ನವದೆಹಲಿ: ಬಿಹಾರದಲ್ಲಿ ನಡೆಯಲಿರುವ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡ ಹಿಂದೆ ಸರಿದಿದೆ. ಒಮನ್ ಕೂಡ ಆಡದಿರಲು ನಿರ್ಧರಿಸಿದೆ. ಹೀಗಾಗಿ, ಈ ತಂಡಗಳ ಸ್ಥಾನದಲ್ಲಿ ಬಾಂಗ್ಲಾದೇಶ ಮತ್ತು ಕಜಾಕಸ್ಥಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರ ಬೆನ್ನಲ್ಲೇ, ಮಲೇಷ್ಯಾ ತಂಡದ ಸಹಾಯಕ ಕೋಚ್ ಕೂಡ ಭಾರತಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದ್ದಾರೆ. ಆದರೆ, ಪಾಕ್ ಪಡೆ ಏಷ್ಯಾಕಪ್ ಟೂರ್ನಿಯಲ್ಲಿ ಸ್ಪರ್ಧಿಸದಿರುವುದಕ್ಕೂ, ತಮ್ಮ ನಿರ್ಧಾರಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಹಾರದ ರಾಜ್‌ಗಿರ್‌ನಲ್ಲಿ ಆಗಸ್ಟ್ 29ರಿಂದ ಸೆಪ್ಟೆಂಬರ್ 7ರ ವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಆತಿಥೇಯ ಭಾರತ, ಜಪಾನ್, ಚೀನಾ, ಕಜಾಕಸ್ತಾನ, ಮಲೇಷ್ಯಾ, ದಕ್ಷಿಣ ಕೊರಿಯ, ಚೀನೀಸ್ ತೈಪೇಯಿ ಮತ್ತು ಬಾಂಗ್ಲಾದೇಶ ಆಡಲಿರುವ ಈ ಪಂದ್ಯಾವಳಿಯು ಮುಂದಿನ ವರ್ಷ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಅರ್ಹತಾ ಟೂರ್ನಿಯೂ ಆಗಿರಲಿದೆ.
ಇಂತಹ ಮಹತ್ವದ ಟೂರ್ನಿಯಲ್ಲಿ ಭಾಗವಹಿಸದಿರಲು ತೀರ್ಮಾನಿಸಿರುವ ಬಗ್ಗೆ ಮಲೇಷ್ಯಾದ ಸಹಾಯಕ ಕೋಚ್ ಸೊಹೈಲ್ ಅಬ್ಬಾಸ್ ಮಾತನಾಡಿದ್ದಾರೆ. ಪಾಕಿಸ್ತಾನ ಹಾಕಿ ತಂಡದ ಮಾಜಿ ಮಾಟಗಾರನೂ ಆಗಿರುವ ಸೊಹೈಲ್, 'ನಾನು ಏಷ್ಯಾಕಪ್‌ಗೆ ಬರುತ್ತಿಲ್ಲ. ಆದರೆ, ಅದರ ಹಿಂದೆ ಕೆಲವು ವೈಯಕ್ತಿಕ ಕಾರಣಗಳಿವೆ' ಎಂದು ತಿಳಿಸಿದ್ದಾರೆ.
'ಕಿಂಗ್ ಆಫ್ ಡ್ರಾಗ್ ಫ್ಲಿಕ್' ಎಂದೇ ಖ್ಯಾತವಾಗಿರುವ ಅಬ್ಬಾಸ್, 2012ರಲ್ಲಿ ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದರು. 2024ರ ಅಕ್ಟೋಬರ್‌ನಲ್ಲಿ ಮಲೇಷ್ಯಾ ತಂಡದ ಸಹಾಯಕ ಕೋಚ್ ಆಗಿ ಪೆನಾಲ್ಟಿ ಕಾರ್ನರ್ ತರಬೇತಿ ಆರಂಭಿಸುವ ಮೂಲಕ ಕೋಚಿಂಗ್ ವೃತ್ತಿಜೀವನ ಆರಂಭಿಸಿದ್ದಾರೆ.
ಪಾಕ್ ತಂಡ ಟೂರ್ನಿಯಿಂದ ಹಿಂದೆ ಸರಿದಿರುವುದು ತಮ್ಮ ನಿರ್ಧಾರಕ್ಕೆ ಕಾರಣವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, 'ಹಾಗೇನಿಲ್ಲ. ಇದಕ್ಕೂ ಮೊದಲು ನಾನು ಆಸ್ಟ್ರೇಲಿಯಾ ಮತ್ತು ಚೀನಾಗೂ ತಂಡದೊಂದಿಗೆ ಹೋಗಿರಲಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಅಬ್ಬಾಸ್ ಪಾಕ್ ತಂಡದ ಪರ 1998, 2002, 2006 ಹಾಗೂ 2010ರ ವಿಶ್ವಕಪ್ ಮತ್ತು 200, 2004, 2012ರ ಒಲಿಂಪಿಕ್ಸ್‌ನಲ್ಲಿ ಆಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್ 22ರಂದು ನಡೆಸಿದ ಗುಂಡಿನ ದಾಳಿ ಬಳಿಕ ಭಾರತ ಹಾಗೂ ಪಾಕ್ ಸಂಬಂಧ ಮತ್ತಷ್ಟು ಹಳಸಿದೆ. ಇದೇ ಕಾರಣಕ್ಕೆ, ಪಾಕ್ ಪಡೆ ಏಷ್ಯಾಕಪ್‌ನಲ್ಲಿ ಆಡುವುದು ಖಾತ್ರಿಯಾಗಿರಲಿಲ್ಲ.
ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ವೀಸಾ ಒದಗಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಆ ಪ್ರಸ್ತಾವವನ್ನು ಪಾಕಿಸ್ತಾನ ಹಾಕಿ ಫೆಡರೇಷನ್ (ಪಿಎಚ್‌ಎಫ್) ತಿರಸ್ಕರಿಸಿದೆ. ತಂಡದ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಭಾರತದಲ್ಲಿ ಆಡದಿರಲು ತೀರ್ಮಾನಿಸಿದೆ.
ಅಬ್ಬಾಸ್ ಖಾತೆಯಲ್ಲಿವೆ 21 ಹ್ಯಾಟ್ರಿಕ್
ಪಾಕ್ ಪರ 311 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಅಬ್ಬಾಸ್, 21 ಬಾರಿ ಹ್ಯಾಟ್ರಿಕ್ ಸಹಿತ 348 ಗೋಲು ಬಾರಿಸಿದ್ದಾರೆ.
1998ರಲ್ಲಿ ಪೆಶಾವರದಲ್ಲಿ ಪದಾರ್ಪಣೆ ಪಂದ್ಯವಾಡಿದ್ದ ಅವರು, 2010ರ ವಿಶ್ವಕಪ್ ವೇಳೆ ದೆಹಲಿಯಲ್ಲಿ ಕೊನೇ ಪಂದ್ಯವಾಡಿದ್ದರು. ಈ ಎರಡೂ ಪಂದ್ಯಗಳನ್ನು ಭಾರತದ ವಿರುದ್ಧವೇ ಆಡಿದ್ದರು ಎಂಬುದು ವಿಶೇಷ.
ಅಂತರರಾಷ್ಟ್ರೀಯ ಹಾಕಿಯಲ್ಲಿ ಅತಿಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅಬ್ಬಾಸ್‌ಗಿಂತ ಮುಂದಿರುವುದು ಭಾರತದ ಮೇಜರ್ ಧ್ಯಾನ್ ಚಂದ್ ಅವರಷ್ಟೇ. ಈ 'ಹಾಕಿ ಮಾಂತ್ರಿಕ', 185 ಪಂದ್ಯಗಳಲ್ಲಿ 570 ಗೋಲುಗಳನ್ನು ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.