ತೆಲುಗು ಟೈಟನ್ಸ್ ತಂಡದ ನಾಯಕ ಭರತ್ ಹೂಡಾ
ವಿಶಾಖಪಟ್ಟಣ: ತೆಲುಗು ಟೈಟನ್ಸ್, ಗುರುವಾರ 37–32 ಪಾಯಿಂಟ್‌ಗಳಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 5 ಪಾಯಿಂಟ್‌ಗಳಿಂದ ಸೋಲಿಸಿ ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯಲ್ಲಿ ಮೊದಲ ಗೆಲುವನ್ನು ದಾಖಲಿಸಿತು.
ಟೈಟನ್ಸ್ ಮೊದಲ ಎರಡು ಪಂದ್ಯಗಳಲ್ಲಿ ಸೋತಿತ್ತು.
ನಾಯಕ ವಿಜಯ್ ಮಲಿಕ್ ಮತ್ತು ರೇಡರ್ ಭರತ್ ಹೂಡಾ ತಲಾ ಎಂಟು ಪಾಯಿಂಟ್ಸ್ ಕಲೆಹಾಕಿದರೆ, ಅಜಿತ್ ಪವಾರ್ ಹೈಫೈವ್ ಗಳಿಸಿದರು. ಇದರಿಂದ ಟೈಟನ್ಸ್ ತಂಡ ಗೆದ್ದು ಎರಡು ಪಾಯಿಂಟ್ಸ್ ಸಂಪಾದಿಸಿತು. ಪಿಂಕ್ ಪ್ಯಾಂಥರ್ಸ್ ತಂಡಕ್ಕೆ ನಿತಿನ್ ಕುಮಾರ ಧನಕರ್ ಅವರ 13 ಪಾಯಿಂಟ್‌ಗಳ ಅಮೋಘ ಆಟ ಫಲ ನೀಡಲಿಲ್ಲ.
ಟೈಟನ್ಸ್ ತಂಡ ಆರಂಭದ ಕೆಲ ನಿಮಿಷ ರಕ್ಷಣೆ ಆಟವಾಡಿತು. ಎದುರಾಳಿ ರೇಡರ್‌ಗಳಿಗೆ ಹೆಚ್ಚಿನ ಅವಕಾಶ ನೀಡದೇ 7–5 ಮುನ್ನಡೆ ಪಡೆಯಿತು. ಹೂಡಾ ಯಶಸ್ವಿ ರೇಡ್‌ಗಳನ್ನು ನಡೆಸಿ ತಂಡಕ್ಕೆ ಮೇಲುಗೈ ಒದಗಿಸಿಕೊಟ್ಟರು.
ಪ್ಯಾಂಥರ್ಸ್ ಕ್ರಮೇಣ ಚೇತರಿಸಿಕೊಂಡಿತು. ರಾವಲ್ ಅವರ ಸೂಪರ್ ಟ್ಯಾಕಲ್‌ನಲ್ಲಿ ಹೂಡಾ ಅವರನ್ನು ಕ್ಯಾಚ್ ಮಾಡಿದರು. ಇಷ್ಟಾದರೂ ತೆಲುಗು ಟೈಟನ್ಸ್ ವಿರಾಮದ ವೇಳೆಗೆ 16–9 ಮುನ್ನಡೆ ಕಟ್ಟಿಕೊಂಡಿತು.
ಉತ್ತರಾರ್ಧದಲ್ಲಿ ಪ್ಯಾಂಥರ್ಸ್ ಪ್ರತಿಹೋರಾಟಕ್ಕೆ ಯತ್ನಿಸಿತು. ನಿತಿನ್ ಧನಕರ್ ಅವರ ರೇಡ್‌ಗಳಿಂದಾಗಿ ಎರಡು ಬಾರಿಯ ಚಾಂಪಿಯನ್ ತಂಡ ಟೈಟನ್ಸ್‌ಗೆ ಆತಂಕ ಮೂಡಿಸಿತು. ಅಂತಿಮ ಕ್ವಾರ್ಟರ್‌ನಲ್ಲಿ ನಿತಿನ್ ಸೂಪರ್ ರೇಡ್ ನಡೆಸಿದರು. ಇದರಿಂದ ಟೈಟನ್ಸ್ ಮುನ್ನಡೆ ಒಂದು ಪಾಯಿಂಟ್‌ಗೆ ಇಳಿದಿತ್ತು. ಆದರೆ ಏಕಾಂಗಿಯಾಗಿ ಉಳಿದ ಹೂಡಾ ಸೂಪರ್ ರೇಡ್ ಮೂಲಕ ತಿರುಗೇಟು ನೀಡಿದರು. ಬೋನಸ್ ಪಾಯಿಂಟ್ ಸಹ ಪಡೆದರು. ಕೊನೆಯ ಹಂತದಲ್ಲಿ ವಿಜಯ್ ಅವರ ಸೂಪರ್ ರೇಡ್, ಟೈಟನ್ಸ್‌ಗೆ ಮೊದಲ ಗೆಲುವು ಖಾತರಿಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.