ADVERTISEMENT

Pro Kabaddi League | ಅಜಿತ್, ಅನಿಲ್ ಅಮೋಘ ಆಟ: ಮುಂಬಾಗೆ ಮಣಿದ ತಲೈವಾಸ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
ತಮಿಳ್ ತಲೈವಾಸ್ ಮತ್ತು ಯು ಮುಂಬಾ ತಂಡಗಳ ಸೆಣಸಾಟ 
ತಮಿಳ್ ತಲೈವಾಸ್ ಮತ್ತು ಯು ಮುಂಬಾ ತಂಡಗಳ ಸೆಣಸಾಟ    

ವಿಶಾಖಪಟ್ಟಣ: ಅಜಿತ್ ಚೌಹಾಣ್ ಸಂಘಟಿಸಿದ ಚುರುಕಾದ ದಾಳಿ ಮತ್ತು ಆಲ್‌ರೌಂಡರ್ ಅನಿಲ್ ಅವರ ಆಟದ ಬಲದಿಂದ ಯು ಮುಂಬಾ ತಂಡವು ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ತಮಿಳ್ ತಲೈವಾಸ್ ಎದುರು ರೋಚಕ ಜಯ ದಾಖಲಿಸಿತು. 

ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್ ಒಳಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮುಂಬಾ ತಂಡವು 36–33ರಿಂದ ತಲೈವಾಸ್ ಸವಾಲನ್ನು ಮೀರಿ ನಿಂತಿತು. 

ಪಂದ್ಯದ ಮೊದಲಾರ್ಧದಲ್ಲಿ ತಲೈವಾಸ್ ತಂಡವು 14–11ರಿಂದ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ  ಉಭಯ ತಂಡಗಳ ಪೈಪೋಟಿ ತುರುಸಿನಿಂದ ಕೂಡಿತ್ತು. ಮುಂಬಾ ತಂಡದ ಆಟಗಾರರು ಯೋಜನಾಬದ್ಧ ಆಟದೊಂದಿಗೆ ಎಲ್ಲ ವಿಭಾಗಗಳಲ್ಲಿಯೂ ಮುನ್ನಡೆ ಸಾಧಿಸಿದರು. ಈ ಹಂತದಲ್ಲಿ ಮುಂಬಾ ತಂಡವು 25 ಅಂಕ ಮತ್ತು ತಮಿಳ್ ತಂಡವು 19 ಅಂಕ ಗಳಿಸಿದವು. ಉಭಯ ತಂಡಗಳು ತಲಾ 2 ಆಲ್‌ಔಟ್ ಪಾಯಿಂಟ್ಸ್ ಗಳಿಸಿದವು. 

ADVERTISEMENT

ಮುಂಬಾ ತಂಡದ ಅಜಿತ್ ಚೌಹಾಣ್ ಅವರು ಪ್ರೊ ಕಬಡ್ಡಿಯಲ್ಲಿ ಒಟ್ಟು 200 ರೇಡಿಂಗ್ ಪಾಯಿಂಟ್ ಗಳಿಸಿದ ಸಾಧನೆ ಮಾಡಿದರು. ಮುಂಬಾ ತಂಡದ ಡಿಫೆಂಡರ್ಸ್‌ ರಿಂಕು ಹಾಗೂ ಲೋಕೇಶ್ ಗೋಸಲಿಯಾ ಅವರು ತಲಾ ನಾಲ್ಕು ಅಂಕ ಗಳಿಸಿದರು. 

ತಲೈವಾಸ್ ತಂಡದ ಅರ್ಜುನ್ ದೇಶ್ವಾಲ್ ಅವರು ಅಮೋಘ ದಾಳಿ ಸಂಘಟಿಸಿ 12 ಅಂಕಗಳನ್ನು ಸೂರೆ ಮಾಡಿದರು. ನಾಯಕ ಮತ್ತು ಸ್ಟಾರ್ ಆಟಗಾರ ಪವನ್ ಶೆರಾವತ್ ಅವರು ಆಲ್‌ರೌಂಡ್ ಆಟದ ಮೂಲಕ 7 ಅಂಕಗಳ ಕಾಣಿಕೆಯನ್ನು ತಂಡಕ್ಕೆ ನೀಡಿದರು. ರಕ್ಷಣಾ ವಿಭಾಗದಲ್ಲಿ ನಿತೀಶ್ ಕುಮಾರ್ ಮತ್ತು ಹಿಮಾಂಶು ಅವರು ತಲಾ ನಾಲ್ಕು ಅಂಕ ಗಳಿಸಿದರು. 

ಬೆಂಗಾಲ್‌ ವಾರಿಯರ್ಸ್‌ಗೆ ಜಯ

ನಾಯಕ ದೇವಾಂಕ್ ದಲಾಲ್ ಹಾಗೂ ರೇಡರ್‌ ಮನ್‌ಪ್ರೀತ್‌ ಅವರ ಆಟದ ಬಲದಿಂದ ಬೆಂಗಾಲ್‌ ವಾರಿಯರ್ಸ್‌ ತಂಡವು 54–44ರಿಂದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಸುಲಭವಾಗಿ ಮಣಿಸಿತು.

ಮೊದಲಾರ್ಧದಲ್ಲಿ 23–19ರಿಂದ ಅಲ್ಪ ಮುನ್ನಡೆ ಸಾಧಿಸಿದ್ದ ಬೆಂಗಾಲ್‌ ತಂಡವು, ದ್ವಿತೀಯಾರ್ಧದಲ್ಲಿ ಪಾರಮ್ಯ ಮೆರೆಯಿತು. ದಲಾಲ್‌ 21 ಅಂಕಗಳನ್ನು ದೋಚಿದರೆ, ಮನ್‌ಪ್ರೀತ್‌ 13 ರೇಡಿಂಗ್‌ ಪಾಯಿಂಟ್ಸ್‌ ಗಳಿಸಿದರು. ಹಾಲಿ ಚಾಂಪಿಯನ್‌ ಹರಿಯಾಣ ತಂಡದ ಶಿವಂ ಪಟಾರೆ 17 ಹಾಗೂ ವಿನಯ್‌ 13 ಅಂಕ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.