾಷ್ಟ್ರೀಯ ಅಥ್ಲೀಟ್‌ಗಳು ಒಂದೇ ಟ್ರ್ಯಾಕ್‌ನಲ್ಲಿ ತಾಲೀಮು ನಡೆಸಬೇಕಿದೆ. ಬೀದಿನಾಯಿಗಳೂ ಟ್ರ್ಯಾಕ್‌ನಲ್ಲಿ ಓಡಾಡುತ್ತಿರುವುದರಿಂದ ಅಥ್ಲೀಟ್‌ಗಳಿಗೆ ತೊಂದರೆಯಾಗುತ್ತಿದೆ’ ಎಂದು ರಾಷ್ಟ್ರೀಯ ಸ್ಪ್ರಿಂಟ್ ಅಥ್ಲೀಟ್ ಜೋನಾ ಅಸಮಾಧಾನ ವ್ಯಕ್ತಪಡಿಸಿದರು.
‘ಕ್ರೀಡಾಂಗಣ ಪ್ರವೇಶಕ್ಕೆ ಶುಲ್ಕ ವಸೂಲು ಮಾಡುತ್ತಿದ್ದರೂ ಅದಕ್ಕೆ ತಕ್ಕಂತೆ ನಿರ್ವಹಣೆ ಮಾಡಿಲ್ಲ. ಜಿಮ್‌ನಲ್ಲೂ ನಮಗೆ ಬೇಕಾದ ಸಲಕರಣೆಗಳಿಲ್ಲ. ಐಸ್ ಬಾತ್ ವ್ಯವಸ್ಥೆಯೇ ಇಲ್ಲ. ಶೌಚಾಲಯಗಳಂತೂ ಬಳಸಲು ಯೋಗ್ಯವಾಗಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಅಥ್ಲೀಟ್ ಆಕ್ರೋಶ ಹೊರಹಾಕಿದರು.
‘ಸಂಪಂಗಿ ಕೆರೆಯಿದ್ದ ಜಾಗದಲ್ಲೇ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಸುತ್ತ ಎತ್ತರ ಪ್ರದೇಶವಿದ್ದು, ಕ್ರೀಡಾಂಗಣ ತಗ್ಗು ಪ್ರದೇಶದಲ್ಲಿ ಇರುವುದರಿಂದ ಮಳೆಗಾಲದಲ್ಲಿ ನೀರು ನುಗ್ಗುವುದು ಸಾಮಾನ್ಯವಾಗಿದೆ. ಭವಿಷ್ಯದ ಸವಾಲುಗಳ ಬಗ್ಗೆ ಯೋಜಿಸದೆ ಅಂದಿನ ಎಂಜಿನಿಯರ್‌ಗಳು ಮಾಡಿರುವ ಎಡವಟ್ಟಿನಿಂದ ಪ್ರತಿ ವರ್ಷವೂ ಸಮಸ್ಯೆ ಅನುಭವಿಸುವಂತಾಗಿದೆ’ ಎಂದು ಹಿರಿಯ ಕೋಚ್ ಒಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
‘ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ’
‘ಕ್ರೀಡಾಂಗಣದೊಳಗೆ ಬೀದಿನಾಯಿಗಳು ಬರುವ ಬಗ್ಗೆ ದೂರುಗಳು ಬಂದಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಬೀದಿನಾಯಿಗಳ ನಿಯಂತ್ರಣ ಕುರಿತು ಚರ್ಚೆ ನಡೆದಿದೆ. ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಹೇಳಿದ್ದಾರೆ.
‘ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಅಥ್ಲೀಟ್‌ಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅಂತಹ ಅಥ್ಲೀಟ್‌ಗಳು ಇಲಾಖೆಗೆ ಸಂಬಂಧಪಟ್ಟ ದಾಖಲೆಯನ್ನು ಒದಗಿಸಿ ವಿನಾಯಿತಿ ಪಡೆಯಬಹುದು’ ಎಂದು ಚೇತನ್ ಹೇಳಿದ್ದಾರೆ.
‘ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಅಥ್ಲೀಟ್‌ಗಳು ಸೇರಿದಂತೆ ವಿದ್ಯಾರ್ಥಿಗಳಿಂದ ಶುಲ್ಕ ವಸೂಲು ಮಾಡುವುದಕ್ಕೆ ನಮ್ಮ ವಿರೋಧವಿದೆ. ಈ ಬಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಿಗೆ ಶೀಘ್ರದಲ್ಲೇ ಪತ್ರ ಬರೆದು ಶುಲ್ಕ ವಿನಾಯಿತಿ ನೀಡುವಂತೆ ಒತ್ತಾಯಿಸಲಾಗುವುದು’ ಎಂದು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಎ. ರಾಜವೇಲು ಹೇಳಿದ್ದಾರೆ.
ಕಂಠೀರವಕ್ಕೆ ತಪ್ಪಿದ್ದ ಫುಟ್‌ಬಾಲ್ ಪಂದ್ಯ
ಭಾರತ ಮತ್ತು ಸಿಂಗಪುರ ನಡುವಿನ ಎಎಫ್‌ಸಿ ಏಷ್ಯನ್ ಕಪ್ 2027ರ ಕ್ವಾಲಿಫೈಯರ್ ಪಂದ್ಯದ ಇದೇ ಕಂಠೀರವ ಕ್ರೀಡಾಂಗಣದ ಫುಟ್‌ಬಾಲ್ ಅಂಕಣದಲ್ಲಿ ಅಕ್ಟೋಬರ್ 14ರಂದು ನಡೆಯಬೇಕಿತ್ತು. ಆದರೆ ಸೌಲಭ್ಯಗಳ ಕೊರತೆಯ ಕಾರಣಕ್ಕೆ ಏಷ್ಯನ್ ಫುಟ್‌ಬಾಲ್ ಒಕ್ಕೂಟ (ಎಎಫ್‌ಸಿ) ಪಂದ್ಯಕ್ಕೆ ಅನುಮತಿ ನಿರಾಕರಿಸಿತ್ತು. ನೈಸರ್ಗಿಕ ಪಿಚ್ ಸೇರಿದಂತೆ ಕ್ರೀಡಾಂಗಣದಲ್ಲಿ ಹಲವು ಸೌಲಭ್ಯಗಳ ಸಮರ್ಪಕವಾಗಿಲ್ಲ. ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ಈ ತಾಣ ಅನುಕೂಲಕರವಾಗಿಲ್ಲ ಎಂದು ಪರಿಶೀಲನೆಗೆ ಬಂದಿದ್ದ ಸಮಿತಿಯು ಎಎಫ್‌ಸಿಗೆ ವರದಿ ಮಾಡಿತ್ತು. ಹೀಗಾಗಿ ಆ ಪಂದ್ಯ ಗೋವಾಕ್ಕೆ ಸ್ಥಳಾಂತರವಾಗಿತ್ತು.
ರಾಷ್ಟ್ರೀಯ ಅಥ್ಲೀಟ್‌ಗಳಿಗೆ ಅಭ್ಯಾಸ ನಡೆಸಲು ಪ್ರಶಾಂತ ವಾತಾವರಣ ಬೇಕು. ಸುತ್ತಮುತ್ತಲಿನ ಪರಿಸರವು ನೈರ್ಮಲ್ಯದಿಂದ ಕೂಡಿರಬೇಕು. ಆದರೆ ಕಂಠೀರವ ಕ್ರೀಡಾಂಗಣದಲ್ಲಿ ಅಂತಹ ವ್ಯವಸ್ಥೆ ಇಲ್ಲ.ಜೋನ್ನಾ, ರಾಷ್ಟ್ರೀಯ ಸ್ಪ್ರಿಂಟ್ ಅಥ್ಲೀಟ್
ಶೌಚಾಲಯ ಸೇರಿದಂತೆ ಕ್ರೀಡಾಂಗಣದ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು. ಶುಚಿತ್ವ ಕಾಪಾಡಲು ಆದ್ಯತೆ ನೀಡಲಾಗುವುದುಚೇತನ್, ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಕ್ರೀಡಾಂಗಣದ ನಿರ್ವಹಣೆಗೆ ನುರಿತ ಮತ್ತು ವಿಶೇಷ ಕೌಶಲವುಳ್ಳ ಕಾರ್ಮಿಕರ ಅಗತ್ಯವಿದೆ. ಆದರೆ ಇಲ್ಲಿ ಟೆಂಡರ್ ಮೂಲಕ ಗುತ್ತಿಗೆ ಪಡೆದವರ ಬಳಿ ಅಂತಹ ಕಾರ್ಮಿಕರೇ ಇಲ್ಲ.ಹಿರಿಯ ಕೋಚ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.