ಪಾಕಿಸ್ತಾನ-ಭಾರತ
ರಾಯಿಟರ್ಸ್ ಚಿತ್ರ
ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬೆನ್ನಲ್ಲೇ, ಭಾರತ ಮತ್ತು ಪಾಕಿಸ್ತಾನ ನಡುವೆ ಬಿಕ್ಕಟ್ಟು ಉಲ್ಬಣಿಸಿದೆ. ಇದರಿಂದಾಗಿ, ಈ ವರ್ಷ ಭಾರತದ ಆತಿಥ್ಯದಲ್ಲಿ ನಡೆಯುವ ಹೀರೊ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾಗವಹಿಸುವುದು ಅನುಮಾನವಾಗಿದೆ.
ಟೂರ್ನಿಯು ಬಿಹಾರದ ರಾಜ್‌ಗಿರ್‌ನಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 7ರ ವರೆಗೆ ಆಯೋಜನೆಗೊಳ್ಳಲಿದೆ. ಆತಿಥೇಯ ಭಾರತ, ಪಾಕಿಸ್ತಾನ, ಜಪಾನ್, ಕೊರಿಯಾ, ಚೀನಾ, ಮಲೇಷಿಯಾ, ಒಮನ್ ಹಾಗೂ ಚೀನೀಸ್ ತೈಪೇಯಿ ತಂಡಗಳು ಪಾಲ್ಗೊಳ್ಳಲಿವೆ. ಮುಂದಿನವರ್ಷ ನೆದರ್ಲೆಂಡ್ಸ್ ಹಾಗೂ ಬೆಲ್ಜಿಯಂ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್‌ಗೂ ಇದು ಅರ್ಹತಾ ಟೂರ್ನಿಯಾಗಲಿದೆ. ಫೈನಲ್‌ನಲ್ಲಿ ಗೆದ್ದವರಿಗೆ ನೇರ ಪ್ರವೇಶ ಸಿಗಲಿದೆ.
ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಬೋಲನಾಥ್ ಸಿಂಗ್ ಅವರು, ಟೂರ್ನಿಯಲ್ಲಿ ಪಾಕ್ ಭಾಗವಹಿಸುವಿಕೆ ಕುರಿತು ಮಾತನಾಡಿದ್ದಾರೆ. 'ಈಗಲೇ ಏನನ್ನೂ ಹೇಳಲಾಗದು. ಆದರೆ, ಈ ವಿಚಾರವಾಗಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.
'ಸದ್ಯಕ್ಕೆ, ನಾವು ಏನನ್ನೂ ಊಹಿಸಲು ಸಾಧ್ಯವಿಲ್ಲ. ಅದರಲ್ಲೂ, ಇತ್ತೀಚೆಗೆ ನಡೆದ ಭೀಕರ ಪಹಲ್ಗಾಮ್ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಂತರವಂತೂ ಅಂದಾಜು ಮಾಡುವುದು ಅಸಾಧ್ಯ. ಟೂರ್ನಿಗೆ ಇನ್ನೂ ಮೂರು ತಿಂಗಳು ಇದೆ. ಸರ್ಕಾರ ನೀಡುವ ಸೂಚನೆಗಳಿಗೆ ಬದ್ಧರಾಗಿರುತ್ತೇವೆ. ಅದರಲ್ಲಿ ಎರಡು ಮಾತಿಲ್ಲ' ಎಂದು ಖಚಿತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮಿರದ ಅನಂತನಾಗ್ ಜಿಲ್ಲೆಯ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದರು. 26 ಜನರು ಹತ್ಯೆಯಾಗಿ, ಹಲವರು ಗಾಯಗೊಂಡಿದ್ದರು. ಅದರ ಬೆನ್ನಲ್ಲೇ, ಕ್ರಮ ಕೈಗೊಂಡ ಕೇಂದ್ರ ಸರ್ಕಾರ, ಭಾರತದಲ್ಲಿ ನೆಲೆಸಿದ್ದ ಪಾಕ್ ನಿವಾಸಿಗಳ ವೀಸಾ ರದ್ದುಪಡಿಸಿ, ದೇಶದಿಂದ ಹೊರಹಾಕಿತ್ತು.
ಎರಡು ವಾರದ ನಂತರ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನೂರಾರು ಉಗ್ರರು ಹತರಾಗಿದ್ದರು. ಅದಕ್ಕೆ ಪ್ರತಿಯಾಗಿ, ಪಾಕ್ ಪಡೆಗಳು ಗಡಿಯುದ್ದಕ್ಕೂ ದಾಳಿ ನಡೆಸಿದ್ದರಿಂದ, ಉಭಯ ದೇಶಗಳ ನಡುವೆ ಸಂಘರ್ಷ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಕಳೆದವಾರ ಕದನ ವಿರಾಮ ಘೋಷಿಸಲಾಗಿದೆ.
ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ಜೊತೆಗಿನ ಸಂಬಂಧವು ಭಯೋತ್ಫಾದನೆ ವಿರುದ್ಧ ಆ ದೇಶ ಕೈಗೊಂಡ ಕ್ರಮಗಳನ್ನು ಅವಲಂಭಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ, 'ಸರ್ಕಾರವು ಒಂದುವೇಳೆ, ಅನುಮತಿ ನೀಡದಿದ್ದರೆ, ಪಾಕ್ ತಂಡ ಭಾರತಕ್ಕೆ ಪ್ರಯಾಣಿಸುವುದಿಲ್ಲ. ಸರ್ಕಾರದ ನಿಲುವು ಎಂಬುದರ ಮೇಲೆ ಎಲ್ಲವೂ ನಿಂತಿದೆ' ಎಂದು ಹಾಕಿ ಇಂಡಿಯಾ ಮೂಲಗಳು ಹೇಳಿವೆ.
ಪಾಕಿಸ್ತಾನಕ್ಕೆ ಅನುಮತಿ ದೊರೆಯದಿದ್ದರೆ, ಟೂರ್ನಿಯನ್ನು ಏಳು ತಂಡಳೊಂದಿಗೇ ನಡೆಸುವುದು ಅಥವಾ ತೆರವಾಗಲಿರುವ ಒಂದು ಸ್ಥಾನದಲ್ಲಿ ಸ್ಪರ್ಧಿಸಲು ಮತ್ತೊಂದು ತಂಡಕ್ಕೆ ಅವಕಾಶ ಕಲ್ಪಿಸುವುದು 'ಏಷ್ಯನ್ ಹಾಕಿ ಫೆಡರೇಷನ್'ಗೆ ಬಿಟ್ಟ ವಿಚಾರ ಎನ್ನಲಾಗಿದೆ.
2016ರಲ್ಲಿ ಪಠಾಣ್‌ಕೋಟ್ ವಾಯು ನೆಲೆ ಮೇಲೆ ಉಗ್ರರು ದಾಳಿ ನಡೆಸಿದ ಕೆಲವೇ ತಿಂಗಳುಗಳ ನಂತರ ಭಾರತದಲ್ಲಿ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿ ಆಯೋಜನೆಗೊಂಡಿತ್ತು. ಆಗ, ಪಾಕ್ ಪಾಲ್ಗೊಂಡಿರಲಿಲ್ಲ. ಅದರ ಬದಲು ಮಲೇಷಿಯಾಗೆ ಅವಕಾಶ ನೀಡಲಾಗಿತ್ತು.
ಸದ್ಯದ ಪರಿಸ್ಥಿತಿಯಲ್ಲಿ, ಚೆನ್ನೈ ಹಾಗೂ ಮದುರೈನಲ್ಲಿ ನವೆಂಬರ್ 28ರಿಂದ ಡಿಸೆಂಬರ್ 10ರವರೆಗೆ ನಡೆಯಲಿರುವ ಜೂನಿಯರ್ ವಿಶ್ವಕಪ್‌ನಲ್ಲಿಯೂ ಪಾಕ್ ಪಾಲ್ಗೊಳ್ಳುವುದೂ ಅನುಮಾನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.