ನವದೆಹಲಿ: ರೇಡರ್‌ಗಳಾದ ಆಕಾಶ್ ಶಿಂಧೆ ಮತ್ತು ಅಲಿರೆಜಾ ಮಿರ್ಜೈಯನ್ ಅವರ ‘ಸೂಪರ್ ಟೆನ್’ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನ ಗುರುವಾರ ಪಂದ್ಯದಲ್ಲಿ 54–26ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
ಬುಲ್ಸ್ ತಂಡಕ್ಕೆ 18 ಪಂದ್ಯಗಳಲ್ಲಿ 11ನೇ ಗೆಲುವು ಇದಾಗಿದೆ. ಒಟ್ಟು 22 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದೊಂದಿಗೆ ಲೀಗ್ ಅಭಿಯಾನ ಮುಗಿಸಿ, ಪ್ಲೇ ಆಫ್‌ನತ್ತ ಹೆಜ್ಜೆ ಹಾಕಿತು.
ತ್ಯಾಗರಾಜ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಬುಲ್ಸ್ ಆಟಗಾರರು ಆರಂಭದಿಂದಲೇ ಚುರುಕಿನ ಆಟ ಪ್ರದರ್ಶಿಸಿದರು. ಹೀಗಾಗಿ, ಬುಲ್ಸ್ ತಂಡವು ಮೊದಲಾರ್ಧದಲ್ಲಿ 36–7 ಅಂಕಗಳ ಬೃಹತ್ ಮುನ್ನಡೆ ಗಳಿಸಿತು. ಉತ್ತರಾರ್ಧದಲ್ಲಿ ಜೈಂಟ್ಸ್ ತಂಡವು ಕೊಂಚ ಪ್ರತಿರೋಧ ತೋರಿ ಸೋಲಿನ ಅಂತರವನ್ನು ಕಡಿಮೆಮಾಡಿಕೊಂಡಿತು. ಬುಲ್ಸ್ ತಂಡಕ್ಕೆ ಇದು ಸತತ ಮೂರನೇ ಗೆಲುವಾಗಿದೆ.
ಬುಲ್ಸ್ ಪರ ಅನುಭವಿ ರೇಟರ್ ಆಕಾಶ್ 11 ಅಂಕ ಗಳಿಸಿದರೆ, ಅಲಿರೆಜಾ 10 ಅಂಕ ತಂದಿತ್ತರು. ಡಿಫೆಂಡರ್ ಸಂಜಯ್ ಧುಲ್ ಮತ್ತು ಆಶಿಶ್ ಮಲಿಕ್ ‘ಹೈಫೈ’ ಸಾಧನೆ ಮಾಡಿದರು. ಜೈಂಟ್ಸ್ ಪರ ಶ್ರೀಧರ ಆನಂದ ಕದಂ (8) ಏಕಾಂಗಿ ಹೋರಾಟ ತೋರಿದರು.
ಜೈಂಟ್ಸ್ ತಂಡಕ್ಕೆ ಇದು 18 ಪಂದ್ಯಗಳಲ್ಲಿ 12ನೇ ಸೋಲಾಗಿದೆ. ಒಟ್ಟು 12 ಅಂಕ ಗಳಿಸಿರುವ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ 11ನೇ ಸ್ಥಾನದೊಂದಿಗೆ ಹಾಲಿ ಆವೃತ್ತಿಯ ಅಭಿಯಾನ ಮುಗಿಸಿತು.
ದಿನದ ಮತ್ತೊಂದು ಪಂದ್ಯದಲ್ಲಿ ಯು.ಪಿ. ಯೋಧಾಸ್ ತಂಡವು 35–32 ಅಂತರದಿಂದು ಯು ಮುಂಬಾ ತಂಡವನ್ನು ಮಣಿಸಿತು. ದಿನದ ಮೂರನೇ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ತಂಡವು 33–18ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಸೋಲಿಸಿತು.
ಲೀಗ್ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಎಂಟು ಸ್ಥಾನ ಪಡೆದ ಪುಣೇರಿ ಪಲ್ಟನ್ (26 ಅಂಕ), ದಬಂಗ್ ಡೆಲ್ಲಿ (26), ಬುಲ್ಸ್ (22), ತೆಲುಗು ಟೈಟನ್ಸ್ (20), ಹರಿಯಾಣ ಸ್ಟೀಲರ್ಸ್ (20), ಯು ಮುಂಬಾ (20), ಪಟ್ನಾ ಪೈರೇಟ್ಸ್ (16), ಜೈಪುರ ಪಿಂಕ್ ಪ್ಯಾಂಥರ್ಸ್ (16) ಪ್ಲೇ ಆಫ್ ಹಂತ ಪ್ರವೇಶಿಸಿದವು. ಯು.ಪಿ. ಯೋಧಾಸ್ (14), ತಮಿಳು ತಲೈವಾಸ್ (12), ಗುಜರಾತ್ ಜೈಂಟ್ಸ್ (12) ಬೆಂಗಾಲ್ ವಾರಿಯರ್ಸ್ (12) ಟೂರ್ನಿಯಿಂದ ಹೊರಬಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.