ಚಿನ್ನ ಗೆದ್ದ ನೀರಜ್ ಚೋಪ್ರಾ, ಕೆನ್ಯಾದ ಜೂಲಿಯಸ್‌ಗೆ ಬೆಳ್ಳಿ
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿಯ ರಂಗು ಎಂದಿನಂತೆ ಇರಲಿಲ್ಲ. ಹೊನಲು ಬೆಳಕಿನಲ್ಲಿ ಭರವಸೆಯ ಹಲವು ಬಣ್ಣಗಳು ಲಾಸ್ಯವಾಡಿದವು. ಅಥ್ಲೆಟಿಕ್ಸ್‌ನ ಒಂದು ಭಾಗವಾದ ಜಾವೆಲಿನ್ ಥ್ರೋನಲ್ಲಿಯೂ ಮನೋಲ್ಲಾಸವನ್ನು ಕಂಡ ಸಾವಿರಾರು ಜನರು ಪುಳಕಗೊಂಡರು.
ಭಾರತದ ಕ್ರೀಡಾರಂಗದಲ್ಲಿಯೇ ಮೊಟ್ಟಮೊದಲ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೆವೆಲ್ ಜಾವೆಲಿನ್ ಥ್ರೋ ಕೂಟಕ್ಕೆ ಅವರೆಲ್ಲರೂ ಸಾಕ್ಷಿಯಾದರು. ಈ ಕೂಟದ ಕೇಂದ್ರಬಿಂದು ಒಲಿಂಪಿಯನ್ ನೀರಜ್ ಚೋಪ್ರಾ ಅವರ ಮೇಲೆ ಬೆಂಗಳೂರಿನ ಕ್ರೀಡಾಪ್ರೇಮಿಗಳು ಪ್ರೀತಿಯ ಮಳೆಗರೆದರು. ನೀರಜ್ ಕೂಡ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ.
ತಮ್ಮ ಶ್ರೇಷ್ಠ ಥ್ರೋ ದಾಖಲೆ 90 ಮೀಟರ್‌ಗಳನ್ನು ದಾಟದಿದ್ದರೂ ವಿಶ್ವದರ್ಜೆಯ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದರು. ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅವರ ಈ ಸಾಧನೆಯಿಂದಾಗಿ ಕಂಠೀರವ ಕ್ರೀಡಾಂಗಣದಲ್ಲಿ ಜನ..ಗಣ..ಮನ ಮೊಳಗಿತು. ರಾಷ್ಟ್ರಗೀತೆಯನ್ನು ಕೇಳುತ್ತ ಪುಳಕಗೊಂಡ ಅಭಿಮಾನಿಗಳಲ್ಲಿ ಹಲವರ ಕಂಗಳು ಜಿನುಗಿದವು.
ಹರಿಯಾಣದ ನೀರಜ್ ಅವರು 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಮತ್ತು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ವಿಶ್ವ ಚಾಂಪಿಯನ್ ಕೂಡ ಆದವರು. ಆದರೆ ಅವರು ಶನಿವಾರ ಸಂಜೆ ಕ್ರೀಡಾಂಗಣದೊಳಗೆ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳತ್ತ ಕೈಬೀಸಿ, ಫ್ಲೈಯಿಂಗ್ ಕಿಸ್ ಎಸೆದು ಅಭಿನಂದಿಸಿದರು. ಸ್ಪರ್ಧೆ ಮುಕ್ತಾಯವಾದ ನಂತರವೂ ತಾವೇ ಗ್ಯಾಲರಿಗಳತ್ತ ಹೋಗಿ ಅಭಿಮಾನಿಗಳ ಕೈಕುಲುಕಿದರು. ಹಸ್ತಾಕ್ಷರ ನೀಡಿದರು. ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.
‘ಇದೇ ಮೊದಲ ಪ್ರಯತ್ನ. ಇಷ್ಟು ದೊಡ್ಡಮಟ್ಟದಲ್ಲಿ ಯಶಸ್ವಿಯಾಗುತ್ತದೆ ಅಂದುಕೊಂಡಿರಲಿಲ್ಲ. ಬೆಂಗಳೂರಿನ ಜನರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನಾನು ಚಿರಋಣಿಯಾಗಿರುವೆ. ಜೆಎಸ್‌ಡಬ್ಲ್ಯು ತಂಡ, ಎಐಎಫ್‌ಎಫ್, ಕರ್ನಾಟಕ ಸರ್ಕಾರ ನೀಡಿರುವ ಬೆಂಬಲಕ್ಕೆ ಕೃತಜ್ಞ’ ಎಂದು ನೀರಜ್ ಅವರು ಸುದ್ದಿಗಾರರೊಂದಿಗೆ ಸಂತಸ ಹಂಚಿಕೊಂಡರು.
‘ಅಥ್ಲೆಟಿಕ್ಸ್ ಬಹಳ ಸುಂದರವಾದ ಕ್ರೀಡೆ. ಇಲ್ಲಿ ರಾಷ್ಟ್ರೀಯ, ರಾಜ್ಯ ಕೂಟಗಳು ಆದಾಗ ಮಕ್ಕಳು ಬಂದು ನೋಡಬೇಕು. ಪಾಲಕರು, ಶಿಕ್ಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬರಬೇಕು. ಜಿಗಿತ, ಓಟ, ಎಸೆತಗಳ ಕುರಿತು ತಿಳಿವಳಿಕೆ ಮಕ್ಕಳಿಗೆ ನೀಡಬೇಕು. ಆಗ ಈ ಕ್ರೀಡೆಗಳಲ್ಲಿಯೂ ಆಸಕ್ತಿ ಬೆಳೆಯುತ್ತದೆ. ಅದರಿಂದ ಕ್ರೀಡೆಯೂ ಬೆಳೆಯುತ್ತದೆ. ಬೆಂಗಳೂರು ಜನ ಕ್ರೀಡಾಪ್ರಿಯರು’ ಎಂದು ನೀರಜ್ ಹೇಳಿದರು.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊತ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್, ಶಾಸಕ ರಿಜ್ವಾನ್ ಅರ್ಷದ್ ಮತ್ತು ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್ ಅವರು ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.