ನೀರಜ್ ಚೋಪ್ರಾ
ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.
ಬೆಂಗಳೂರು: ಇದೇ ಮೊದಲ ಬಾರಿಗೆ ತಮ್ಮದೇ ಹೆಸರಿನಲ್ಲಿ ಆಯೋಜನೆಗೊಂಡಿರುವ 'ಎನ್ ಕ್ಲಾಸಿಕ್ 2025' ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿರುವ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಭಾರತದ ತಾರೆ ನೀರಜ್ ಚೋಪ್ರಾ, ಬೆಂಗಳೂರಿನಲ್ಲಿ ತಮಗೆ ಎದುರಾದ ಸವಾಲುಗಳ ಕುರಿತು ವಿವರಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ನೀರಜ್ ಚೋಪ್ರಾ ಕ್ಲಾಸಿಕ್ 2025 ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ 86.18 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್, ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಈ ಟೂರ್ನಿಯು ವಿಶ್ವ ಅಥ್ಲೆಟಿಕ್ಸ್‌ನಿಂದ (ಡಬ್ಲ್ಯುಎ) ಗೋಲ್ಡ್ ಲೆವೆಲ್ ಮಾನ್ಯತೆ ಪಡೆದಿದೆ. ಅಲ್ಲದೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಟೂರ್ನಿ ಆಯೋಜನೆಗೊಂಡಿದೆ.
ರಭಸವಾಗಿ ಬೀಸುತ್ತಿದ್ದ ಗಾಳಿ...
ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಹೊತ್ತಿಗೆ ವಿರುದ್ಧ ದಿಕ್ಕಿನಿಂದ ರಭಸವಾಗಿ ಬೀಸುತ್ತಿದ್ದ ಗಾಳಿಯು ಬಹುತೇಕ ಎಲ್ಲ ಸ್ಪರ್ಧಿಗಳಿಗೂ ಸವಾಲಾಗಿ ಪರಿಣಮಿಸಿತ್ತು.
ಈ ಕುರಿತು ನೀರಜ್ ಸ್ಪರ್ಧೆಯ ಬಳಿಕ ಹೇಳಿಕೊಂಡಿದ್ದಾರೆ. 'ನಾನು ಉತ್ತಮ ಫಲಿತಾಂಶವನ್ನು ನಿರೀಕ್ಷಿಸಿದ್ದೆ. ಆದರೆ ಗಾಳಿಯು ರಭಸವಾಗಿ ಬೀಸುತ್ತಿತ್ತು. ಈ ಸವಾಲನ್ನು ಗೆದ್ದಿರುವುದಕ್ಕೆ ಸಂತಸವಾಗಿದೆ. ಅಭಿಮಾನಿಗಳು ನನ್ನ ಗೆಲುವನ್ನು ನಿರೀಕ್ಷೆ ಮಾಡಿದ್ದರಿಂದ ಮಾನಸಿಕವಾಗಿ ಸ್ವಲ್ಪ ಕಷ್ಟಕರವಾಗಿತ್ತು' ಎಂದು ಹೇಳಿದ್ದಾರೆ.
'ನಾನು ಇಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದೆ. ಹಾಗಾಗಿ ತವರಿನ ಪ್ರೇಕ್ಷಕರ ಮುಂದೆ ಉತ್ತಮ ಪ್ರದರ್ಶನ ನೀಡುವ ಒತ್ತಡವೂ ಕಾಡಿತ್ತು. ಎದುರಿನಿಂದ ಬೀಸುತ್ತಿದ್ದ ಗಾಳಿಯು ದಿಕ್ಕನ್ನು ಬದಲಾಯಿಸುತ್ತಿತ್ತು. ಆದ್ದರಿಂದ ಪರಿಸ್ಥಿತಿ ಕಷ್ಟಕರವಾಗಿತ್ತು' ಎಂದು ಹೇಳಿದ್ದಾರೆ.
'ಖಂಡಿತವಾಗಿಯೂ ಗೆಲ್ಲುವುದು ನನ್ನ ಗುರಿಯಾಗಿತ್ತು. ಜೊತೆಗೆ ಸ್ಪರ್ಧೆಯು ಯಶಸ್ವಿಯಾಗಿ ಆಯೋಜನೆಯಾಗಬೇಕಿತ್ತು. ಎಲ್ಲವೂ ಯೋಜನೆಯಂತೆ ನಡೆಯಿತು. ಇದೀಗ ಸಂಪೂರ್ಣವಾಗಿ ವಿಶ್ವ ಚಾಂಪಿಯನ್‌ನತ್ತ ಗಮನ ಹರಿಸುತ್ತೇನೆ' ಎಂದು ತಿಳಿಸಿದ್ದಾರೆ.
'ವೈಯಕ್ತಿಕವಾಗಿ ನನ್ನ ಪ್ರದರ್ಶನ ಸಮಾಧಾನ ತಂದಿಲ್ಲ. ಆದರೂ ಗಾಳಿಯ ರಭಸವನ್ನು ನೋಡಿದರೆ ಗೆಲುವು ಸಂತಸ ನೀಡಿದೆ' ಎಂದು ಹೇಳಿದ್ದಾರೆ.
ನೀರಜ್ ಅವರ ಮೊದಲ ಥ್ರೊ ಫೌಲ್ ಆಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಅವರು 'ಆರಂಭದಲ್ಲಿ ನನಗೆ ತಾಂತ್ರಿಕ ತೊಂದರೆ ಎದುರಾಗಿತ್ತು. ಬಳಿಕ ನನ್ನ ಕೋಚ್ ಜಾನ್ ಝೆಲೆಜ್ನಿ ನೇರವಾಗಿ ಜಾವೆಲಿನ್ ಎಸೆಯುವಂತೆ ಸಲಹೆ ಕೊಟ್ಟರು. ಇದರಿಂದ ನೆರವಾಯಿತು' ಎಂದಿದ್ದಾರೆ.
'ಅಭಿಮಾನಿಗಳಿಂದ ಅತ್ಯುತ್ತಮ ಬೆಂಬಲ ವ್ಯಕ್ತವಾಯಿತು. ಆರಂಭದಲ್ಲಿ ಉತ್ಸಾಹ ಹೆಚ್ಚಿದ್ದರಿಂದ ಫೌಲ್ ಆಯಿತು. ಕೋಚ್ ಸಂಯಮದಿಂದ ಇರುವಂತೆ ಸೂಚಿಸಿದರು. ಬಳಿಕ ನನ್ನ ಪ್ರದರ್ಶನದತ್ತ ಗಮನ ಕೇಂದ್ರಿಕರಿಸಿದ್ದೆ' ಎಂದು ತಿಳಿಸಿದ್ದಾರೆ.
ನೀರಜ್ ಚೋಪ್ರಾ
ಬೆಂಗಳೂರಿನ ಜನರಿಗೆ ಕೃತಜ್ಞತೆ...
ಮೊದಲ ಆವತ್ತಿಯಲ್ಲೇ ಸರಿ ಸುಮಾರು 15,000 ಅಭಿಮಾನಿಗಳು ಸ್ಪರ್ಧೆಯನ್ನು ಕಣ್ಣಾರೆ ವೀಕ್ಷಿಸಿದ್ದಾರೆ. ಉದ್ಘಾಟನಾ ಆವೃತ್ತಿಗೆ ಇಷ್ಟೊಂದು ಜನರು ಭೇಟಿ ಕೊಟ್ಟಿರುವುದು ನನ್ನಲ್ಲಿ ಅಚ್ಚರಿಯನ್ನುಂಟು ಮಾಡಿದೆ ಎಂದು ನೀರಜ್ ಹೇಳಿದ್ದಾರೆ.
ಕ್ರೀಡೆಯನ್ನು ಪ್ರೋತ್ಸಾಹಿಸುವ ಬೆಂಗಳೂರಿನ ಅಭಿಮಾನಿಗಳನ್ನು ನೀರಜ್ ಕೊಂಡಾಡಿದ್ದಾರೆ. ಅಲ್ಲದೆ ಕರ್ನಾಟಕ ಸರ್ಕಾರ, ಪ್ರಾಯೋಜಕರು ಹಾಗೂ ಒಲಿಂಪಿಕ್ ಸಂಸ್ಥೆ ಸೇರಿದಂತೆ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ದೇಶದಲ್ಲಿ ಅಥ್ಲೆಟಿಕ್ಸ್ ಕ್ರೀಡೆಯನ್ನು ಇನ್ನಷ್ಟು ಬೆಂಬಲಿಸುವಂತೆ ವಿನಂತಿಸಿದ್ದಾರೆ.
ಈ ಕೂಟದಲ್ಲಿ ನೀರಜ್ ಚಿನ್ನದ ಪದಕವನ್ನು ಗೆದ್ದರೆ ಕೆನ್ಯಾದ ಜೂಲಿಯಸ್ ಯಿಗೊ ಮತ್ತು ಶ್ರೀಲಂಕಾದ ರುಮೇಶ್ ಪತಿರಾಗೆ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದಾರೆ.
27 ವರ್ಷದ ನೀರಜ್ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಮತ್ತು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಜಾವೆಲಿಯನ್ ಥ್ರೊ ವಿಶ್ವ ಚಾಂಪಿಯನ್ ಆಗಿರುವ ನೀರಜ್, ಪ್ರಸ್ತುತ (ಜುಲೈ1) ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು 1,445 ಅಂಕಗಳನ್ನು ಹೊಂದಿದ್ದಾರೆ.
ನೀರಜ್ ಚೋಪ್ರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.