ಚೆನ್ನೈ: ಅಕ್ಷಿತ್ ಧುಲ್ ಅವರ ಅಮೋಘ ರೇಡಿಂಗ್ ಬಲದಿಂದ ದಬಂಗ್ ಡೆಲ್ಲಿ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಶುಕ್ರವಾರ ಆರು ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 39–33ರಿಂದ ಡೆಲ್ಲಿ ತಂಡ ಜಯ ಗಳಿಸಿತು. ಗುರುವಾರ ಒಂದು ಅಂಕಗಳಿಂದ (36–37) ಬೆಂಗಾಲ್ ವಾರಿಯರ್ಸ್‌ಗೆ ಸೋತಿದ್ದ ದಬಂಗ್ ತಂಡವು ಮತ್ತೆ ಗೆಲುವಿನ ಹಳಿಗೆ ಮರಳಿತು.
ಡೆಲ್ಲಿ ತಂಡಕ್ಕೆ 14 ಪಂದ್ಯಗಳಲ್ಲಿ ಇದು 12ನೇ ಜಯವಾಗಿದೆ. ಒಟ್ಟು 24 ಅಂಕಗಳೊಂದಿಗೆ ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು. ಗುಜರಾತ್ ತಂಡಕ್ಕೆ 13 ಪಂದ್ಯಗಳಲ್ಲಿ ಇದೇ 9ನೇ ಸೋಲಾಗಿದೆ. ಒಟ್ಟು 8 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ.
ಗಾಯಾಳಾಗಿರುವ ನಾಯಕ ಅಶು ಮಲಿಕ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಡೆಲ್ಲಿ ತಂಡವು ಅಕ್ಷಿತ್ ಅವರ ಮಿಂಚಿನ ರೇಡಿಂಗ್‌ನಂದಾಗಿ ಮೊದಲಾರ್ಧದಲ್ಲಿ 21–14ರ ಮುನ್ನಡೆ ಗಳಿಸಿತು. ಆದರೆ, ಉತ್ತರಾರ್ಧದಲ್ಲಿ ಜೈಂಟ್ಸ್ ತಂಡವು ಪ್ರತಿರೋಧ ತೋರಿ 1 (19–18) ಅಂಕಗಳ ಮುನ್ನಡೆ ಪಡೆಯಿತು. ಪ್ರಥಮಾರ್ಧದ ಮುನ್ನಡೆಯಿಂದಾಗಿ ಡೆಲ್ಲಿ ತಂಡ ಮೇಲುಗೈ ಸಾಧಿಸಿತು.
ಅಕ್ಷಿತ್ ಅವರು 8 ಟಚ್ ಪಾಯಿಂಟ್ಸ್ ಮತ್ತು 4 ಬೋನಸ್ ಸೇರಿದಂತೆ ಒಟ್ಟು 12 ಅಂಕ ಗಳಿಸಿದರು. ಅವರಿಗೆ ರೇಡಿಂಗ್‌ನಲ್ಲಿ ಅಜಿಂಕ್ಯ ಪವಾರ್ (5) ಸಾಥ್ ನೀಡಿದರು. ಜೈಂಟ್ಸ್ ಪರ ಹಿಮಾಂಶು ಸಿಂಗ್ (11) ‘ಸೂಪರ್ ಟೆನ್’ ಸಾಧನೆ ಮೆರೆದರು. ಮೊಹಮ್ಮದ್ ರೆಜಾ ಶಾಡ್ಲೊಯಿ ಮತ್ತು ಹಿಮಾಂಶು ‘ಹೈಫೈ’ ಗಳಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಸಂದೀಪ್ ಕುಮಾರ್ (13) ಮತ್ತು ಅಜಿತ್ ಚವ್ಹಾಣ್ (12) ಅವರ ರೇಡಿಂಗ್ ನೆರವಿನಿಂದ ಯು ಮುಂಬಾ ತಂಡವು 48–29ರಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು.
ಬೆಂಗಾಲ್ ತಂಡದ ನಾಯಕ ದೇವಾಂಕ್ ಈ ಪಂದ್ಯದಲ್ಲೂ ‘ಸೂಪರ್ ಟೆನ್’ ಸಾಧನೆ ಮೆರೆದರು. ಅವರು ಹಾಲಿ ಆವೃತ್ತಿಯಲ್ಲಿ ‘ದ್ವಿಶತಕ’ (200 ಅಂಕ) ದಾಖಲಿಸಿದರು. ಈ ಮೂಲಕ ಕಡಿಮೆ ಪಂದ್ಯಗಳಲ್ಲಿ (12) ಈ ಸಾಧನೆ ಮಾಡಿದರು. ಅಲ್ಲದೆ, ಪಿಕೆಎಲ್‌ನಲ್ಲಿ ವೇಗದ 500 ಅಂಕ (43 ಪಂದ್ಯ) ಗಳಿಸಿದರು.
ಇಂದಿನ ಪಂದ್ಯಗಳು
ಬೆಂಗಳೂರು ಬುಲ್ಸ್– ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 8)
ತಮಿಳು ತಲೈವಾಸ್– ಪುಣೇರಿ ಪಲ್ಟನ್ (ರಾತ್ರಿ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.