ಚಾಂಪಿಯನ್ನರು.... ವಿಶ್ವ ರ್‍ಯಾಪಿಡ್ ಚೆಸ್ ಚಾಂಪಿಯನ್‌ಷಿಪ್ ಓಪನ್ ವಿಭಾಗದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ರಷ್ಯಾದ ವೊಲೊಡರ್ ಮುರ್ಝಿನ್ ಮತ್ತು ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಕಿರೀಟ ಧರಿಸಿದ ಕೋನೇರು ಹಂಪಿ.
-ಪಿಟಿಐ ಚಿತ್ರ
ನ್ಯೂಯಾರ್ಕ್: ಭಾರತದ ಗ್ರ್ಯಾಂಡ್‌ಮಾಸ್ಟರ್ ಕೋನೇರು ಹಂಪಿ ಅವರು ಭಾನುವಾರ ಫಿಡೆ ಮಹಿಳಾ ವಿಶ್ವ ರ್‍ಯಾಪಿಡ್ ಚೆಸ್ ಚಾಂಪಿಯನ್‌ಷಿಪ್ ಗೆದ್ದುಕೊಂಡರು. ಆ ಮೂಲಕ ಈ ವರ್ಷ ಭಾರತದ ಯಶಸ್ಸಿನ ಸಂಭ್ರಮಕ್ಕೆ ಕೊನೆಯಲ್ಲಿ ಮತ್ತಷ್ಟು ಮೆರುಗು ತುಂಬಿದರು.
ಭಾರತದ ಅಗ್ರಮಾನ್ಯ ಆಟಗಾರ್ತಿ, ಭಾನುವಾರ ಕೊನೆಯ ಸುತ್ತಿನಲ್ಲಿ ಇಂಡೊನೇಷ್ಯಾದ ಐರಿನ್ ಸುಕಂದರ್ ಅವರನ್ನು ಸೋಲಿಸುವ ಮೂಲಕ ಎರಡನೇ ಬಾರಿ ಈ ಚಾಂಪಿಯನ್‌ಷಿಪ್‌ನ ಕಿರೀಟ ಮುಡಿಗೇರಿಸಿಕೊಂಡರು. ಜಾರ್ಜಿಯಾದಲ್ಲಿ 2019ರಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಹಂಪಿ ಮೊದಲ ಬಾರಿ ಈ ಪ್ರಶಸ್ತಿ ಗೆದ್ದುಕೊಂಡಿದ್ದರು. ಚೀನಾದ ಜು ವೆನ್‌ಜುನ್ ಬಿಟ್ಟರೆ ಈ ಪ್ರಶಸ್ತಿಯನ್ನು ಎರಡು ಸಲ ಗೆದ್ದ ಏಕಮಾತ್ರ ಆಟಗಾರ್ತಿ ಎಂಬ ಗೌರವ ಹಂಪಿ ಅವರದಾಯಿತು.
ಹಂಪಿ ಅವರ ಸಾಧನೆ ಭಾರತದ ಪಾಲಿನ ಈ ವರ್ಷದ ಸಂಭ್ರಮಕ್ಕೆ ಮತ್ತಷ್ಟು ಹೊಳಪು ನೀಡಿತು. ಡಿ.ಗುಕೇಶ್ ಅವರು ಸಿಂಗಪುರದಲ್ಲಿ ಈ ತಿಂಗಳ ಮಧ್ಯದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಅದಕ್ಕಿಂತ ಮೊದಲು ಸೆಪ್ಟೆಂಬರ್‌ನಲ್ಲಿ ಹಂಗೆರಿಯ ಬುಡಾಪೆಸ್ಟ್‌ನಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ ಭಾರತದ ಓಪನ್ ಮತ್ತು ಮಹಿಳಾ ತಂಡಗಳು ಐತಿಹಾಸಿಕ ಚಿನ್ನ ಗೆದ್ದು ಸಂಭ್ರಮಿಸಿದ್ದವು.
ಈ ಕೂಟದಲ್ಲಿ ಸೋಲಿನೊಡನೆ ಮೊದಲ ಸುತ್ತು ಆರಂಭಿಸಿದ್ದ ಹಂಪಿ 11ನೇ ಸುತ್ತಿನ ನಂತರ 8.5 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನ ಪಡೆದರು. ಸ್ವದೇಶದ ದ್ರೋಣವಲ್ಲಿ ಹಾರಿಕಾ ಸೇರಿದಂತೆ ಇತರ ಆರು ಮಂದಿ ತಲಾ ಎಂಟು ಪಾಯಿಂಟ್ಸ್ ಪಡೆದಿದ್ದರು.
‘ರೋಮಾಂಚನದ ಜೊತೆಗೆ ಸಂತಸವಾಗಿದೆ. ಈ ದಿನ ಟೈಬ್ರೇಕ್‌ನಂತಹ ಕಠಿಣ ಸವಾಲು ಎದುರಾಗಬಹುದು ಎಂದು ನಿರೀಕ್ಷಿಸಿದ್ದೆ. ನಾನು ಗೆದ್ದಿರುವ ಮಾಹಿತಿ ಮೊದಲು ಆರ್ಬಿಟರ್ (ರೆಫ್ರಿ) ಅವರಿಂದ ತಿಳಿಯಿತು’ ಎಂದು 37 ವರ್ಷ ವಯಸ್ಸಿನ ಹಂಪಿ ಹೇಳಿದರು.
‘ಇದು ನನಗೆ ಅನಿರೀಕ್ಷಿತ. ಈ ವರ್ಷ ನಾನು ಪರದಾಡಿದ್ದೇ ಜಾಸ್ತಿ. ಹಲವು ಟೂರ್ನಿಗಳಲ್ಲಿ ನನ್ನ ಸಾಧನೆ ಕಳಪೆಯಾಗಿತ್ತು. ಕೊನೆಯ ಸ್ಥಾನಗಳನ್ನೂ ಪಡೆದಿದ್ದೆ. ಹೀಗಾಗಿ ಇದು ನನ್ನ ಪಾಲಿಗೆ ಅಚ್ಚರಿಯದ್ದು’ ಎಂದು ಅವರು ಪ್ರತಿಕ್ರಿಯಿಸಿದರು.
ಟೈಬ್ರೇಕ್ ಆಧಾರದಲ್ಲಿ ಜು ವೆನ್‌ಜುನ್ ಎರಡನೇ ಸ್ಥಾನ ಪಡೆದರೆ, ಕ್ಯಾಥರಿನಾ ಲಾಗ್ನೊ (ರಷ್ಯಾ) ಮೂರನೇ ಸ್ಥಾನ ಗಳಿಸಿದರು. ಹಾರಿಕಾ ಐದನೇ ಸ್ಥಾನಕ್ಕೆ ಸರಿದರು.
ಯಶಸ್ಸಿನ ಶ್ರೇಯವನ್ನು ಹಂಪಿ ತಮ್ಮ ಕುಟುಂಬಕ್ಕೆ ಅರ್ಪಿಸಿದರು. ‘ನನ್ನ ಕುಟುಂಬದ ಬೆಂಬಲದಿಂದ ಇದು ಸಾಧ್ಯವಾಯಿತು. ನನ್ನ ಪತಿ, ನನ್ನ ಪೋಷಕರು... ಅವರು ನನ್ನ ಬೆನ್ನಿಗಿದ್ದರು. ನನ್ನ ಪ್ರಯಾಣದ ಸಂದರ್ಭದಲ್ಲಿ ಪೋಷಕರು ನನ್ನ ಮಗಳನ್ನು ನೋಡಿಕೊಂಡರು’ ಎಂದರು. ಮೊದಲ ನಾಲ್ಕು ಸುತ್ತುಗಳ ಬಳಿಕ ಹಂಪಿ ಕೇವಲ 2.5 ಪಾಯಿಂಟ್ಸ್ ಕಲೆಹಾಕಿದ್ದರು. ಎರಡನೇ ದಿನ ನಾಲ್ಕೂ ಗೆದ್ದು ಪ್ರಶಸ್ತಿಯ ಪೈಪೋಟಿಯಲ್ಲಿ ನಿಂತರು.
ವೊಲೊಡರ್ ಮುರ್ಝಿನ್ ಓಪನ್ ಚಾಂಪಿಯನ್
ರಷ್ಯಾದ 18 ವರ್ಷ ವಯಸ್ಸಿನ ಆಟಗಾರ, ಗ್ರ್ಯಾಂಡ್‌ಮಾಸ್ಟರ್ ವೊಲೊಡರ್ ಮುರ್ಝಿನ್ ಅವರು ತಾರಾಖಚಿತ ಆಟಗಾರರನ್ನು ಹೊಂದಿದ್ದ ಓಪನ್ ವಿಭಾಗದಲ್ಲಿ ಚಾಂಪಿಯನ್ ಕಿರೀಟ ಧರಿಸಿದರು.
ಅವರ ಪಾಲಿಗೆ 12ನೇ (ಒಟ್ಟು 13ರಲ್ಲಿ) ಸುತ್ತು ನಿರ್ಣಾಯಕ ಎನಿಸಿತು. ಭಾರತದ ಆರ್.ಪ್ರಜ್ಞಾನಂದ ವಿರುದ್ಧ ಅವರ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೆ ಭಾರತದ ಆಟಗಾರ ಮಾಡಿದ ಒಂದು ತಪ್ಪು ನಡೆ, ಗೆಲುವು ರಷ್ಯಾದ ಆಟಗಾರನ ಕಡೆ ವಾಲುವಂತೆ ಮಾಡಿತು.
ಈ ಗೆಲುವಿನಿಂದ ಏಕಾಂಗಿಯಾಗಿ ಲೀಡ್ ಪಡೆದ ಅವರು ಕೊನೆಯ ಸುತ್ತಿನಲ್ಲಿ ಗೆದ್ದು ಒಟ್ಟು 10 ಪಾಯಿಂಟ್‌ಗಳೊಡನೆ ವಿಜೇತರಾದರು.
ಫಿಡೆ ಪ್ರತಿನಿಧಿಸುತ್ತಿರುವ ರಷ್ಯಾ ಆಟಗಾರರು ಈ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿಸಿದರು. ಅಲೆಕ್ಸಾಂಡರ್ ಗ್ರಿಸ್ಚುಕ್ ಎರಡನೆ ಮತ್ತು ವಿಶ್ವ ಚಾಂಪಿಯನ್‌ಷಿಪ್ ಮಾಜಿ ಚಾಲೆಂಜರ್ ಇಯಾನ್ ನಿಪೊಮ್‌ನಿಷಿ ಮೂರನೇ ಸ್ಥಾನ ಪಡೆದರು. ಇಬ್ಬರೂ ತಲಾ 9.5 ಪಾಯಿಂಟ್ಸ್ ಸಂಗ್ರಹಿಸಿದ್ದರು.
ಅರ್ಜುನ್ ಇರಿಗೇಶಿ 9 ಪಾಯಿಂಟ್ಸ್ ಸಂಗ್ರಹಿಸಿ ಇತರ ಐವರೊಂದಿಗೆ ನಾಲ್ಕನೇ ಸ್ಥಾನ ಹಂಚಿಕೊಂಡರು. ಭಾರತದ ಆರ್.ಪ್ರಜ್ಞಾನಂದ 8.5 ಮತ್ತು ಅರವಿಂದ ಚಿದಂಬರಮ್ 8 ಪಾಯಿಂಟ್ಸ್ ಗಳಿಸಿದರು.
ಪ್ರಧಾನಿ, ಸಿಎಂ ಅಭಿನಂದನೆ
ನವದೆಹಲಿ: ಚೆಸ್ ಬದುಕಿನಲ್ಲಿ ಎರಡನೇ ಬಾರಿ ವಿಶ್ವ ರ್‍ಯಾಪಿಡ್ ಪ್ರಶಸ್ತಿ ಗೆದ್ದುಕೊಂಡ ಕೋನೇರು ಹಂಪಿ ಅವರನ್ನು ಪ್ರಧಾನಿ ಅಭಿನಂದಿಸಿದ್ದಾರೆ.
‘ವಿಶ್ವ ರ್‍ಯಾಪಿಡ್ ಚೆಸ್ ಚಾಂಪಿಯನ್‌ಷಿಪ್ ಗೆದ್ದುಕೊಂಡ ಹಂಪಿ ಅವರಿಗೆ ಅಭಿನಂದನೆಗಳು. ಅವರ ದಿಟ್ಟತನ ಮತ್ತು ಅಮೋಘ ಆಟ ಕೋಟ್ಯಂತರ ಜನರನ್ನು ಪ್ರೇರೇಪಿಸಲಿದೆ’ ಎಂದು ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.
ಅಮರಾವತಿ ವರದಿ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರೂ ಕೋನೇರು ಹಂಪಿ ಅವರನ್ನು ಭಾನುವಾರ ಅಭಿನಂದಿಸಿದ್ದಾರೆ. ಅವರ ವಿಜಯ ಅಮೋಘವಾದುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.