ADVERTISEMENT

ಪ್ರೊ ಕಬಡ್ಡಿ ಲೀಗ್‌: ಜೈಂಟ್ಸ್‌ ಜೊತೆ ಟೈ ಮಾಡಿಕೊಂಡ ಪೈರೇಟ್ಸ್‌

ಅಗ್ರ ಎರಡರಲ್ಲಿ ಸ್ಥಾನ ಪಡೆದ ಪಟ್ನಾ ಕನಸಿಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2024, 0:23 IST
Last Updated 22 ಡಿಸೆಂಬರ್ 2024, 0:23 IST
ಗುಜರಾತ್ ಜೈಂಟ್ಸ್ ಆಟಗಾರರಿಗೆ ‘ಕ್ಯಾಚ್‌ ಆದ’ ಪಟ್ನಾ ಪೈರೇಟ್ಸ್ ಆಟಗಾರ.
ಗುಜರಾತ್ ಜೈಂಟ್ಸ್ ಆಟಗಾರರಿಗೆ ‘ಕ್ಯಾಚ್‌ ಆದ’ ಪಟ್ನಾ ಪೈರೇಟ್ಸ್ ಆಟಗಾರ.   

ಪುಣೆ: ತೀವ್ರ ಹಣಾಹಣಿ ಕಂಡ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ ತಂಡ ಶನಿವಾರ ಗುಜರಾತ್ ಜೈಂಟ್ಸ್‌ ಜೊತೆ 40–40ರಲ್ಲಿ ಟೈ ಮಾಡಿಕೊಳ್ಳಬೇಕಾಯಿತು. ಹೀಗಾಗಿ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೊದಲ ಎರಡರಲ್ಲಿ ಸ್ಥಾನ ಪಡೆಯುವ ಪಟ್ನಾ ಕನಸಿಗೆ ‍ಹಿನ್ನಡೆಯಾಗಿದೆ.

ಬಾಲೇವಾಡಿ ಕ್ರೀಡಾ ಕಾಂಪ್ಲೆಕ್ಸ್‌ನ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ನಡೆದ ಪಂದ್ಯದಲ್ಲಿ ವಿರಾಮದ ವೇಳೆ ಗುಜರಾತ್ ತಂಡ 22–18 ಅಂಕಗಳಿಂದ ಮುಂದಿತ್ತು.

ಪಟ್ನಾ ತಂಡಕ್ಕೆ ದೇವಾಂಕ್ 10 ಅಂಕ ಗಳಿಸಿದರೆ, ಸುಧಾಕರ್ 7 ಅಂಕ ಕಲೆಹಾಕಿದರು. ಗುಜರಾತ್ ತಂಡದ ಪರ ರಾಕೇಶ್‌ 9 ಅಂಕಗಳೊಡನೆ ಟಾಪ್‌ ಸ್ಕೋರರ್‌ ಎನಿಸಿದರು. ಅನುಭವಿ ಗುಮನ್ ಸಿಂಗ್ ಮತ್ತು ಜಿತೇಂದರ್ ತಲಾ ಎಂಟು ಅಂಕ ಗಳಿಸಿದರು.

ADVERTISEMENT

ಪಟ್ನಾ ತನ್ನ ಎಲ್ಲಾ (22) ಪಂದ್ಯಗಳನ್ನು ಆಡಿದ್ದು 77 ಪಾಯಿಂಟ್‌ಗಳೊಡನೆ ಲೀಗ್ ವ್ಯವಹಾರ ಮುಗಿಸಿತು. ಅದು ಸದ್ಯ ಎರಡನೇ ಸ್ಥಾನದಲ್ಲಿದೆ. ಆದರೆ ಮೂರನೇ ಸ್ಥಾನದಲ್ಲಿರುವ ದಬಾಂಗ್ ಡೆಲ್ಲಿ ಮತ್ತು ನಾಲ್ಕನೇ ಸ್ಥಾನದಲ್ಲಿರುವ ಯುಪಿ ಯೋಧಾಸ್ ತಂಡಗಳಿಗೆ ಒಂದೊಂದು ಪಂದ್ಯ ಆಡಲು ಉಳಿದಿದೆ.

ಲೀಗ್ ಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿರುವ ಜೈಂಟ್ಸ್‌ಗೆ ಇದು ಮೂರನೇ ಟೈ. ಅದು 21 ಪಂದ್ಯಗಳಿಂದ 38 ಪಾಯಿಂಟ್ಸ್ ಸಂಗ್ರಹಿಸಿದೆ.

ದಿನದ ಎರಡನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆ.ಸಿ. ತಂಡ 33–31 ಪಾಯಿಂಟ್‌ಗಳಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್ ತಂಡವನ್ನು ಸೋಲಿಸಿತು.

ಭಾನುವಾರದ ಪಂದ್ಯಗಳು

  • ತಮಿಳ್ ತಲೈವಾಸ್‌– ಬೆಂಗಳೂರು ಬುಲ್ಸ್ (ರಾತ್ರಿ 8)

  • ಹರಿಯಾಣ ಸ್ಟೀಲರ್ಸ್– ಯು ಮುಂಬಾ (ರಾತ್ರಿ 9)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.