ADVERTISEMENT

ನೀರಜ್ ಮುಂದಿನ ಗುರಿಯೇನು? ಚಾಂಪಿಯನ್ ಅಥ್ಲೀಟ್‌ನ ಉತ್ತರ ಹೀಗಿತ್ತು!

ಪಿಟಿಐ
Published 8 ಆಗಸ್ಟ್ 2021, 6:37 IST
Last Updated 8 ಆಗಸ್ಟ್ 2021, 6:37 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ಟೋಕಿಯೊ: ಒಲಿಂಪಿಕ್ಸ್‌ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಮುಂದಿನ ಗುರಿಯೇನು? ಇಂತಹದೊಂದು ಕುತೂಹಲಕಾರಿ ಪ್ರಶ್ನೆಗೆ ಭಾರತದ ಚಾಂಪಿಯನ್ ಅಥ್ಲೀಟ್ ಉತ್ತರ ನೀಡಿದ್ದಾರೆ.

ಹೌದು, ಮುಂಬರುವ ಸ್ಪರ್ಧೆಗಳಲ್ಲಿ90 ಮೀಟರ್ ದೂರ ಜಾವೆಲಿನ್ ಎಸೆಯುವ ಗುರಿ ಹೊಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದು ನೀರಜ್ ಹೋರಾಟ ಮನೋಭಾವ ಇಲ್ಲಿಗೆ ನಿಲ್ಲುವುದಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಅಲ್ಲದೆ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸುವ ಇರಾದೆಯನ್ನು ಹೊಂದಿದ್ದಾರೆ.

ಒಲಿಂಪಿಕ್ಸ್ ಇತಿಹಾಸದಲ್ಲಿ 90.57 ಮೀಟರ್ ದೂರ ಜಾವೆಲಿನ್ ಎಸೆದಿರುವುದು ಇದುವರೆಗಿನ ದಾಖಲೆಯಾಗಿದೆ. ಮುಂದಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಈ ಸಾಧನೆಯನ್ನು ಮೀರಿ ನಿಲ್ಲುವ ಗುರಿ ಹೊಂದಿದ್ದಾರೆ.

'ಜಾವೆಲಿನ್ ಥ್ರೋ ತಾಂತ್ರಿಕ ಅಂಶಗಳಿಂದ ಕೂಡಿದ ಸ್ಪರ್ಧೆಯಾಗಿದ್ದು, ಬಹಳಷ್ಟು ವಿಚಾರಗಳನ್ನು ಅವಲಂಬಿಸಿರುತ್ತದೆ. ಆ ನಿರ್ದಿಷ್ಟ ದಿನದಲ್ಲಿ ಏನು ಬೇಕಾದರೂ ಸಂಭವಿಸಬಹುದು. ನನ್ನ ಮುಂದಿನ ಗುರಿ 90 ಮೀಟರ್ ದೂರವನ್ನು ಕ್ರಮಿಸುವುದಾಗಿದೆ' ಎಂದು ತಿಳಿಸಿದ್ದಾರೆ.

'ನಾನು ಈ ವರ್ಷ ಒಲಿಂಪಿಕ್ಸ್ ಮೇಲೆ ಗಮನ ಕೇಂದ್ರಿಕರಿಸಿದ್ದೆ. ಚಿನ್ನ ಗೆದ್ದು ಅದನ್ನು ಸಾಧಿಸಿದ್ದೇನೆ. ಇನ್ನು ಮುಂಬರುವ ಸ್ಪರ್ಧೆಗಳತ್ತ ಗಮನ ಹರಿಸಲಿದ್ದೇನೆ. ಸ್ವದೇಶಕ್ಕೆ ಹಿಂತಿರುಗಿದ ಬಳಿಕ ಮುಂಬರುವ ಸ್ಪರ್ಧೆಗಳತ್ತ ಯೋಜನೆ ರೂಪಿಸಲಿದ್ದೇನೆ' ಎಂದಿದ್ದಾರೆ.

ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಭಾರತದ 100 ವರ್ಷಗಳ ಕಾಯುವಿಕೆಗೆ ವಿರಾಮ ಹಾಕಿರುವ ಹರಿಯಾಣದ ರೈತನ ಮಗನಾಗಿರುವ 23 ವರ್ಷದ ನೀರಜ್, ಗರಿಷ್ಠ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು.

'ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದರೂ ಯಾವುದೇ ಒತ್ತಡವಿರಲಿಲ್ಲ. ನಾನು ನನ್ನದೇ ಶ್ರೇಷ್ಠ ಪ್ರದರ್ಶನವನ್ನು ಮೀರಿಸಲು ಪ್ರಯತ್ನಿಸುತ್ತಿದ್ದೆ. ಹಾಗಾಗಿ ಚಿನ್ನ ಗೆಲ್ಲಲು ಸಾಧ್ಯವಾಯಿತು' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.